ಹೊರ್ಮುಜ್ ಜಲಸಂಧಿಯಲ್ಲಿ ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ: ಐವರು ಭಾರತೀಯರ ರಕ್ಷಣೆ
Explosive Hits Kuwait-Flagged Tanker: ಇರಾನ್ ನಿಯಂತ್ಣದಲ್ಲಿರುವ ಹೊರ್ಮುಜ್ ಜಲಸಂಧಿಯಲ್ಲಿ ಸಮುದ್ರ ಭದ್ರತೆಗೆ ಸಂಬಂಧಿಸಿದ ಅಪಾಯಗಳು ಹೆಚ್ಚಾಗಿದ್ದು, ವಾಣಿಜ್ಯ ಹಡಗುಗಳ ಮೇಲೆ ಪದೇ ಪದೆ ದಾಳಿಗಳು ನಡೆಯುತ್ತಿವೆ. ಹೊರ್ಮುಜ್ ಜಲಸಂಧಿಯಲ್ಲಿ ಕುವೈತ್ ಧ್ವಜ ಹೊತ್ತ ಟ್ಯಾಂಕರ್ ಹಡಗಿಗೆ ಕ್ಷಿಪಣಿ ಡಿಕ್ಕಿ ಹೊಡೆದ ನಂತರ ಅದರಲ್ಲಿದ್ದ ಐದು ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಸಾಂದರ್ಭಿಕ ಚಿತ್ರ -
ಮಸ್ಕತ್, ಅ. 3: ಇರಾನ್‌ನ ವಶದಲ್ಲಿರುವ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಕುವೈತ್ ಧ್ವಜ ಹೊತ್ತ ಟ್ಯಾಂಕರ್ ಹಡಗಿಗೆ ಕ್ಷಿಪಣಿ ಡಿಕ್ಕಿ ಹೊಡೆದ ನಂತರ ಅದರಲ್ಲಿದ್ದ ಐದು ಭಾರತೀಯ ಪ್ರಜೆಗಳನ್ನು ರಕ್ಷಿಸಿ ದಡಕ್ಕೆ ಕರೆ ತರಲಾಗಿದೆ ಎಂದು ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಭಾರತೀಯರು ಪ್ರಯಾಣಿಸುತ್ತಿದ್ದ ಎಂಟಿ ಕಾಜಿಮಹ್ III ಎಂಬ ಹಡಗು ಪ್ರಮುಖ ಜಲಮಾರ್ಗದ ಮೂಲಕ ಸಾಗುತ್ತಿದ್ದಾಗ ಅದರ ಮೇಲೆ ದಾಳಿ ನಡೆದಿದೆ. ಘಟನೆ ನಡೆದ ನಂತರ ಭಾರತೀಯರನ್ನು ಒಮಾನ್ ಅಧಿಕಾರಿಗಳು ರಕ್ಷಿಸಿದ್ದಾರೆ. ಇದಕ್ಕಾಗಿ ಭಾರತೀಯ ರಾಯಭಾರ ಕಚೇರಿ ಒಮನ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದೆ.
“ಶುಕ್ರವಾರ (ಅ. 2) ಮುಂಜಾನೆ ಹೊರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿಯೊಂದು ಬಡಿದ ಕುವೈತ್ ಧ್ವಜದ ಟ್ಯಾಂಕರ್ ಹಡಗು ಎಂಟಿ ಕಾಜಿಮಹ್ IIIನಲ್ಲಿದ್ದ ಐವರು ಭಾರತೀಯರನ್ನು ರಕ್ಷಿಸಲಾಗಿದೆ. ಎಲ್ಲ ಐವರು ಭಾರತೀಯರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕುವೈತ್ ಧ್ವಜದಡಿ ಸಂಚರಿಸುತ್ತಿದ್ದ ಈ ಕಚ್ಚಾ ತೈಲ ಸಾಗಿಸುವ ಟ್ಯಾಂಕರ್ ಹಡಗು ಟೋಗೋದ ಲೋಮೆ ಬಂದರಿನತ್ತ ತೆರಳುತ್ತಿತ್ತು. ಪರ್ಷಿಯನ್ ಕೊಲ್ಲಿಯಲ್ಲಿ ವಾಣಿಜ್ಯ ಹಡಗುಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಾವಿಕರ ಸುರಕ್ಷತೆಗಾಗಿ ಭಾರತ ತನ್ನ ಪ್ರಯತ್ನಗಳನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪರ್ಷಿಯನ್ ಕೊಲ್ಲಿ, ಕೆಂಪು ಸಮುದ್ರ ಮತ್ತು ಕಪ್ಪು ಸಮುದ್ರ ಪ್ರದೇಶಗಳಲ್ಲಿ ಸಮುದ್ರ ಭದ್ರತೆಗೆ ಸಂಬಂಧಿಸಿದ ಅಪಾಯಗಳು ಹೆಚ್ಚಾಗಿದ್ದು, ವಾಣಿಜ್ಯ ಹಡಗುಗಳ ಮೇಲೆ ಪದೇ ಪದೆ ದಾಳಿಗಳು ನಡೆಯುತ್ತಿವೆ.
ಇಲ್ಲಿದೆ ಪೋಸ್ಟ್:
Earlier today, the Mission coordinated rescue of five Indian nationals on board the Kuwait-flagged tanker MT Kazimah III, struck by a projectile in the Strait of Hormuz.
— India in Oman (Embassy of India, Muscat) (@Indemb_Muscat) October 2, 2026
All 5 Indian nationals have been shifted ashore safely.
We thank the Omani authorities for their continued…
ಪ್ರಸ್ತುತ ಈ ಪ್ರದೇಶದಲ್ಲಿ 4,500ಕ್ಕೂ ಹೆಚ್ಚು ಭಾರತೀಯ ನಾವಿಕರು ವಾಣಿಜ್ಯ ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಇದರಲ್ಲಿ 12 ಸಕ್ರಿಯ ಸರಕು ಸಾಗಣೆ ಹಡಗುಗಳಲ್ಲಿ 163 ಭಾರತೀಯ ನಾವಿಕರು ಇದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಆತಂಕ: ಭಾರತೀಯ ಸಿಬ್ಬಂದಿಯಿದ್ದ ಎರಡು ಹಡಗುಗಳ ಮೇಲೆ ದಾಳಿ
“ಪರ್ಷಿಯನ್ ಕೊಲ್ಲಿಯಲ್ಲಿ ಭಾರತದ ಧ್ವಜದಡಿ ಸಂಚರಿಸುತ್ತಿರುವ ಆರು ವಾಣಿಜ್ಯ ಹಡಗುಗಳಿವೆ. ಭಾರತಕ್ಕೆ ಸರಕು ಸಾಗಿಸುತ್ತಿರುವ ವಿದೇಶಿ ಧ್ವಜದ ಆರು ಹಡಗುಗಳೂ ಇವೆ. ಹೀಗಾಗಿ ಒಟ್ಟು 12 ಹಡಗುಗಳಿವೆ. ಈ ಹಡಗುಗಳಲ್ಲಿ ಸುಮಾರು 163 ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದರ ಹೊರತಾಗಿ, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಾಣಿಜ್ಯ ಹಡಗುಗಳಲ್ಲಿ 4,500ಕ್ಕೂ ಹೆಚ್ಚು ಭಾರತೀಯ ನಾವಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಭಾರತೀಯ ನಾವಿಕರ ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡುವುದರ ಜತೆಗೆ, ಹಡಗುಗಳ ಸಂಚಾರವನ್ನು ಗಮನಿಸಲು ಹಡಗು ಸಾಗಣೆ ಸಚಿವಾಲಯವು ಭಾರತೀಯ ರಾಜತಾಂತ್ರಿಕ ಕಚೇರಿಗಳು ಮತ್ತು ಸ್ಥಳೀಯ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.