SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ; ಈ ವರ್ಷದಿಂದ ಹಿಂದಿ ಭಾಷೆ ಅಂಕಗಳಿಗೆ ಕೊಕ್!
ನಮ್ಮಲ್ಲಿ ಸದ್ಯಕ್ಕೆ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಆದರೆ ಹಿಂದಿ ಭಾಷೆಯ ಅಂಕಗಳನ್ನು ಫಲಿತಾಂಶದಲ್ಲಿ ಅಂಕಗಳ ಬದಲಿಗೆ ಗ್ರೇಡ್ ರೂಪದಲ್ಲಿ ನೀಡುವುದರಿಂದ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ವರ್ಷದಿಂದಲೇ ಈ ಎಲ್ಲಾ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ. -
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ (SSLC Exam) ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆಗೆ ಮುಂದಾಗಿದೆ. ಈ ವರ್ಷದಿಂದ ಹಿಂದಿ ಭಾಷೆಯ ಅಂಕಗಳಿಗೆ ಕೊಕ್ ನೀಡಲು ಸರ್ಕಾರ ನಿರ್ಧರಿಸಿದ್ದು, 625 ಅಂಕಗಳ ಬದಲು 525 ಅಂಕಗಳು ಮಾತ್ರ ಇರಲಿದೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವ ಮಧು ಬಂಗಾರಪ್ಪ ಅವರು, ಈ ಬಾರಿಯಿಂದ ಎಸ್‌ಎಸ್‌ಎಲ್‌ಸಿ 625ರ ಬದಲು 525 ಅಂಕಕ್ಕೆ ಸೀಮಿತವಾಗಲಿದೆ. ಹಿಂದಿ ಅಂಕಗಳನ್ನು ಪರಿಗಣಿಸಲ್ಲ. ಹಿಂದಿ ಪರೀಕ್ಷೆ ನಡೆಯಲಿದೆ, ಆದರೆ ಅಂಕ ಪರಿಗಣಿಸಲ್ಲ. ಹಿಂದಿ ವಿಷಯಕ್ಕೆ ಗ್ರೇಡ್ ಮಾತ್ರ ನೀಡಲಾಗುತ್ತದೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಎಂದರು.
ಇನ್ನು ಎಸ್‌ಎಸ್‌ಎಲ್‌ಸಿಗೆ ಮಾತ್ರ ಈ ಮಾದರಿ ಅನುಸರಿಸಲಾಗಿದ್ದು, ಉಳಿದ ತರಗತಿಗಳಿಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
'ಪಾಸ್ ವಿಥೌಟ್ ಹಿಂದಿ' ಜಾರಿ ಕುರಿತು ಚರ್ಚೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯ ಪರೀಕ್ಷೆ ರದ್ದು ಮಾಡಬೇಕು ಎಂದು ಕನ್ನಡಪರ ಸಂಘಟನೆಗಳಿಂದ ಆಗ್ರಹ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಿವಾಸದಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ʼಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಒಕ್ಕೂಟʼದ ಪ್ರತಿನಿಧಿಗಳು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿರಬೇಕು ಮತ್ತು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಮೇಲೆ ಅನ್ಯ ಭಾಷೆಯ ಹೇರಿಕೆ ಇರಬಾರದು ಎಂಬುದು ನಮ್ಮ ಸರ್ಕಾರದ ಸ್ಪಷ್ಟ ನಿಲುವಾಗಿದೆ. "ಪಾಸ್ ವಿಥೌಟ್ ಹಿಂದಿ" (Pass Without Hindi) ಶಾಲಾ ಹಂತದಲ್ಲಿ ಹಿಂದಿ ವಿಷಯದಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರಬಾರದು ಮತ್ತು ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಬಾರದು ಎಂಬ ಕಾನೂನು ಜಾರಿಗೊಳಿಸುವ ಕುರಿತು ಒಕ್ಕೂಟವು ಒತ್ತಾಯಿಸಿ, ಸಲ್ಲಿಸಿರುವ ಮನವಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಶಿಕ್ಷಣ ಇಲಾಖೆಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕನ್ನಡ ಪರ ಸಂಘಟನೆಗಳು ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಂತಿಯುತವಾಗಿ ಸಹಕರಿಸಬೇಕು ಎಂದು ಮನವಿ ಮಾಡಿದೆನು, ಇದಕ್ಕೆ ಹೋರಾಟಗಾರರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ನೆಲ, ನಮ್ಮ ಭಾಷೆ ಮತ್ತು ನಮ್ಮ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಅನ್ಯ ಭಾಷೆಯ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಕನ್ನಡ ಪರ ಹೋರಾಟಗಾರರಾದ ಸಾ.ರ ಗೋವಿಂದ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ, ರಾಧಾಕೃಷ್ಣ, ರಾಮಪ್ರಸಾದ್, ಪಾರ್ವತೀಶ್ ಸೇರಿ ಅನೇಕ ಪದಾಧಿಕಾರಿಗಳು ಹಾಜರಿದ್ದರು.