ಪಶ್ಚಿಮ ಬಂಗಾಳ ಮರು ಮತದಾನ: ಫಾಲ್ಟಾದಲ್ಲಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ
ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನ ಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆದಿದ್ದು, ಇದರಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖ್ಳಿಸಿದೆ. ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ ಅವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸಿಪಿಐ(ಎಂ)ನ ಸಂಭು ನಾಥ್ ಕುರ್ಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಬ್ದುರ್ ರಝಾಕ್ ಮೊಲ್ಲಾ ವಿರುದ್ಧ ಗೆಲುವು ದಾಖಲಿಸಿದರು.
ಸಂಗ್ರಹ ಚಿತ್ರ -
ಪಶ್ಚಿಮ ಬಂಗಾಳ: ಫಾಲ್ಟಾ ವಿಧಾನಸಭಾ ಸ್ಥಾನಕ್ಕೆ (Falta assembly repoll) ಭಾನುವಾರ ನಡೆದ ಮರುಚುನಾವಣೆಯಲ್ಲಿ (west bengal repoll) ಭಾರತೀಯ ಜನತಾ ಪಕ್ಷ (BJP) ಭರ್ಜರಿ ಜಯ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ (Debangshu Panda) ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಪಾಂಡಾ ಅವರು ಒಟ್ಟು 1,49,666 ಮತಗಳನ್ನು ಗಳಿಸಿದ್ದು, ಅವರ ಹತ್ತಿರದ ಪ್ರತಿಸ್ಪರ್ಧಿ ಸಿಪಿಐ(ಎಂ) ಅಭ್ಯರ್ಥಿ ವಿರುದ್ಧ 1,09,021 ಹೆಚ್ಚು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಕಳೆದ ಏಪ್ರಿಲ್‌ನಲ್ಲಿ ಚಲಾವಣೆಯಾದ ಎಲ್ಲಾ 294 ಸ್ಥಾನಗಳಲ್ಲಿ ಪಾಂಡಾ ಅವರೇ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರು ಮತದಾನದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೇವಲ 7,783 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ. 2011ರಲ್ಲಿ ಎಡರಂಗ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದಿದ್ದ ಟಿಎಂಸಿ ಇದೇ ಮೊದಲ ಬಾರಿಗೆ ಚುನಾವಣಾ ಠೇವಣಿ ಕಳೆದುಕೊಂಡಿದೆ.
ನರೇಂದ್ರ ಮೋದಿ ಜತೆ ಆಟವಾಡಿದ ಈ ಪುಟಾಣಿ ಫ್ರೆಂಡ್ಸ್ ಯಾರು? ಪ್ರಧಾನಿ ಹಂಚಿಕೊಂಡ ಕ್ಯೂಟ್ ಪೋಟೊ ಇಲ್ಲಿದೆ
ಪಾಂಡಾ ಅವರು 1,49,666 ಮತಗಳನ್ನು ಗಳಿಸಿದ್ದರೆ, ಅವರ ಹತ್ತಿರದ ಪ್ರತಿ ಸ್ಪರ್ಧಿಗಳಾದ ಸಿಪಿಐ(ಎಂ)ನ ಸಂಭು ನಾಥ್ ಕುರ್ಮಿ 40,645 ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಬ್ದುರ್ ರಝಾಕ್ ಮೊಲ್ಲಾ ಅವರು 10,084 ಮತಗಳನ್ನು ಪಡೆದು ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ.
ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2,25,000 ಮತದಾರರಿದ್ದು, ಅವರಲ್ಲಿ ಸುಮಾರು 1,65,000 ಜನರು ಹಿಂದೂಗಳು. ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಮತ್ತು ಅವರ ಜನರು 2011 ರಿಂದ ಮತ ಚಲಾಯಿಸದಂತೆ ತಮ್ಮನ್ನು ತಡೆದಿದ್ದಾರೆ ಎಂದು ಹಿಂದೂ ಮತದಾರರ ಒಂದು ವರ್ಗ ಆರೋಪಿಸಿದ ಕಾರಣ ಫಾಲ್ಟಾದಲ್ಲಿ ಮರು ಮತದಾನಕ್ಕೆ ಆದೇಶಿಸಲಾಗಿತ್ತು. ಮೇ 21ರ ಉಪಚುನಾವಣೆಗೆ 48 ಗಂಟೆಗಳ ಮೊದಲು ಜಹಾಂಗೀರ್ ಖಾನ್ ಚುನಾವಣೆ ಕಣದಿಂದ ಹಿಂದೆ ಸರಿದು ಪಕ್ಷದಲ್ಲಿ ಗೊಂದಲ ಸೃಷ್ಟಿಸಿದರು. ಆದರೂ ಅವರ ಹೆಸರು ಇವಿಎಂಗಳಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಉಳಿದಿದ್ತ್ತು.
ಕಳೆದ ಏಪ್ರಿಲ್‌ನಲ್ಲಿ ನಡೆದ ಎರಡು ಹಂತದ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದರೆ, ಟಿಎಂಸಿ 80 ಸ್ಥಾನಗಳನ್ನು ಗೆದ್ದಿತು. ಭಾನುವಾರ ಫಾಲ್ಟಾ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಬಿಜೆಪಿ ಗೆಲುವಿನ ಸಂಖ್ಯೆ 208ಕ್ಕೆ ಏರಿಕೆಯಾಗಿದೆ. ಬಿಜೆಪಿ ಗೆಲುವಿನ ಬಳಿಕ ಪಾಂಡಾ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೆ ಧನ್ಯವಾದ ಸಲ್ಲಿಸಿದರು.
ಫಾಲ್ಟಾ ಕ್ಷೇತ್ರ ಮರು ಮತದಾನವನ್ನು ಮೇ 21 ರಂದು ಭಾರೀ ಭದ್ರತೆಯೊಂದಿಗೆ ಮತದಾನ ನಡೆಸಲಾಯಿತು. ಈ ದಿನ ಶೇಕಡಾ 88.13 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಡೈಮಂಡ್ ಹಾರ್ಬರ್ ಮಹಿಳಾ ವಿಶ್ವವಿದ್ಯಾಲಯದಲ್ಲಿ ಭಾರಿ ಭದ್ರತೆಯೊಂದಿಗೆ ಭಾನುವಾರ ಮತ ಎಣಿಕೆ ಕಾರ್ಯ ನಡೆದಿತ್ತು.
ಯಾರು ದೇಬಾಂಗ್ಶು ಪಾಂಡಾ?
ದೇಬಾಂಗ್ಶು ಪಾಂಡಾ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದು, ವೃತ್ತಿಯಲ್ಲಿ ವಕೀಲರಾಗಿದ್ದಾರೆ. 2026 ರ ಫಾಲ್ಟಾ ಅಸೆಂಬ್ಲಿ ಮರುಮತದಾನ ಚುನಾವಣೆಗೆ ಸ್ಪರ್ಧಿಸುವ ಮೊದಲು ಅವರು ಕಾನೂನು ವೃತ್ತಿಯಲ್ಲಿ ತೊಡಗಿದ್ದರು. ಅವರು ಒಟ್ಟು 1.3 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದು, ಅವರ ಒಟ್ಟು ಆಸ್ತಿ 1.9 ಕೋಟಿ. ರೂ. ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅವರ ಆದಾಯ, ಆಸ್ತಿಗಳು, ಹೊಣೆಗಾರಿಕೆಗಳು ಮತ್ತು ಕ್ರಿಮಿನಲ್ ದಾಖಲೆಗಳ ವಿವರಗಳೂ ಸೇರಿವೆ.