ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Byrathi Basavaraj: ಬಿಕ್ಲು ಶಿವ ಹತ್ಯೆ ಕೇಸ್‌ನಲ್ಲಿ ಬೈರತಿ ಬಸವರಾಜ್‌ಗೆ ಸಂಕಷ್ಟ, ಬಂಧನ ಭೀತಿ

Biklu Shiva: ಶಾಸಕ ಬೈರತಿ ಬಸವರಾಜ್‌ಗೆ ರಕ್ಷಣೆ ನೀಡಿದ ಆದೇಶ ತೆರವು ಕೋರಿ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆಯ ವೇಳೆ ಬೈರತಿ ಬಸವರಾಜ್ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಹಲವು ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಈಗ ಬೈರತಿ ಬಸವರಾಜರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ವಾದಿಸಲಾಗಿದೆ.

ಬಿಕ್ಲು ಶಿವ ಹತ್ಯೆ ಕೇಸ್‌ನಲ್ಲಿ ಬೈರತಿ ಬಸವರಾಜ್‌ಗೆ ಸಂಕಷ್ಟ, ಬಂಧನ ಭೀತಿ

ಬೈರತಿ ಬಸವರಾಜ್ -

ಹರೀಶ್‌ ಕೇರ ಹರೀಶ್‌ ಕೇರ Sep 24, 2025 1:14 PM

ಬೆಂಗಳೂರು: ಕಳೆದ ತಿಂಗಳು ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವನನ್ನ (Rowdy Sheeter Biklu Shiva murder case) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್‌ (Byrathi Basavaraj) ಅವರಿಗೆ ಸಂಕಷ್ಟ ಎದುರಾಗಿದೆ. ಬೈರತಿ ಬಸವರಾಜ್ ಬಂಧನದ ಅಗತ್ಯವಿದೆ ಎಂದು ಪೊಲೀಸರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಶಾಸಕ ಬೈರತಿ ಬಸವರಾಜ್‌ಗೆ ರಕ್ಷಣೆ ನೀಡಿದ ಆದೇಶ ತೆರವು ಕೋರಿ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆಯ ವೇಳೆ ಬೈರತಿ ಬಸವರಾಜ್ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಹಲವು ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಈಗ ಬೈರತಿ ಬಸವರಾಜರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಪ್ರಾಜಿಕ್ಯೂಷನ್ ಪರವಾಗಿ ಎಸ್‍ಪಿಪಿ ಬಿ.ಎನ್ ಜಗದೀಶ್ ವಾದ ಮಂಡಿಸಿದರು.

ಈ ವೇಳೆ ಸಿಐಡಿ ಪೋಲೀಸರ ಅರ್ಜಿಗೆ ಬೈರತಿ ಬಸವರಾಜ್ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು ಕಳೆದ ಒಂದು ತಿಂಗಳಿನಿಂದ ವಿಚಾರಣೆಗೆ ಕರೆದಿಲ್ಲ. ಈ ಹಿಂದೆ ಪೊಲೀಸರು ಕರೆದಾಗಲೆಲ್ಲ ವಿಚಾರಣೆಗೆ ಬೈರತಿ ಬಸವರಾಜ್ ಸಹಕರಿಸಿದ್ದಾರೆ. ಈಗ ಬಂಧನದ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿದರು.

ರಾಜಕೀಯ ದೃಷ್ಟಿಯಿಂದ ಕಿರುಕುಳ ನೀಡಬಾರದು. ಎಷ್ಟು ದಿನಗಳ ಕಾಲ ಕಸ್ಟಡಿಗೆ ಬೇಕು ಎಂದು ಕೋರ್ಟಿಗೆ ತಿಳಿಸಿ ಎಂದು ಸರ್ಕಾರದ ಪರ ವಕೀಲ ಬಿ.ಎನ್ ಜಗದೀಶ್ ಅವರಿಗೆ ನ್ಯಾ.ಎಂ.ಐ ಅರುಣ್ ಅವರಿದ್ದ ಹೈಕೋರ್ಟ್ ಪೀಠ ತಿಳಿಸಿತು. ಅಕ್ಟೋಬರ್ 8ರ ಒಳಗೆ ಅಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ ನೀಡಿತು.

ಜುಲೈ 15ರಂದು ರಾತ್ರಿ ಹಲಸೂರಿನ ಮನೆ ಬಳಿಯೇ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಬಿಕ್ಲು ಶಿವ ತಾಯಿ ನೀಡಿದ ದೂರಿನ ಆಧಾರದ ಮೇಲೆ ಭಾರತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಜಗದೀಶ್‌ ಪರಾರಿಯಾಗಿದ್ದ. ಬಂಧನ ಭೀತಿಯಲ್ಲಿ ರಾತ್ರೋರಾತ್ರಿ ದೇಶ ಬಿಟ್ಟು ಪರಾರಿಯಾಗಿದ್ದ ಜಗದೀಶ್‌ನ ಪತ್ತೆಗೆ ಸಿಐಡಿ ಅಧಿಕಾರಿಗಳು ಇಂಟರ್‌ಪೋಲ್‌ ಮೂಲಕ ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿದ್ದರು.

ದುಬೈ, ಥಾಯ್ಲೆಂಡ್‌, ಇಂಡೋನೇಷ್ಯಾ, ಶ್ರೀಲಂಕಾ ಸೇರಿದಂತೆ ದೇಶದಿಂದ ದೇಶಕ್ಕೆ ವಾಸ್ತವ್ಯ ಬದಲಿಸುತ್ತಿದ್ದ ಜಗದೀಶ್‌ ಅಂತಿಮವಾಗಿ ದೆಹಲಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ. ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿ ಎಂದು ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ್ ಅವರನ್ನು ಎರಡು ಬಾರಿ ವಿಚಾರಣೆಗೊಳಪಡಿಸಲಾಗಿದೆ.

ಇದನ್ನೂ ಓದಿ: Biklu Shiva murder case: ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್‌ಗೆ ಕೊಂಚ ರಿಲೀಫ್‌