ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳೆಯರಿಗೆ ಕಿರುಕುಳ, ಕಳವು, ಸೊತ್ತು ನಾಶ...ಕೋಲ್ಕತಾ ಸಾಮೂಹಿಕ ಅತ್ಯಾಚಾರ ಆರೋಪಿ ಮೊನೊಜಿತ್ ಮಿಶ್ರಾನ ಭಯಾನಕ ಇತಿಹಾಸ ಒಂದೆರಡಲ್ಲ

Kolkata Law College Horror: ದೇಶವನ್ನೇ ಬೆಚ್ಚಿ ಬೀಳಿಸಿದ ಕೋಲ್ಕತಾ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಟಿಎಂಸಿ ನಾಯಕ ಮೊನೊಜಿತ್ ಮಿಶ್ರಾ ಈ ಹಿಂದೆ ಹಲವು ಅಪರಾದ ಕೃತ್ಯ ಎಸಗಿದ್ದ ಎನ್ನುವ ವಿಚಾರ ಇದೀಗ ಬೆಲಕಿಗೆ ಬಂದಿದೆ.

ಕೋಲ್ಕತಾ ಅತ್ಯಾಚಾರ ಆರೋಪಿ ಮೊನೊಜಿತ್ ಮಿಶ್ರಾನ ಭಯಾನಕ ಕೃತ್ಯ ಬೆಳಕಿಗೆ

ಮೊನೊಜಿತ್ ಮಿಶ್ರಾ. -

Ramesh Ballamoole
Ramesh Ballamoole Jun 29, 2025 5:53 PM

ಕೋಲ್ಕತಾ: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದ 24 ವರ್ಷದ ಕಾನೂನು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದೆ (Kolkata Law College Horror). ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಇದೀಗ ಪ್ರಮುಖ ಆರೋಪಿ, ಟಿಎಂಸಿ ನಾಯಕ ಮೊನೊಜಿತ್ ಮಿಶ್ರಾ (Monojit Mishra) ಈ ಹಿಂದೆಯೂ ಎಸಗಿರುವ ಒಂದೊಂದೇ ಅಪರಾಧ ಕೃತ್ಯಗಳು ಹೊರಬರುತ್ತಿವೆ. ʼʼದಕ್ಷಿಣ ಕೋಲ್ಕತಾದ ಕಾನೂನು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಮೊನೊಜಿತ್ ಮಿಶ್ರಾ ಈ ಹಿಂದೆಯೂ ಹಲವು ಅಪರಾಧ ಕೃತ್ಯ ಎಸಗಿದ್ದʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಮೊನೊಜಿತ್ ಮಿಶ್ರಾನ ವಿರುದ್ಧ ಈ ಮೊದಲು ಮಹಿಳೆಯರ ಮೇಲಿನ ಕಿರುಕುಳ, ಹಲ್ಲೆ, ವಿಧ್ವಂಸಕ ಕೃತ್ಯ ಮತ್ತು ಕಳ್ಳತನ ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ.

ಮೋನೋಜಿತ್ ಮಿಶ್ರಾ ವಿರುದ್ಧ ಕೋಲ್ಕತಾದ ಕಾಳಿಘಾಟ್, ಕಸ್ಬಾ, ಅಲಿಪೋರ್, ಹರಿದೇವ್‌ಪುರ ಮತ್ತು ಟೋಲಿಗಂಜ್ ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳಿವೆ. 31 ವರ್ಷದ ಮಿಶ್ರಾ ಅಲಿಪೋರ್ ನ್ಯಾಯಾಲಯದಲ್ಲಿ ಕ್ರಿಮಿನಲ್ ವಕೀಲನಾಗಿ ಅಭ್ಯಾಸ ಮಾಡಿದ್ದಾನೆ. ಅಲ್ಲದೆ ಘಟನೆ ನಡೆದ ಕಾನೂನು ಕಾಲೇಜಿನಲ್ಲಿ ಟಿಎಂಸಿ ವಿದ್ಯಾರ್ಥಿ ವಿಭಾಗದ ಮಾಜಿ ಮುಖ್ಯಸ್ಥನಾಗಿದ್ದ. ಈತ 4 ವರ್ಷಗಳ ಹಿಂದೆ ಈ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ. ಅದಾಗ್ಯೂ ಈಗಲೂ ಕಾಲೇಜಿನಲ್ಲೇ ಇರುತ್ತಿದ್ದ.



ಈ ಸುದ್ದಿಯನ್ನೂ ಓದಿ: ಕೋಲ್ಕಾತಾದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ; ಕಾನೂನು ಕಾಲೇಜಿನಲ್ಲಿ ನಡೆಯಿತು ಹೀನ ಕೃತ್ಯ; ಆ ಕರಾಳ ಬುಧವಾರ ರಾತ್ರಿ ನಡೆದಿದ್ದೇನು?

ಮೊನೊಜಿತ್ ಮಿಶ್ರಾ ವಿರುದ್ಧ ದಾಖಲಾದ ಪ್ರಕರಣಗಳು

ಪೊಲೀಸ್ ದಾಖಲೆಗಳನ್ನು ಉಲ್ಲೇಖಿಸಿ, ದಿ ಟೆಲಿಗ್ರಾಫ್ ವರದಿಯು, 2019ರಲ್ಲಿ ಮಿಶ್ರಾ ದಕ್ಷಿಣ ಕೋಲ್ಕತಾ ಕಾನೂನು ಕಾಲೇಜಿನೊಳಗೆ ಮಹಿಳೆಯೊಬ್ಬರ ಬಟ್ಟೆಗಳನ್ನು ಹರಿದು ಹಾಕಿದ್ದ. ಈ ಬಗ್ಗೆ ಆರೋಪಪಟ್ಟಿಯೂ ಸಲ್ಲಿಕೆಯಾಗಿದೆ ಎಂದು ತಿಳಿಸಿದೆ. 2020ರ ಹೊಸ ವರ್ಷದ ಮುನ್ನಾದಿನ ಹರಿದೇವ್‌ಪುರದ ಸ್ನೇಹಿತನ ಮನೆಯಿಂದ ಚಿನ್ನದ ಸರ, ಸುಗಂಧ ದ್ರವ್ಯ, ಮ್ಯೂಸಿಕ್‌ ಸಿಸ್ಟಂ ಮತ್ತು ಕನ್ನಡಕವನ್ನು ಕದ್ದ ಆರೋಪವೂ ಈತನ ಮೇಲಿದೆ. ಆ ಪ್ರಕರಣದ ಎಫ್‌ಐಆರ್ ಅನ್ನು 2020ರ ಜನವರಿ ಮೊದಲ ವಾರ ದಾಖಲಿಸಲಾಗಿದೆ.

2022ರ ಮಾರ್ಚ್‌ನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಬಗ್ಗೆ ಕಸ್ಬಾದಲ್ಲಿ ದೂರು ದಾಖಲಾಗಿತ್ತು. ಅಲ್ಲದೆ 2024ರ ಮೇಯಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಮತ್ತು ಕಾಲೇಜಿನ ಸೊತ್ತು ನಾಶಪಡಿಸಿದ ಬಗ್ಗೆಯೂ ಮಿಶ್ರಾ ವಿರುದ್ಧ ದೂರು ದಾಖಲಾಗಿತ್ತು. ಇನ್ನು ಈತ 2017ರಲ್ಲಿ ಕಾನೂನಿನ ಕಾಲೇಜಿನ ಪ್ರಾಂಶುಪಾಲರ ಕೊಠಡಿಯನ್ನು ನಾಶಪಡಿಸಿದ್ದ ಎಂದು ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಜೂ. 25ರಂದು ಏನಾಯ್ತು?

ಪರೀಕ್ಷೆಯ ಫಾರಂ ಭರ್ತಿ ಮಾಡಲು ಸಂತ್ರಸ್ತೆ ಜೂ. 25ರಂದು ದಕ್ಷಿಣ ಕೋಲ್ಕತಾದ ಕಾನೂನು ಕಾಲೇಜಿಗೆ ಬಂದಿದ್ದರು. ಈ ವೇಳೆ ಮಿಶ್ರಾ ಮತ್ತು ಆತನ ಸ್ನೇಹಿತರು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮಿಶ್ರಾ ತನ್ನನ್ನು ಮದುವೆಯಾಗುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದ ಮತ್ತು ಆಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯ ಪ್ರಿಯಕರನನ್ನು ಕೊಲ್ಲುವುದಾಗಿ ಮತ್ತು ಪೋಷಕರನ್ನು ಸುಳ್ಳು ಆರೋಪಗಳ ಅಡಿಯಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.