ಮುಖ್ಯಮಂತ್ರಿ ಹುದ್ದೆಗಾಗಿ ಕೇರಳದಲ್ಲಿ ಶುರುವಾಯಿತು ಪೋಸ್ಟರ್ ಯುದ್ಧ
ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಯುಡಿಎಫ್ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಜಗಳ ಶುರುವಾಗಿದೆ. ಮೂವರು ನಾಯಕರು ಸಿಎಂ ಹುದ್ದೆಯ ರೇಸಿನಲ್ಲಿದ್ದು, ಅವರವರ ಬೆಂಬಲಿಗರು ಪ್ರತಿಸ್ಪರ್ಧಿ ನಾಯಕನ ವಿರುದ್ಧ ಪೋಸ್ಟರ್ ಯುದ್ಧ ಪ್ರಾರಂಭಿಸಿದ್ದಾರೆ.
ಸಂಗ್ರಹ ಚಿತ್ರ -
ಕೇರಳ: ವಿಧಾನ ಸಭಾ ಚುನಾವಣೆಯಲ್ಲಿ (Assembly Elections 2026) ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಗೆಲುವು ಸಾಧಿಸಿದ ಮೇಲೆ ಕೇರಳದಲ್ಲಿ (Kerala) ಈಗ ಮುಖ್ಯಮಂತ್ರಿ (Chief minister) ಹುದ್ದೆಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಳಗೆ (Congress) ಬಿಗ್ ಫೈಟ್ ಶುರುವಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರಾದ ವಿ.ಡಿ. ಸತೀಶನ್ (V.D. Satheeshan), ಕೆ.ಸಿ. ವೇಣುಗೋಪಾಲ್ (K.C. Venugopal) ಮತ್ತು ರಮೇಶ್ ಚೆನ್ನಿತ್ತಲ (Ramesh Chennithala) ಅವರ ಬೆಂಬಲಿಗರು ಪೋಸ್ಟರ್ ಯುದ್ಧವನ್ನು (Poster war) ಪ್ರಾರಂಭಿಸಿದ್ದಾರೆ. ಏಪ್ರಿಲ್ 9 ರಂದು ಮತದಾನದ ನಡೆದ ಬಳಿಕ ಪೋಸ್ಟರ್ ಅಭಿಯಾನ ಪ್ರಾರಂಭವಾಗಿದ್ದು, ಈಗ ಅದು ತೀವ್ರಗೊಂಡಿದೆ.
ಕೇರಳ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದು ಬಹುಮತವನ್ನು ಸಾಧಿಸಿತ್ತು. ಸುಮಾರು ಒಂದು ದಶಕದ ಬಳಿಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೊಳಗೆ ಈಗ ಮುಖ್ಯಮಂತ್ರಿ ಹುದ್ದೆಗಾಗಿ ಸಂಘರ್ಷ ಪ್ರಾರಂಭವಾಗಿದೆ.
ಸರ್ಕಾರ ರಚನೆಗೆ ಟಿವಿಕೆಗೆ ಬೆಂಬಲ ಘೋಷಿಸಿದ ಕಾಂಗ್ರೆಸ್; ವಿಜಯ್ ಸಿಎಂ ಆಗೋದು ಫಿಕ್ಸ್
ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರ ಬೆಂಬಲಿಗರು ಈಗ ಪೋಸ್ಟರ್ ಯುದ್ಧವನ್ನು ತೀವ್ರಗೊಳಿಸಿದ್ದಾರೆ. ಒಂದು ಬಣವು ವಿಜಯದ ಶಿಲ್ಪಿ ಎಂದು ಹೊಗಳಿ ವೇಣುಗೋಪಾಲ್ ಅವರ ಪೋಸ್ಟರ್‌ಗಳನ್ನು ಕೊಟ್ಟಾಯಂನಲ್ಲಿ ಅಂಟಿಸಿದ್ದು, ಇದನ್ನು ಕೆಲವರು ಕಪ್ಪು ಬಣ್ಣ ಬಳಿದು ವಿರೂಪಗೊಳಿಸಿದ್ದಾರೆ, ತಿರುವನಂತಪುರಂನಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯ ಹೊರಗೆಯೂ ಇಂತಹ ಘಟನೆ ನಡೆದಿದೆ.
ಈ ನಡವೆಯೇ ಸತೀಶನ್ ಅವರು ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಯಶಸ್ಸಿಗೆ ಅವರೇ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಇದು ಈಗ ಪಕ್ಷದ ಹೈಕಮಾಂಡ್ ಮುಂದೆ ಹೋಗುವ ಸಾಧ್ಯತೆ ಇದೆ. ತಳಮಟ್ಟದ ಕಾರ್ಯಕರ್ತರು ಕೂಡ ಸತೀಶನ್ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ ವೇಣುಗೋಪಾಲ್ ಅವರ ಬೆಂಬಲಿಗರು ವೇಣುಗೋಪಾಲ್ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಹೀಗಾಗಿ ಈಗ ಇಲ್ಲಿ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಆರಂಭವಾಗಿದೆ. ಹಿರಿಯ ನಾಯಕರಾಗಿ ಗುರುತಿಸಿಕೊಂಡಿರುವ ಚೆನ್ನಿತ್ತಲ ಕೂಡ ಈ ಸ್ಪರ್ಧೆಯಲ್ಲಿದ್ದು, ಇವರಿಗೂ ಬಲವಾದ ಬೆಂಬಲ ವ್ಯಕ್ತವಾಗಿದೆ.
ಪಂಜಾಬ್‌ನಲ್ಲಿ ಸರಣಿ ಸ್ಫೋಟ; ಬಿಎಸ್‌ಎಫ್ ಕೇಂದ್ರ ಮತ್ತು ಅಮೃತಸರ ಸೇನಾ ಶಿಬಿರದ ಮೇಲೆ ದಾಳಿ?
ಒಟ್ಟಿನಲ್ಲಿ ಕೇರಳದಲ್ಲಿ ಈಗ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ವಾರದೊಳಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಪಕ್ಷದೊಳಗಿನ ಆಂತರಿಕ ಕಚ್ಚಾಟ ಮುಂದುವರಿಯುವ ನಿರೀಕ್ಷೆ ಇದ್ದು, ಈ ನಡುವೆ ಹಲವು ಅಚ್ಚರಿಯ ಬೆಳವಣಿಗೆಗಳು ನಡೆಯಬಹುದು ಎನ್ನಲಾಗುತ್ತಿದೆ.