ನಕಲಿ ದಾಖಲೆ ಬಳಸಿ 30 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಶಿಕ್ಷಕಿಯಾಗಿದ್ದ ಪಾಕಿಸ್ತಾನಿ ಮಹಿಳೆ; ಸಿಕ್ಕಿಬಿದ್ದಿದ್ದು ಹೇಗೆ?
ನಕಲಿ ದಾಖಲೆ ಬಳಸಿ ಪಾಕಿಸ್ತಾನಿ ಮಹಿಳೆಯೊಬ್ಬರು ಉತ್ತರಪ್ರದೇಶದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ. ಶಿಕ್ಷಕಿಯನ್ನು ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನಿ ರಾಷ್ಟ್ರೀಯತೆಯನ್ನು ಮರೆಮಾಡಿದ್ದಕ್ಕಾಗಿ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
(ಸಂಗ್ರಹ ಚಿತ್ರ) -
ಉತ್ತರಪ್ರದೇಶ: ಕಳೆದ ಮೂವತ್ತು ವರ್ಷಗಳಿಂದ ಶಿಕ್ಷಕಿಯಾಗಿದ್ದ (Teacher) ಮಹಿಳೆಯೊಬ್ಬರು ಪಾಕಿಸ್ತಾನ (pakistan women) ಮೂಲದವರು ಎಂದು ತಡವಾಗಿ ಬೆಳಕಿಗೆ ಬಂದಿದೆ. ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ಎಂಬ ಮಹಿಳೆ ಕಳೆದ ಮೂವರು ವರ್ಷಗಳಿಂದ ಉತ್ತರ ಪ್ರದೇಶದ (Uttar Pradesh) ರಾಂಪುರದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರಿ ಕೆಲಸ ಪಡೆಯಲು ಇವರು ನಕಲಿ ದಾಖಲೆಗಳನ್ನು (fake documents) ಬಳಸಿಕೊಂಡಿದ್ದಾರೆ. ರಾಷ್ಟ್ರೀಯತೆಯನ್ನು ಮರೆಮಾಡಿರುವುದಕ್ಕೆ ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ಅವರು ಸುಮಾರು 30 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದು ಉತ್ತರ ಪ್ರದೇಶದ ರಾಂಪುರದಲ್ಲಿ ನೆಲೆಸಿದರು. ಬಳಿಕ ಸ್ಥಳೀಯ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದಾರೆ. ಅನಂತರ ನಕಲಿ ದಾಖಲೆಗಳನ್ನು ಬಳಸಿ ಸರ್ಕಾರಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದಾರೆ ಎನ್ನಲಾಗಿದೆ.
ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತೀಯರಿಗೆ ವೀಸಾ ಸೇವೆ ನಿರ್ಬಂಧಿಸಿದ ಬಾಂಗ್ಲಾದೇಶ
ಕೆಲಸಕ್ಕೆ ಸೇರುವಾಗ ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ಅವರು ತಮ್ಮ ಪಾಕಿಸ್ತಾನಿ ರಾಷ್ಟ್ರೀಯತೆಯನ್ನು ಮರೆಮಾಡಿದ್ದಾರೆ. ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಆಂತರಿಕ ವಿಚಾರಣೆಯಲ್ಲಿ ಮೂಲಭೂತ ಶಿಕ್ಷಣ ಇಲಾಖೆ ನೀಡಿದ ದೂರಿನ ಮೇರೆಗೆ ಅಜೀಮ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸಿಂಗ್, ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ಅವರು ಮೊದಲು ಕುಮ್ಹರಿಯಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ಇವರ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಬಳಸಿರುವ ಆರೋಪವಿದೆ. ಪಾಕಿಸ್ತಾನಿ ಪ್ರಜೆಯಾಗಿದ್ದರೂ ನಕಲಿ ನಿವಾಸ ಪ್ರಮಾಣ ಪತ್ರವನ್ನು ಬಳಸಿಕೊಂಡು ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ದಾಖಲೆಗಳ ಪ್ರಕಾರ ಪಾಕಿಸ್ತಾನಿ ಪೌರತ್ವವನ್ನು ಹೊಂದಿರುವ ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ಅವರು 1979 ರಲ್ಲಿ ಪಾಕಿಸ್ತಾನಿ ಪ್ರಜೆಯನ್ನು ವಿವಾಹವಾಗಿದ್ದು ಬಳಿಕ ವಿಚ್ಛೇದನ ಪಡೆದು ಪಾಕಿಸ್ತಾನಿ ಪಾಸ್‌ಪೋರ್ಟ್‌ನಲ್ಲಿ ಭಾರತಕ್ಕೆ ಬಂದಿದ್ದರು.
1985ರಲ್ಲಿ ಇಲ್ಲಿನ ಒಬ್ಬ ಸ್ಥಳೀಯ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಬಳಿಕ ಇವರು ತಾವು ಭಾರತೀಯ ಪ್ರಜೆ ಎಂದು ಹೇಳಿಕೊಂಡು ಶಿಕ್ಷಕ ಉದ್ಯೋಗವನ್ನು ಪಡೆದರು. ಇದೀಗ ಅವರು ಪಾಕಿಸ್ತಾನ ಪೌರತ್ವ ಹೊಂದಿರುವುದು ತಿಳಿದು ಬಂದ ಬಳಿಕ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಸದ್ಯಕ್ಕೆ ಅವರನ್ನು ಬಂಧಿಸಲಾಗಿಲ್ಲ. ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ.