Delhi Election 2025 : ನೀತಿ ಸಂಹಿತೆ ಇದ್ದರೂ ತಡರಾತ್ರಿವರೆಗೆ ಚುನಾವಣಾ ಪ್ರಚಾರ; ಆಪ್ ಶಾಸಕನ ಮೇಲೆ ದಾಖಲಾಯಿತು ಎಫ್‌ಐಆರ್
ಓಖ್ಲಾದ ಹಾಲಿ ಶಾಸಕನಾಗಿರುವ ಅಮಾನತುಲ್ಲಾ ಖಾನ್ ಅವರು ಚುನಾವಣೆಗೆ ಒಂದು ದಿನ ಮೊದಲು ತಡರಾತ್ರಿ ವರೆಗೂ ಪ್ರಚಾರ ಮಾಡುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲು ಮಾಡಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ಇಂದು ವಿಧಾನಸಭೆ ಚುನಾವಣೆ (Delhi Election 2025) ನಡೆಯುತ್ತಿದೆ. ಚುನಾವಣೆಗೆ ಒಂದು ದಿನ ಮೊದಲು ತಡರಾತ್ರಿ ವರೆಗೂ ಪ್ರಚಾರ ಮಾಡುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಮಂಗಳವಾರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಮಾನತುಲ್ಲಾ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಓಖ್ಲಾದ ಹಾಲಿ ಶಾಸಕನಾಗಿರುವ ಅಮಾನತುಲ್ಲಾ ಖಾನ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 223 ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126 (ಚುನಾವಣಾ ಪ್ರಚಾರ ನಿಷೇಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
Delhi Police registers a case against AAP MLA and candidate from Okhla Vidhan Sabha, Amanatullah Khan at PS Jamia Nagar for violating MCC. In this matter, FIR No 95/25 u/s 223/3/5 BNS & 126 RP Act has been registered. pic.twitter.com/VciiQPxsaV
— ANI (@ANI) February 5, 2025
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ನೀತಿ ಸಂಹಿತೆ ಜಾರಿಗೆ ಬಂದ ಜನವರಿ 7 ರಿಂದ ಪ್ರಚಾರದ ಕೊನೆಯ ದಿನವಾದ ಫೆಬ್ರವರಿ 3 ರವರೆಗೆ ಅಧಿಕಾರಿಗಳು ಎಂಸಿಸಿ ಉಲ್ಲಂಘನೆಯ 1,076 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಚುನಾವಣಾ ಪೂರ್ವ ಕಾರ್ಯಾಚರಣೆಯಲ್ಲಿ, ದೆಹಲಿ ಪೊಲೀಸರು 469 ಅಕ್ರಮ ಬಂದೂಕುಗಳು ಮತ್ತು 513 ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದರೆ, ಶಸ್ತ್ರಾಸ್ತ್ರ ಕಾಯ್ದೆಯಡಿ 491 ಜನರನ್ನು ಬಂಧಿಸಿದ್ದಾರೆ.
ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಕನಸಿನಲ್ಲಿದ್ದರೆ, 27 ವರ್ಷಗಳ ಬಳಿಕ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿ ಬಿಜೆಪಿ ಹಾಗೂ 10 ವರ್ಷಗಳ ಬಳಿಕ ಅಧಿಕಾರದ ಗುರಿಯಲ್ಲಿ ಕಾಂಗ್ರೆಸ್ ಇದೆ. 70 ಸ್ಥಾನಗಳಿಗೆ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 1.56 ಕೋಟಿ ಮತದಾರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ಒಟ್ಟು 13766 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ.