IND vs PAK: ʻಅಭಿಷೇಕ್ ಶರ್ಮಾ ತಾಂತ್ರಿಕವಾಗಿ ಉತ್ತಮ ಬ್ಯಾಟ್ಸ್‌ಮನ್ ಅಲ್ಲʼ-ಮೊಹಮ್ಮದ್ ಆಮಿರ್ ಅಚ್ಚರಿ ಹೇಳಿಕೆ!
ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಬಗ್ಗೆ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್ ಆಮಿರ್ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಅಭಿಷೇಕ್ ಶರ್ಮಾ ಕೇವಲ ಸ್ಲಾಗರ್ ಅಷ್ಟೇ, ಅದು ಬಿಟ್ಟು ಅವರು ತಾಂತ್ರಿಕವಾಗಿ ಅಷ್ಟೊಂದು ಉತ್ತಮವಾಗಿಲ್ಲ. ಅವರನ್ನು ಸರಳ ಯೋಜನೆಯ ಮೂಲಕ ಔಟ್ ಮಾಡಬಹುದು ಎಂದು ಪಾಕ್ ಮಾಜಿ ವೇಗಿ ಹೇಳಿದ್ದಾರೆ.
ಅಭಿಷೇಕ್ ಶರ್ಮಾ ಬಗ್ಗೆ ಮೊಹಮ್ಮದ್ ಆಮಿರ್ ವ್ಯಂಗ್ಯ. -
ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಬಗ್ಗೆ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್ ಆಮಿರ್ (Mohammad Amir) ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಕೇವಲ ಸ್ಲಾಗರ್ ಅಷ್ಟೇ, ಅವರನ್ನು ಸರಳವಾದ ಯೋಜನೆಗಳ ಮೂಲಕ ಔಟ್ ಮಾಡಬಹುದು ಎಂದು ಅವರು ವ್ಯಂಗ್ಯವಾಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಿಮಿತ್ತ ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಆಮಿರ್ ಈ ಮಾತನ್ನು ಹೇಳಿದ್ದಾರೆ. ಅಂದ ಹಾಗೆ ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳು ಫೆಬ್ರವರಿ 15 ರಂದು ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಗುಂಪು ಹಂತದ ಮಹತ್ವದ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಆಮಿರ್. ಅಭಿಷೇಕ್ ಶರ್ಮಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೆ ಗ್ರಾಸರಾಗಿದ್ದಾರೆ. ಅಸ್ವಸ್ಥತೆಯಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ, ಈ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ಅನುಮಾನವಿದೆ. ಕಳೆದ ಕೆಲ ವರ್ಷಗಳ ಅದ್ಭುತ ಪ್ರದರ್ಶನಗಳ ಆಧಾರದ ಮೇಲೆ ಅವರು ಟಿ20 ವಿಶ್ವಕಪ್ ಟೂರ್ನಿಗೆ ವಿಶ್ವ ನಂ.1 ಟಿ20ಐ ಬ್ಯಾಟರ್ ಆಗಿ ಪ್ರವೇಶಿಸಿದ್ದಾರೆ. ಅವರು 1,297 ರನ್‌ಗಳನ್ನು 200 ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿರುವ ಅವರ ಸಾಧನೆ ಗಮನಾರ್ಹವಾಗಿದೆ.
ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತ ಪರ 3 ಬದಲಾವಣೆ ಸಾಧ್ಯತೆ
ಅಭಿಷೇಕ್ ಶರ್ಮಾ ಕೇವಲ ಸ್ಲಾಗರ್ ಅಷ್ಟೆ: ಮೊಹಮ್ಮದ್ ಆಮಿರ್
ಆದರೂ ಅಭಿಷೇಕ್ ಶರ್ಮಾ ಅವರ ಈ ಅಂಕಿಅಂಶಗಳು ಮೊಹಮ್ಮದ್ ಆಮಿರ್ ಅವರಿಗೆ ತೃಪ್ತಿ ತಂದಿಲ್ಲ. ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡುವ ತಂತ್ರವನ್ನು ಕೂಡ ಅವರು ರಿವೀಲ್ ಮಾಡಿದ್ದಾರೆ.
“ಅಭಿಷೇಕ್ ಶರ್ಮಾ ಸ್ಲಾಗರ್. ಪ್ರತಿಯೊಂದು ಬಾಲ್‌ನ್ನೂ ಹೊಡೆಯಲು ಯತ್ನಿಸುತ್ತಾರೆ. ಬ್ಯಾಟ್‌ಗೆ ಚೆಂಡು ಸಿಕ್ಕರೆ ಚೆನ್ನಾಗಿರುತ್ತದೆ, ಇಲ್ಲವಾದರೆ ವಿಫಲವಾಗುವ ಸಾಧ್ಯತೆ ಹೆಚ್ಚು. ಎಂಟು ಇನಿಂಗ್ಸ್ ಆಡಿದರೆ ಒಂದರಲ್ಲಿ ಮಾತ್ರ ರನ್ ಗಳಿಸುತ್ತಾರೆ. ಇನ್ನುಳಿದ ಪಂದ್ಯಗಳಲ್ಲಿ 10, 15, 20 ಅಥವಾ ಶೂನ್ಯಕ್ಕೆ ಔಟ್ ಆಗುತ್ತಾರೆ. ಅವರು ಕೇವಲ ನಿಂತು ಹೊಡೆಯುತ್ತಾರೆ. ತಾಂತ್ರಿಕವಾಗಿ ಅವರು ಇನ್ನೂ ಹೆಚ್ಚಿನ ಪರಿಪಕ್ವತೆಯನ್ನು ಸಾಧಿಸಿಲ್ಲ. ಇದು ನನ್ನ ಪ್ರಾಮಾಣಿಕ ಅಭಿಪ್ರಾಯ,” ಎಂದು ಮೊಹಮ್ಮದ್ ಆಮಿರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs NAM: ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಆಟದಿಂದ ನಮೀಬಿಯಾ ಎದುರು ಗೆದ್ದ ಭಾರತ!
“ಅಭಿಷೇಕ್ ಹೆಚ್ಚಿನ ಅಪಾಯ ತೆಗೆದುಕೊಂಡು ಕ್ರಿಕೆಟ್ ಆಡುತ್ತಾರೆ. ಡೀಪ್ ಕವರ್ ಇಟ್ಟು, ದೇಹದ ಮೇಲೆ ಚೆಂಡು ಹಾಕಿ ಅವರನ್ನು ಸಿಕ್ಕಿ ಹಾಕಿಕೊಳ್ಳುವಂತೆ ಮಾಡಬಹುದು. ಇದರ ಜೊತೆಗೆ ನಿಧಾನಗತಿಯ ಎಸೆತಗಳು ಪರಿಣಾಮಕಾರಿಯಾಗುತ್ತವೆ,” ಎಂದು ಅವರು ಹೇಳಿದ್ದಾರೆ.
ನಿಧಾನಗತಿಯ ಎಸೆತಗಳಿಗೆ ಸಜ್ಜಾಗುತ್ತಿದ್ದೇನೆ: ಅಭಿಷೇಕ್ ಶರ್ಮಾ
ಇದರ ನಡುವೆ, ವೇಗಿಗಳು ತಮ್ಮ ವಿರುದ್ಧ ಸ್ಲೋವರ್ ಬಾಲ್‌ಗಳನ್ನು ಹೆಚ್ಚು ಬಳಸುತ್ತಾರೆ ಎಂಬುದನ್ನು ಅಭಿಷೇಕ್ ಶರ್ಮಾ ಸ್ವತಃ ಒಪ್ಪಿಕೊಂಡಿದ್ದಾರೆ. ಆದರೆ ಅಂತಹ ಎಸೆತಗಳನ್ನು ಎದುರಿಸಲು ತಾನು ವಿಶೇಷ ಅಭ್ಯಾಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಟಿ20ಐ ಸರಣಿಯಲ್ಲಿ ಮಾತನಾಡಿದ ಅಭಿಷೇಕ್, “ವಿಶ್ವಕಪ್ ಟೂರ್ನಿಯಲ್ಲಿ ಬೌಲರ್‌ಗಳು ನನಗೆ ಹೆಚ್ಚಿನ ವೇಗ ಹಾಕುವುದಿಲ್ಲ ಎಂಬುದು ನನಗೆ ಗೊತ್ತು. ಕಳೆದ ಕೆಲ ಪಂದ್ಯಗಳಿಂದ ನಾನು ಅದನ್ನು ಅರಿತಿದ್ದೇನೆ. ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಿದ್ದೇನೆ. ಇಂತಹ ಕ್ರಿಕೆಟ್ ಆಡಬೇಕಾದರೆ ನಿರಂತರವಾಗಿ ಸಿದ್ಧರಾಗಿರಬೇಕು,” ಎಂದು ಹೇಳಿದ್ದರು.