ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್; ಟಾರ್ಚ್ ಬೆಳಕಿನಲ್ಲಿ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ
ಬಿಹಾರ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿಆಸ್ಪತ್ರೆ ಸಿಬ್ಬಂದಿ ಮೊಬೈಲ್ ಟಾರ್ಚ್ ಹಿಡಿದು ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ನಡೆದಿದೆ. ಸುಮಾರು 45 ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಗರ್ಭಿಣಿಯರಿಗೆ ಟಾರ್ಚ್ ಮತ್ತು ಮೊಬೈಲ್ ಫೋನ್ ಫ್ಲ್ಯಾಶ್‌ಲೈಟ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಬಿಹಾರ: ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಮೊಬೈಲ್ ಟಾರ್ಚ್ (Mobile tourch) ಬಳಸಿ ಗರ್ಭಿಣಿಯರಿಗೆ (Pregnant womens) ಶಸ್ತ್ರಚಿಕಿತ್ಸೆ ( surgery ) ನಡೆಸಿರುವ ಘಟನೆ ಬಿಹಾರದ ಆಸ್ಪತ್ರೆಯಲ್ಲಿ ನಡೆದಿದೆ. ಜಮುಯಿ ಸದರ್ ಆಸ್ಪತ್ರೆಯ (Bihar's Jamui Sadar Hospital) ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಸುಮಾರು 45 ನಿಮಿಷಗಳ ಕಾಲ ವಿದ್ಯುತ್ ಕಡಿತಗೊಂಡಿತ್ತು. ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ಇಬ್ಬರು ಗರ್ಭಿಣಿಯರಿಗೆ ಟಾರ್ಚ್, ಮೊಬೈಲ್ ಫೋನ್ ಫ್ಲ್ಯಾಶ್‌ಲೈಟ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಘಟನೆ ಶುಕ್ರವಾರ ನಡೆದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಬಿಹಾರದ ಜಮುಯಿ ಸದರ್ ಆಸ್ಪತ್ರೆಯಲ್ಲಿ ಪೂಜಾ ಕುಮಾರಿ ಮತ್ತು ಅಂಜನಿ ಕುಮಾರಿ ಎಂದು ಗುರುತಿಸಲಾದ ಇಬ್ಬರನ್ನು ಹೆರಿಗೆ ವಾರ್ಡ್‌ನಿಂದ ಶಸ್ತ್ರಚಿಕಿತ್ಸಾ ಕೊಠಡಿಗೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅದಾಗಲೇ ಅವರ ಶಸ್ತ್ರಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ತಕ್ಷಣವೇ ಜನರೇಟರ್, ಪರ್ಯಾಯ ವಿದ್ಯುತ್ ವ್ಯವಸ್ಥೆ ಒದಗಿಸಲು ವಿಫಲವಾದ್ದರಿಂದ ವೈದ್ಯಕೀಯ ತಂಡವು ಟಾರ್ಚ್ ಮತ್ತು ಮೊಬೈಲ್ ಫೋನ್ ಫ್ಲ್ಯಾಶ್‌ಲೈಟ್‌ಗಳನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆಯನ್ನು ಮುಂದುವರಿಸಿದೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಬಾಲಿವುಡ್ ಹಾಡು ಹಾಡಿದ ಮಲೇಷ್ಯಾ ಪ್ರಧಾನಿ; ವಿಡಿಯೊ ವೈರಲ್
ವೈದ್ಯರಾದ ಡಾ. ಶಾಲಿನಿ ಕುಮಾರಿ, ಡಾ. ರಘುನಂದನ್ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯ ಸಹಾಯಕ ಅಮಿತ್ ಕುಮಾರ್ ಅವರು ಈ ಕುರಿತು ಸಿವಿಲ್ ಸರ್ಜನ್ ಮತ್ತು ಆಸ್ಪತ್ರೆಯ ಅಧೀಕ್ಷಕರಿಗೆ ಮಾಹಿತಿ ನೀಡಿದ್ದಾರೆ.
ಮೊಬೈಲ್ ಫೋನ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ದೀರ್ಘಕಾಲದಿಂದ ವಿದ್ಯುತ್ ಇರಲಿಲ್ಲ ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂದು ವಿಡಿಯೊ ಚಿತ್ರೀಕರಿಸುತ್ತಿರುವ ವ್ಯಕ್ತಿ ಹೇಳುತ್ತಿರುವುದನ್ನು ಇದರಲ್ಲಿ ಕೇಳಬಹುದು.
ಶಸ್ತ್ರಚಿಕಿತ್ಸೆ ಮುಂದುವರಿಸಲು ವೈದ್ಯರಿಗೆ ಸಹಾಯವಾಗುವಂತೆ ನರ್ಸ್ ಒಬ್ಬರು ಮೊಬೈಲ್ ಫೋನ್ ಫ್ಲ್ಯಾಶ್‌ಲೈಟ್ ಅನ್ನು ಹಿಡಿದಿರುವುದನ್ನು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ಇಂತಹ ಘಟನೆ ಈ ಹಿಂದೆಯೂ ನಡೆದಿದೆ. ಈ ಕುರಿತು ವೈದ್ಯರು ಆಸ್ಪತ್ರೆಯ ಆಂತರಿಕ ಗುಂಪಿನಲ್ಲಿ ಕಳವಳ ವ್ಯಕ್ತಪಡಿಸಿದ್ದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವ್ಯವಸ್ಥಾಪಕ ರಮೇಶ್ ಪಾಂಡೆ ಅವರು, ಇದೊಂದು ಸುಳ್ಳು ಸುದ್ದಿ. ಅಂತಹ ಯಾವುದೇ ಘಟನೆ ಜಮುಯಿ ಸದರ್ ಆಸ್ಪತ್ರೆಯಲ್ಲಿ ನಡೆದಿಲ್ಲ ಎಂದು ಹೇಳಿ, ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆಸ್ಪತ್ರೆಯ ಉಪ ಅಧೀಕ್ಷಕ ಡಾ. ಥಾನೇಶ್ ಕುಮಾರ್ ಅವರು ಆಸ್ಪತ್ರೆಯಲ್ಲಾಗಿರುವ ಘಟನೆ ಬಗ್ಗೆ ಮಾಹಿತಿ ಸಿಕ್ಕಿದ್ದು, ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.