ಹೋಂವರ್ಕ್ ಮಾಡಿಲ್ಲವೆಂದು ಥಳಿಸಿದ ಶಿಕ್ಷಕಿ; ಮಡಿಲಲ್ಲೇ ಪ್ರಾಣಬಿಟ್ಟ 6 ವರ್ಷದ ಬಾಲಕ: ಕರುಳು ಹಿಂಡುವ ವಿಡಿಯೊ ವೈರಲ್
Visakhapatnam Horror: ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬಳು 6 ವರ್ಷದ ಬಾಲಕನಿಗೆ ಕೋಲಿನಿಂದ ಹೊಡೆದಿದ್ದು, ಆತ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ ಶಿಕ್ಷಕಿ ಬಾಲಕನಿಗೆ ಹೊಡೆಯುತ್ತಿರುವುದು ಕಂಡುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಲಿದೆ.
ಬಾಲಕನಿಗೆ ಥಳಿಸಿದ ಶಿಕ್ಷಕಿ ಮತ್ತು ಮೃತ ಬಾಲಕ -
ಅಮರಾವತಿ, ಆ. 20: ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಕೋಲಿನಿಂದ ಹೊಡೆದಿದಿದ್ದು, ಆರು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ (Visakhapatnam Horror) ನಡೆದಿದೆ. ಮೃತ ಬಾಲಕನನ್ನು ಪ್ರಣಯ್ ತೇಜ ಎಂದು ಗುರುತಿಸಲಾಗಿದೆ. ವಿಶಾಖಪಟ್ಟಣಂನ ಒನ್ ಟೌನ್ ಪ್ರದೇಶದಲ್ಲಿರುವ ಲಿಟಲ್ ಗಾರ್ಡನ್ ಶಾಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
ಕುಟುಂಬದ ಆರೋಪದ ಪ್ರಕಾರ, ಗುರುವಾರ ಬೆಳಗ್ಗೆ ಆರೋಗ್ಯವಾಗಿಯೇ ಶಾಲೆಗೆ ತೆರಳಿದ್ದ ಬಾಲಕನನ್ನು ಹೋಂವರ್ಕ್ ಪೂರ್ಣಗೊಳಿಸದ ಕಾರಣ ಶಿಕ್ಷಕಿ ಕೋಲಿನಿಂದ ಹೊಡೆದಿದ್ದಾಳೆ. ಬಳಿಕ ಬಾಲಕ ಶಿಕ್ಷಕಿಯ ಮಡಿಲಿಗೆ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಶಿಕ್ಷಕಿ ಬಾಲಕನಿಗೆ ಹೊಡೆಯುತ್ತಿರುವುದು ಹಾಗೂ ಕೆಲವೇ ಕ್ಷಣಗಳಲ್ಲಿ ಆತ ಕುಸಿದು ಬೀಳುತ್ತಿರುವುದು ಕಂಡುಬಂದಿದೆ.
ಬಾಲಕ ಮೃತಪಡುವ ದೃಶ್ಯ:
The teacher should be given severe punishement ...#APpolice #naralokesh
— Dr Srinubabu Gedela (@DrSrinubabu) August 20, 2026
The teacher abused and beaten a 6 year old kid in Visakhapatnam, the kid died on the spot. UKG student named Pranaya Teja collapsed and died after being beaten at Little Garden School in the One Town area… pic.twitter.com/v8wl1CPZEx
ಬಳಿಕ ಬಾಲಕನನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ (KGH) ಕರೆದೊಯ್ಯಲಾಗಿದ್ದು, ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆಸ್ಪತ್ರೆಗೆ ಕರೆತರುವ ಮುನ್ನವೇ ಬಾಲಕ ಮೃತಪಟ್ಟಿದ್ದ ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿರುವುದಾಗಿ ತಂದೆ ಹೇಳಿದ್ದಾರೆ. ಬಾಲಕನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಿಂದಿನ ರಾತ್ರಿ ಆತ ಸಂತೋಷದಿಂದ ಆಟವಾಡಿದ್ದ ಹಾಗೂ ಗುರುವಾರ ಬೆಳಗ್ಗೆ ಕೂಡ ಆರೋಗ್ಯವಾಗಿದ್ದ ಎಂದು ತಂದೆ ಹೇಳಿದ್ದಾರೆ.
ಶಾಲೆಯಿಂದ ನೇರವಾಗಿ ಕುಟುಂಬಕ್ಕೆ ಮಾಹಿತಿ ಸಿಗದೆ, ಸ್ಥಳೀಯರ ಮೂಲಕ ಘಟನೆ ತಿಳಿಯಿತು ಎಂದು ತಂದೆ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಾಲೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಶಿಕ್ಷಕಿ ಬಾಲಕನಿಗೆ ಕೋಲಿನಿಂದ ಹೊಡೆಯುತ್ತಿರುವುದು ಕಂಡುಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದಲ್ಲದೆ, ಶಾಲೆಯಲ್ಲಿ ಇತರ ಮಕ್ಕಳಿಗೂ ಇದೇ ರೀತಿಯಾಗಿ ದೈಹಿಕ ಶಿಕ್ಷೆ ನೀಡಲಾಗುತ್ತಿತ್ತು ಎಂಬ ಆರೋಪವನ್ನು ಕುಟುಂಬಸ್ಥರು ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಂದಾಯ ಅಧಿಕಾರಿಗಳೂ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣದ ನಿಖರ ಕಾರಣ ಪೋಸ್ಟ್‌ಮಾರ್ಟಂ ವರದಿಯ ಬಳಿಕ ಸ್ಪಷ್ಟವಾಗಲಿದೆ.