Junk Jewel Fashion: ಸೀಸನ್ ಫಂಕಿ ಲುಕ್‌ಗೆ ಜಂಕ್ ಜ್ಯುವೆಲರಿ ಸಾಥ್
Junk Jewel Fashion: ಫಂಕಿ ಲುಕ್ ನೀಡುವ ಜ್ಯುವೆಲರಿಗಾಗಿ ಹೆಚ್ಚು ಹಣ ಸುರಿಯಬೇಕಾಗಿಲ್ಲ. ಲಾಕರ್‌ನಲ್ಲಿ ಮುಚ್ಚಿಡುವ ಪ್ರಮೇಯವಿಲ್ಲ. ಕಳ್ಳ-ಕಾಕರ ಭಯವಿಲ್ಲ. ನಾನಾ ಮೆಟಿರಿಯಲ್‌ನಲ್ಲಿ ಸಿದ್ಧಪಡಿಸಲಾಗುವ ಈ ಜಂಕ್ ಜ್ಯುವೆಲರಿಗಳು ಈಗಾಗಲೇ ಫ್ಯಾಷನ್ ಪ್ರಿಯರ ಮೆಚ್ಚುಗೆ ಗಳಿಸಿ, ಟ್ರೆಂಡಿ ಲಿಸ್ಟ್‌ಗೆ ಸೇರಿವೆ. ಈ ಸೀಸನ್‌ನ ಜ್ಯುವೆಲ್ ಟ್ರೆಂಡ್‌ನಲ್ಲಿ ಟಾಪ್ ಲಿಸ್ಟ್‌ನಲ್ಲಿವೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಂಕಿ ಲುಕ್ ನೀಡುವ ಜಂಕ್ ಜ್ಯುವೆಲರಿಗಳು (Junk Jewel Fashion) ಈ ಸೀಸನ್‌ನ ಬಾಗಿಲು ಬಡಿದಿವೆ. ಮಾಡರ್ನ್ ಯುವತಿಯರನ್ನು ಸವಾರಿ ಮಾಡತೊಡಗಿವೆ. ಕತ್ತನ್ನು ಆವರಿಸಿದ ಒಂದಿಪ್ಪತ್ತು ಎಳೆಎಳೆಯ ನೆಕ್‌ಲೆಸ್, ಹಾವಿನಂತೆ ಸುತ್ತುವರಿದ ಸರ, ಎಲಾಸ್ಟಿಕ್ ಸರದ ಮಣಿ ಮಾಲೆ, ಲೇಯರ್ ಚೈನ್, ಮಣಿಗಳು, ಕಲ್ಲಿನ ಸರಗಳು, ಪ್ಲಾಸ್ಟಿಕ್, ಫೈಬರ್, ಮೆಟಲ್, ನಾನ್ ಮೆಟಲ್ ಹೀಗೆ ನಾನಾ ಶೈಲಿಯ ಊಹೆಗೂ ಮೀರಿದ ಡಿಸೈನ್‌ಗಳು ಈ ಜಂಕ್ ಜ್ಯುವೆಲರಿ ಲಿಸ್ಟ್‌ನಲ್ಲಿವೆ. ಧರಿಸಿದಾಗ, ಹೆಚ್ಚು ಭಾರವಿಲ್ಲ, ಖರ್ಚಿಲ್ಲ, ಧರಿಸಿದರೇ ಎದ್ದು ಕಾಣುವ ಡಿಸೈನ್ಸ್. ಒಂದೇ ಎರಡೇ, ಡ್ರೆಸ್‌ಗೆ ತಕ್ಕ ನಾನ್ ಮೆಟಲ್‌ನ ಜಂಕ್ ನೆಕ್ ಜ್ಯುವೆಲರಿಗಳು ಮಾನಿನಿಯರ ಕತ್ತನ್ನು ಆವರಿಸಿಕೊಂಡಿವೆ. ಸಂತೋಷದ ವಿಷಯವೆಂದರೆ, ಇವುಗಳಿಗಾಗಿ ಹೆಚ್ಚು ಹಣ ಸುರಿಯುವ ಗೋಜಿಲ್ಲ, ಇನ್ನು ಲಾಕರ್‌ನಲ್ಲಿ ಮುಚ್ಚಿಡುವ ಪ್ರಮೇಯವಿಲ್ಲ. ಕಳ್ಳ-ಕಾಕರ ಭಯವಿಲ್ಲ! ಹಾಗಾಗಿ ಕಾಲೇಜು ಕ್ಯಾಂಪಸ್‌ನಿಂದಿಡಿದು, ಕಚೇರಿಯಲ್ಲಿ ಕೆಲಸ ಮಾಡುವ ಮಾನಿನಿಯರು, ಮಾಡೆಲ್‌ಗಳು ಈ ಜಂಕ್ ಜ್ಯುವೆಲರಿಗಳ ಪ್ರೇಮಿಗಳಾಗಿದ್ದಾರೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ದಿಶಾ.

ಕೈಗೆಟಕುವ ಬೆಲೆಯಲ್ಲಿ ಜಂಕ್ ಜ್ಯುವೆಲರಿಗಳು
ಫ್ಯಾಷನ್ ಡಿಸೈನರ್ ವಿದ್ಯಾ ವಿವೇಕ್ ಅವರ ಪ್ರಕಾರ, ಕಣ್ಮನ ಸೆಳೆಯುವ ಈ ಫಂಕಿ ಜಂಕ್ ಆಭರಣಗಳು ಇಂದಿನ ಡ್ರೆಸ್ಸಿಂಗ್ ಸೆನ್ಸ್ ಹಾಗೂ ಲೈಫ್‌ಸ್ಟೈಲ್‌ಗೆ ತಕ್ಕಂತೆ ವಿನ್ಯಾಸಗೊಳ್ಳುತ್ತಿವೆ. ಪ್ರತಿ ಉಡುಪಿಗೂ ಹೊಂದುವಂತೆ ಧರಿಸಬಹುದು. ಹೆಚ್ಚು ಬೆಲೆ ಕೂಡ ಬಾಳುವುದಿಲ್ಲ. ಫ್ಯಾಷನ್ ಟ್ರೆಂಡ್‌ಗೆ ತಕ್ಕಂತೆ ಆಗಾಗ್ಗೆ ಬದಲಿಸುತ್ತಿರಬಹುದು.

ಕಾಲೇಜು ಹುಡುಗಿಯರ ಜಂಕ್ ಜ್ಯುವೆಲರಿ ಲವ್
ಹೊಸ ಮಾದರಿಯ ಆಯ್ಕೆ, ಬಣ್ಣಗಳಲ್ಲಿ ಭಿನ್ನತೆ, ವಿಶೇಷ ವಿನ್ಯಾಸ ಹಾಗೂ ಕೈಗೆಟುಕುವ ಬೆಲೆಯಲ್ಲಿ ಸಿಗುವುದೇ ಇವುಗಳ ಗುಣಾತ್ಮಕ ಅಂಶವಾಗಿದೆ ಎನ್ನುವ ಫಂಕಿ ಜಂಕ್ ಆಭರಣ ಪ್ರಿಯೆ ದೀಪಾ ಪ್ರಕಾರ, ಯುವತಿಯರ ಗಮನ ಸೆಳೆಯುವಲ್ಲಿ ಇವು ಸಂಪೂರ್ಣ ಯಶಸ್ವಿಯಾಗಿವೆ. ವಿದ್ಯಾರ್ಥಿನಿ ನಿಶಾ ಹಾಗೂ ಸಾನ್ವಿ ಹೇಳುವಂತೆ, ನಮ್ಮ ಪಾಕೆಟ್ ಮನಿಯಲ್ಲಿ ಕೊಳ್ಳುವ ಈ ಫಂಕಿ ಜಂಕ್ ಆಭರಣಗಳನ್ನು ಯಾವಾಗ ಬೇಕಾದರೂ ಧರಿಸಬಹುದು. ಹಾಳು ಮಾಡಿದರೂ, ಕಳೆದರೂ ಚಿಂತೆ ಇಲ್ಲ. ಮ್ಯಾಚಿಂಗ್‌ಗೆ ತಕ್ಕಂತೆ ಧರಿಸಬಹುದು. ಇನ್ನು ಫ್ಯಾಷನ್ ಪ್ರಿಯರು ಮಾತ್ರವಲ್ಲ, ಬಾಲಿವುಡ್ ಚಿತ್ರ ನಟ-ನಟಿಯರು, ಮಾಡೆಲ್‌ಗಳು ಈ ಫಂಕಿ ಜಂಕ್ ಆಭರಣಗಳನ್ನು ಧರಿಸತೊಡಗಿರುವುದು ಇವು ಮತ್ತೊಮ್ಮೆ ಟ್ರೆಂಡಿಯಾಗಲು ಕಾರಣವಾಗಿದೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಶಿ.

ಜಂಕ್ ಜ್ಯುವೆಲರಿ ಪ್ರಿಯರ ಗಮನದಲ್ಲಿರಲಿ
* ಫಂಕಿ ಜಂಕ್ ಆಭರಣಗಳ ಫಿನಿಶಿಂಗ್ ನೋಡಿ ಖರೀದಿಸಿ.
* ಫಾರ್ಮಲ್ ಹಾಗೂ ಕ್ಯಾಶುವಲ್ ಉಡುಪಿಗೂ ಮ್ಯಾಚ್ ಆಗುತ್ತವೆ.
* ಉಡುಪಿನ ಬಣ್ಣಕ್ಕೆ ತಕ್ಕಂತೆ ಮ್ಯಾಚ್ ಮಾಡಿ.
* ಈ ಸೀಸನ್‌ಗೆ ಬೆಸ್ಟ್ ಫ್ಯಾಷನ್ ಆ್ಯಕ್ಸಿಸರೀಸ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Celebrity Interview 2025: ಫಿಟ್ನೆಸ್ ದಿವಾ & ಉದ್ಯಮಿ ಶೀಲಾ ಯೋಗೇಶ್ವರ್ ಫ್ಯಾಷೆನಬಲ್ ಲೈಫ್‌ಸ್ಟೈಲ್ ಝಲಕ್!