International Women's Day 2025: ಫ್ಯಾಷನ್ ರ‍್ಯಾಂಪ್‌ನಲ್ಲಿ ಮಾನಿನಿಯರ ಹೆಜ್ಜೆ
ಶೋ ಸ್ಟಾಪರ್, ಮಾಡೆಲ್-ಸೂಪರ್ ಮಾಡೆಲ್ ಹೀಗೆ ಫ್ಯಾಷನ್ ಲೋಕದ ರ‍್ಯಾಂಪ್‌ನಲ್ಲಿ ಮಹಿಳೆಯರ ಹೆಜ್ಜೆ ಗುರುತು ಹೆಚ್ಚಾಗಿಯೇ ಇದೆ. ಈ ಕ್ಷೇತ್ರದಲ್ಲಿ ಸಮಾನತೆ, ಹಕ್ಕು, ಸ್ವಾತಂತ್ರ್ಯ ಎಂಬ ಸದ್ದು-ಗದ್ದಲವಿಲ್ಲದೇ ಮಾಡೆಲ್‌ಗಳು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈ ಕುರಿತಂತೆ ಮಾಡೆಲ್‌ಗಳು ವಿಶ್ವವಾಣಿ ನ್ಯೂಸ್‌ಗೆ ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ದೀಪ್ತಿ ಮೋಹನ್ (ಸೀನಿಯರ್ ಮಾಡೆಲ್), ಲೂಸಿ ಸೆರೆರಿಯಾ (ಮಿಸೆಸ್ ಇಂಡಿಯಾ ಕರ್ನಾಟಕ ಮಂಡ್ಯ), ಸಂಗೀತಾ ಹೊಳ್ಳ (ತಾಜ್ ಮಿಸ್ ಯೂನಿವರ್ಸ್ ವಿನ್ನರ್) ಪ್ರಿಯಾಂಕಾ ಸುದರ್ಶನ್ (ಮಾಡೆಲ್).

ಸಂದರ್ಶನ: ಶೀಲಾ ಸಿ. ಶೆಟ್ಟಿ
ಫ್ಯಾಷನ್ ರ‍್ಯಾಂಪ್ ಹೆಜ್ಜೆ ಇಟ್ಟು ಮುನ್ನೆಡೆಯುವ ಪ್ರತಿ ಮಾನಿನಿಯೂ ಇಲ್ಲಿ ಸೂಪರ್‌ವುಮೆನ್. ಹೌದು, ಸಮಾನತೆ, ಹಕ್ಕು, ಸ್ವಾತಂತ್ರ್ಯ ಎಂಬ ಸದ್ದು-ಗದ್ದಲವಿಲ್ಲದೇ ಫ್ಯಾಷನ್‌ಲೋಕದಲ್ಲಿ ಮಿನುಗುವ ತಾರೆಯರಿವರು. ಇದನ್ನು ಈಗಾಗಲೇ ಸಾಕಷ್ಟು ಮಾಡೆಲ್‌ಗಳು ಪ್ರೂವ್ ಕೂಡ ಮಾಡಿದ್ದಾರೆ. ಸ್ತ್ರೀ ಸ್ವಾತಂತ್ರ್ಯ, ದೌರ್ಜನ್ಯ, ವಾದ ಎಂದೆಲ್ಲಾ ಹೊರಗಿನ ಪ್ರಪಂಚದಲ್ಲಿ ಹೋರಾಟ ನಡೆಯುತ್ತಿದ್ದರೂ, ಸೈಲೆಂಟಾಗಿ ರ‍್ಯಾಂಪ್ ಲೋಕ ಮಾತ್ರ, ಮಹಿಳೆಯರಿಗೆ ಖುಲ್ಲಂಖುಲ್ಲಾ ರೆಡ್‌ಕಾರ್ಪೆಟ್ ಹಾಸುತ್ತಾ ಸಾಗಿದೆ. ಮಹಿಳಾ ದಿನಾಚರಣೆಯ ಸಂಭ್ರಮದ (International Women's Day 2025) ಹಿನ್ನೆಲೆಯಲ್ಲಿ ಉದ್ಯಾನನಗರಿಯ ಹಿರಿಯ -ಕಿರಿಯ ಸ್ಥಳೀಯ ಮಾಡೆಲ್‌ಗಳು ತಾವೇನು ಕಡಿಮೆಯಿಲ್ಲವೆಂಬಂತೆ ಇಲ್ಲಿ ತಮ್ಮ ಅಭಿಪ್ರಾಯವನ್ನು ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

ದೀಪ್ತಿ ಮೋಹನ್ ರ‍್ಯಾಂಪ್ ಲವ್
ರ‍್ಯಾಂಪ್ ಪ್ರತಿ ಹೆಜ್ಜೆಯಲ್ಲೂ ಗ್ಲಾಮರ್‌ಡಾಲ್ ಎಂದೆನಿಸಿಕೊಳ್ಳುವ ಮಾನಿನಿಯ ಆತ್ಮವಿಶ್ವಾಸದಿಂದಲೇ ಯಶಸ್ಸು ಸಾಧಿಸಲು ಸಾಧ್ಯ. ಇನ್ನು ಫ್ಯಾಷನ್ ಪ್ರಪಂಚದಲ್ಲಿ ಮಾನಿನಿಗೆ ಉನ್ನತ ಸ್ಥಾನ. ಇಲ್ಲಿ ಸಮಾನತೆ ಎಂಬ ಕೂಗು ಎಲ್ಲಿಯೂ ಕೇಳಿ ಬರುವುದಿಲ್ಲ, ಅಷ್ಟೇಕೆ! ರ‍್ಯಾಂಪ್ ಇಳಿದಾಕ್ಷಣ ನಾವೂ ಕೂಡ ಸಾಮಾನ್ಯ ಮಹಿಳೆಯ ರೋಲ್ ನಿಭಾಯಿಸುತ್ತೇವೆ ಎನ್ನುವ ಸೀನಿಯರ್ ಮಾಡೆಲ್/ನಟಿ ದೀಪ್ತಿ ಅಪ್ಪಟ ಕನ್ನಡತಿ. ಶೋ ಸ್ಟಾಪರ್ ಆಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾ ತನ್ನದೇ ರ‍್ಯಾಂಪ್ ಮೇಲೆ ತನ್ನದೇ ಆದ ಪ್ರಪಂಚ ವಿಸ್ತರಿಸಿಕೊಂಡ ಚೆಲುವೆ. ರ‍್ಯಾಂಪ್ ಯಾವತ್ತೂ ಹೆಣ್ಣಿನ ಸ್ಥಾನ-ಮಾನಗಳನ್ನು ಕಿತ್ತುಕೊಂಡಿಲ್ಲ, ಬದಲಿಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟಿದೆ. ಮೊದಲಿಗಿಂತ ಈ ಜನರೇಷನ್ ತುಂಬಾ ಫಾಸ್ಟಾಗಿದೆ. ನಮಗೂ ಅಷ್ಟೇ, ಸೌಲಭ್ಯ ಕೇಳುವ ಮುನ್ನವೇ ರ್ಯಾಂಪ್ ಎಲ್ಲವನ್ನೂ ಕಲ್ಪಿಸಿದೆ ಎನ್ನುತ್ತಾರೆ.

ಲೂಸಿ ಸೆರೆರಿಯಾ ಫ್ಯಾಷನ್ ಮಂತ್ರ
ಮದುವೆಯಾಗಿ, ತಾಯಿಯಾಗಿ ಫ್ಯಾಷನ್ ಪೇಜೆಂಟ್‌ನಲ್ಲಿ ಪಾಲ್ಗೊಂಡು ಮಿಸೆಸ್ ಇಂಡಿಯಾ ಕರ್ನಾಟಕ ಮಂಡ್ಯ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಡ್ಯಾಜ್ಲಿಂಗ್ ಸ್ಟಾರ್ ಟೈಟಲ್ ಗೆದ್ದಿರುವ ಲೂಸಿ ಸರೇರಿಯಾ, ಈಗಲೂ ರ‍್ಯಾಂಪ್ ವಾಕ್ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಕೇವಲ, ಸೌಂದರ್ಯದ ಒಡತಿ ನಾವಾಗಿದ್ದರೆ ಸಾಲದು, ಜತೆಗೆ ಆತ್ಮವಿಶ್ವಾಸ-ಕನಸು ನಮ್ಮಲ್ಲಿರಬೇಕು. ಫ್ಯಾಷನ್ ಪ್ರಪಂಚ ಗ್ಲಾಮರ್‌ಮಯವಾದರೂ, ಫ್ಯಾಷನ್ ಪ್ರಜ್ಞೆ ಮುಖ್ಯ. ಸಕ್ಕರೆ ಬೊಂಬೆಯಾಗಿದ್ದರೆ ಸಾಲದು. ಅದಕ್ಕೆ ತಕ್ಕಂತಹ ಚಾಕಚಕ್ಯತೆ-ಚಾಣಕ್ಷತನ ಇರಬೇಕು ಎನ್ನುತ್ತಾರೆ.

ಸಂಗೀತಾ ಹೊಳ್ಳ ರ‍್ಯಾಂಪ್ ಪ್ರೇಮ
ಸಮಾನತೆಯ ಕೂಗು ಇಲ್ಲಿಲ್ಲ! ಹಕ್ಕಿಗಾಗಿ ಹೋರಾಡಬೇಕಿಲ್ಲ, ಗ್ಲಾಮರ್ ಜತೆಜತೆಗೆ ತಮ್ಮದೇ ಆದ ಐಡೆಂಟಿಟಿ ಸೃಷ್ಟಿಸಿಕೊಳ್ಳಬಹುದಾದ ಜಗತ್ತಿದು. ಹೌದು. ಇಲ್ಲಿ ಕೇವಲ ಗ್ಲಾಮರ್‌ಗಷ್ಟೇ ಅಲ್ಲ, ಟ್ಯಾಲೆಂಟ್‌ಗೂ ಬೆಲೆ ಇದೆ. ಇಂದು ಮೊದಲಿಗಿಂತ ರ‍್ಯಾಂಪ್ ಜಗತ್ತು ಸಾಕಷ್ಟು ಬದಲಾಗಿದೆ. ಸಂತಸದ ವಿಚಾರವೆಂದರೆ, ಮಹಿಳೆಗೆ ಇಲ್ಲಿ ಗುರಿಗೆ ಕೊನೆಯೆಂಬುದಿಲ್ಲ. ಇದು ಮಾಡೆಲಿಂಗ್‌ನಲ್ಲಿ ಸಕ್ರಿಯವಾಗಿರುವ ತಾಜ್ ಮಿಸ್ ಯೂನಿವರ್ಸ್ 2022 ವಿನ್ನರ್ ಸಂಗೀತಾ ಹೊಳ್ಳ ಅವರ ಮನದ ಮಾತು. ಈ ಕರಾವಳಿಯ ಚೆಲುವೆಗೆ ಮಾಡೆಲಿಂಗ್ ಮೊದಲ ಮೆಟ್ಟಿಲಂತೆ.

ಪ್ರಿಯಾಂಕಾ ಸುದರ್ಶನ್ ಫ್ಯಾಷನ್ ಪ್ರೀತಿ
ಮಾಡೆಲ್ ಪ್ರಿಯಾಂಕಾ ಸುದರ್ಶನ್ ಹೇಳುವಂತೆ, ಯಾವುದೇ ಫ್ಯಾಷನ್ ರ‍್ಯಾಂಪ್ ಶೋಗಳು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಅಲ್ಲದೇ ಮಹಿಳಾ ಸಬಲೀಕರಣಕ್ಕೆ ನಾಂದಿಯಾಡುತ್ತವೆ. ಹಾಗಾಗಿ ಫ್ಯಾಷನ್ ಲೋಕವು ಮಹಿಳೆಯರ ಕನಸನ್ನು ನನಸು ಮಾಡಿಕೊಳ್ಳಲು ಆಸ್ಪದ ಮಾಡಿಕೊಡುತ್ತದೆ. ಫ್ಯಾಷನ್ ರ‍್ಯಾಂಪ್ ಮಾನಿನಿಯರ ಸ್ಥೈರ್ಯ ಹೆಚ್ಚಿಸುತ್ತವೆ ಎನ್ನುತ್ತಾರೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Frocks Fashion: ಮುಂಬರುವ ಸೀಸನ್‌ಗೂ ಮುನ್ನವೇ ಲಗ್ಗೆ ಇಟ್ಟ ಬ್ಯೂಟಿಫುಲ್ ಫ್ರಾಕ್‌ಗಳಿವು!