Ugadi Jewel Fashion: ಯುಗಾದಿ ಹಬ್ಬದ ಸೀಸನ್‌ನಲ್ಲಿ ಟ್ರೆಡಿಷನಲ್ ಡಿಸೈನ್‌ನ ಆಭರಣಗಳಿಗೆ ಹೆಚ್ಚಾದ ಬೇಡಿಕೆ
Ugadi Jewel Fashion: ಯುಗಾದಿ ಹಬ್ಬದ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಡಿಷನಲ್ ಡಿಸೈನ್‌ನ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಎಥ್ನಿಕ್ ಲುಕ್ ನೀಡುವಂತಹ ಬಂಗಾರ ಹಾಗೂ ಬಂಗಾರೇತರ ಆಭರಣಗಳು ಈ ಸೀಸನ್‌ನಲ್ಲಿ ಜ್ಯುವೆಲರಿ ಲೋಕದ ಟಾಪ್ ಲಿಸ್ಟ್‌ನಲ್ಲಿವೆ. ಅವು ಯಾವುವು? ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿ ಹಬ್ಬದ ಸಂಭ್ರಮಕ್ಕೆ ಅದರಲ್ಲೂ ಫೆಸ್ಟಿವ್ ಸೀಸನ್‌ಗೆ ಮ್ಯಾಚ್ ಆಗುವಂತಹ ನಾನಾ ಶೈಲಿಯ ಟ್ರೆಡಿಷನಲ್ ಲುಕ್ ನೀಡುವಂತಹ ಬಂಗಾರ ಹಾಗೂ ಬಂಗಾರೇತರ ಆಭರಣಗಳು (Ugadi Jewel Fashion) ಟ್ರೆಂಡಿಯಾಗಿವೆ. ಹೌದು, ಹಬ್ಬದ ಟ್ರೆಡಿಷನಲ್ ಉಡುಪು ಅಥವಾ ಸೀರೆಗೆ ಹೊಂದುವಂತಹ ಡಿಸೈನ್‌ನ ಸಾಂಪ್ರದಾಯಿಕ ಆಭರಣಗಳು (Traditional jewellery) ಈ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಅವು ಬಂಗಾರದ್ದಾಗಿರಬಹುದು, ಇಲ್ಲವೇ ಇತರೆ ಲೋಹದ್ದಾಗಿರಬಹುದು! ಹುಡುಗಿಯರು ಸೇರಿದಂತೆ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲ ವರ್ಗದ ಮಾನಿನಿಯರು ಇವನ್ನು ಖರೀದಿಸತೊಡಗಿದ್ದಾರೆ ಎನ್ನುತ್ತಾರೆ ಜ್ಯುವೆಲರಿ ಶಾಪ್‌ವೊಂದರ ಮಾರಾಟಗಾರರು.

ಕೈಗೆಟಕುವ ಬೆಲೆಯಲ್ಲಿ ಇಮಿಟೇಷನ್ ಜ್ಯುವೆಲರಿಗಳು
ಸಾಮಾನ್ಯ ಮಹಿಳೆಯರು ಕೊಳ್ಳಬಹುದಾದ ಇಮಿಟೇಷನ್ ಜ್ಯುವೆಲರಿಗಳು ಈ ಫೆಸ್ಟಿವ್ ಸೀಸನ್‌ನಲ್ಲಿ ಪ್ರಚಲಿತದಲ್ಲಿವೆ. ನೋಡಲು ಥೇಟ್ ಬಂಗಾರದಂತೆ ಕಾಣಿಸುವ ಅದರಲ್ಲೂ ಬಂಗಾರದಲ್ಲಿ ದೊರೆಯುವ ಆಂಟಿಕ್ ಡಿಸೈನ್‌ನವು ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಬಂಗಾರ ಕೊಳ್ಳಲಾಗದವರು ಮಾತ್ರವಲ್ಲ, ಪ್ರತಿ ಉಡುಪಿಗೆ ಸೀರೆಗೆ ಮ್ಯಾಚಿಂಗ್ ಬಯಸುವ ಮಹಿಳೆಯರು ಈ ಇಮಿಟೇಷನ್ ಟ್ರೆಡಿಷನಲ್ ಜ್ಯುವೆಲರಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಪರಿಣಾಮ ಮಾರಾಟ ಹೆಚ್ಚಿದೆ ಎನ್ನುತ್ತಾರೆ ಗಾಂಧೀ ಬಜಾರ್‌ನ ಜ್ಯುವೆಲರಿ ಶಾಪ್‌ವೊಂದರ ಮಾಲೀಕರು.

ಟ್ರೆಡಿಷನಲ್ ಲುಕ್ ನೀಡುವ ಗೋಲ್ಡ್ ಪ್ಲೇಟೆಡ್ ಆಭರಣಗಳು
ಸ್ಟೋನ್, ಕ್ರಿಸ್ಟಲ್, ಕೋರಲ್, ಪರ್ಲ್, ಜೇಡ್, ನವರತ್ನ ಬಳಸಿ ವಿನ್ಯಾಸಗೊಳಿಸಿದ ಟ್ರೆಡಿಷನಲ್ ಲುಕ್ ನೀಡುವ ಗೋಲ್ಡ್ ಪ್ಲೇಟೆಡ್ ಆಭರಣಗಳು ಕೂಡ ಯುವತಿಯರನ್ನು ಸೆಳೆದಿವೆ. ಎಥ್ನಿಕ್ ಡಿಸೈನರ್‌ವೇರ್‌ಗೆ ಸಾಥ್ ನೀಡುವ ಇವಕ್ಕೂ ಬೇಡಿಕೆ ಮೊದಲಿಗಿಂತ ಹೆಚ್ಚಿದೆ. ಇವು ಕೂಡ ಅಂತಹ ದುಬಾರಿಯಲ್ಲ. ಆಯಾ ಡಿಸೈನ್‌ಗೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ ಎನ್ನುತ್ತಾರೆ ಮಾರಾಟಗಾರರು.

ಟ್ರೆಡಿಷನಲ್ ಜ್ಯುವೆಲರಿ ಸೆಟ್
ಇನ್ನು, ಇಡೀ ಸೀರೆಗೆ ಜ್ಯುವೆಲರಿ ಸೆಟ್ ಆಭರಣಗಳನ್ನು ಧರಿಸುವವರು ಇಂದು ಹೆಚ್ಚಾಗಿದ್ದಾರೆ. ಹಬ್ಬ ಮಾತ್ರವಲ್ಲದೇ, ವೆಡ್ಡಿಂಗ್‌ಗೂ ಧರಿಸಬಹುದಾದ ಜ್ಯುವೆಲರಿ ಸೆಟ್‌ಗಳು ಇಂದು ಎಲ್ಲಾ ವಯಸ್ಸಿನ ಮಾನಿನಿಯರನ್ನು ಆಕರ್ಷಿಸಿವೆ. ಧರಿಸಿದಾಗ ರಾಯಲ್ ಲುಕ್ ನೀಡುವ ಈ ಜ್ಯುವೆಲರಿ ಸೆಟ್‌ಗಳು ಸುಮಾರು 500 ರೂ.ಗಳಿಂದ ಆರಂಭವಾಗಿ 10 ಸಾವಿರ ರೂ.ಗಳವರೆಗೂ ದೊರೆಯುತ್ತವೆ. ಇವುಗಳಲ್ಲಿ ಟೆಂಪಲ್ ಜ್ಯುವೆಲರಿ, ಆಂಟಿಕ್ ಡಿಸೈನ್ ಜ್ಯುವೆಲರಿ, ಹಳೆಕಾಲದ ಡಿಸೈನ್‌ಗಳವು ಅತಿ ಹೆಚ್ಚು ಮಾರಾಟವಾಗುತ್ತಿದೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.

ಬಂಗಾರೇತರ ಆಭರಣಗಳಾದಲ್ಲಿ ಆಯ್ಕೆ ಹೇಗೆ?
* ಬಂಗಾರೇತರ ಆಭರಣಗಳನ್ನು ಖರೀದಿಸುವಾಗ ಫಿನಿಶಿಂಗ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ.
* ಒಂದಕ್ಕಿಂತ ಹೆಚ್ಚು ಔಟ್‌ಫಿಟ್‌ಗೆ ಮ್ಯಾಚ್ ಆಗುವಂತವನ್ನು ಕೊಳ್ಳಿ.
* ಜ್ಯುವೆಲರಿ ಸೆಟ್ ಆದಲ್ಲಿ ಕಾಮನ್ ಆಗಿ ಧರಿಸುವಂತವನ್ನು ಆಯ್ಕೆ ಮಾಡಿ.
ಈ ಸುದ್ದಿಯನ್ನೂ ಓದಿ | Miss Universe Karnataka Audition: ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ನಡೆದ ಮಿಸ್ ಯೂನಿವರ್ಸ್ ಕರ್ನಾಟಕ ಅಡಿಷನ್
ಬಂಗಾರದ ಟ್ರೆಡಿಷನಲ್ ಜ್ಯುವೆಲರಿ ಆಯ್ಕೆ ಹೇಗೆ?
* ಲೈಟ್‌ವೈಟ್ ಟ್ರೆಡಿಷನಲ್ ಆಭರಣಗಳನ್ನು ಆಯ್ಕೆ ಮಾಡಿ.
* ನಾಲ್ಕೈದು ಔಟ್‌ಫಿಟ್‌ಗಳಿಗೆ ಅಥವಾ ಎಲ್ಲ ಬಗೆಯ ಉಡುಪುಗಳಿಗೆ ಮ್ಯಾಚ್ ಆಗುವಂತವನ್ನು ಖರೀದಿಸಿ.
* ಮ್ಯಾಟ್ ಫಿನಿಶಿಂಗ್ ಬಂಗಾರದ ಆಭರಣಗಳ ಸೇಲ್ ವ್ಯಾಲ್ಯೂ ಸೂಕ್ತವಾಗಿ ದೊರಕುವುದಿಲ್ಲ. ಹಾಗಾಗಿ ನೋಡಿ ಖರೀದಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)