ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೊಲೀಸ್‌ ತಪಾಸಣಾ ಕೇಂದ್ರಕ್ಕೆ ವಾಹನ ನುಗ್ಗಿಸಿ ಸ್ಫೋಟಿಸಿದ ಆತ್ಮಹತ್ಯಾ ಬಾಂಬರ್‌; ಪಾಕಿಸ್ತಾನದಲ್ಲಿ 11 ಮಂದಿ ಸಾವು

ಭೀಕರ ಬಾಂಬ್‌ ದಾಳಿಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದ್ದು, ಕನಿಷ್ಠ 11 ಮಂದಿ ಮೃತಪಟ್ಟು, ಸುಮಾರು 30 ಮಂದಿ ಗಾಯಗೊಂಡ ಘಟನೆ ಶನಿವಾರ (ಸೆಪ್ಟೆಂಬರ್‌ 26) ನಡೆದಿದೆ. ವಾಯುವ್ಯ ಪಾಕಿಸ್ತಾನದ ರಸ್ತೆಬದಿಯ ಪೊಲೀಸ್ ತಪಾಸಣಾ ಕೇಂದ್ರವೊಂದರ ಬಳಿ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಸ್ಫೋಟಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆತ್ಮಾಹುತಿ ಬಾಂಬರ್‌ ದಾಳಿಗೆ ಪಾಕಿಸ್ತಾನಲ್ಲಿ 11 ಮಂದಿ ಸಾವು

-

Ramesh Ballamoole
Ramesh Ballamoole Sep 26, 2026 6:18 PM

ಇಸ್ಲಾಮಾಬಾದ್‌, ಸೆ. 26: ಪಾಕಿಸ್ತಾನದಲ್ಲಿ ಭೀಕರ ಬಾಂಬ್‌ ಸ್ಫೋಟ ಸಂಭವಿಸಿ ಕನಿಷ್ಠ 11 ಮಂದಿ ಮೃತಪಟ್ಟು, ಸುಮಾರು 30 ಮಂದಿ ಗಾಯಗೊಂಡ ಘಟನೆ ಶನಿವಾರ (ಸೆಪ್ಟೆಂಬರ್‌ 26) ನಡೆದಿದೆ. ವಾಯುವ್ಯ ಪಾಕಿಸ್ತಾನದ ರಸ್ತೆಬದಿಯ ಪೊಲೀಸ್ ತಪಾಸಣಾ ಕೇಂದ್ರವೊಂದರ ಬಳಿ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಸ್ಫೋಟಿಸಿದ್ದಾನೆ ಎಂದು ಪೊಲೀಸ್ ಹಾಗೂ ರಕ್ಷಣಾ ಕಾರ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯು ಖೈಬರ್ ಪಖ್ತುಂಕ್ವಾದ ಜಿಲ್ಲೆಯಾದ ಡೆರಾ ಇಸ್ಮಾಯಿಲ್ ಖಾನ್‌ನಲ್ಲಿ ನಡೆದಿದೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ತೆಹ್ರೀಕ್-ಎ-ತಾಲೀಬಾನ್ ಪಾಕಿಸ್ತಾನ್ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಸಂಘಟನೆಯು ಅಫ್ಘಾನಿಸ್ತಾನದಲ್ಲಿ 2021ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಅಫ್ಘಾನ್ ತಾಲಿಬಾನ್‌ನಿಂದ ಪ್ರತ್ಯೇಕವಾಗಿದ್ದರೂ, ಅದರೊಂದಿಗೆ ಮೈತ್ರಿ ಹೊಂದಿದೆ. ಸ್ಫೋಟದ ಕುರಿತು ಮಾಹಿತಿ ಪಡೆದ ನಂತರ ದರಾಜಿಂದಾದ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ಆರಂಭಿಸಿದವು. ಗಾಯಗೊಂಡವರಿಗೆ ವೈದ್ಯಕೀಯ ನೆರವು ನೀಡಿದ ಬಳಿಕ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದರು.

ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ:



ಅಸೋಸಿಯೇಟೆಡ್ ಪ್ರೆಸ್ (AP) ವರದಿಯ ಪ್ರಕಾರ, ತಪಾಸಣಾ ಕೇಂದ್ರವೊಂದರ ಬಳಿ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಸ್ಫೋಟಿಸಿದ ಪರಿಣಾಮ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಸದ್ಯ ಸ್ಫೋಟ ಸಂಭವಿಸಿದ ಸ್ಥಳದಲ್ಲಿನ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದಟ್ಟ ಹೊಗೆ ಆವರಿಸಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಇಟ್ಟಿಗೆ, ಸಿಮೆಂಟ್‌ ಚೂರು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ಕಾರು ಬಾಂಬ್ ಸ್ಫೋಟ: ಐವರು ಬಲಿ

ನಿರಂತರ ದಾಳಿ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯ ಸಮೀಪವಿರುವ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಪದೇ ಪದೆ ಉಗ್ರರ ದಾಳಿಗಳು ನಡೆಯುತ್ತಿವೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಕೊಹಾಟ್ ಜಿಲ್ಲೆಯಲ್ಲಿನ ಮಸೀದಿಯೊಂದಕ್ಕೆ ಸ್ಫೋಟಕ ತುಂಬಿದ ವಾಹನವನ್ನು ನುಗ್ಗಿಸಿದ ಘಟನೆಯ ಒಂದು ವಾರದ ನಂತರ ಈ ದಾಳಿ ನಡೆದಿದೆ. ಆ ಹಿಂದಿನ ದಾಳಿಯಲ್ಲಿ ಪೊಲೀಸ್ ಕಚೇರಿಯ ಹೊರಗೋಡೆ ಕುಸಿದುಬಿದ್ದಿತ್ತು ಮತ್ತು ಮಸೀದಿಗೆ ತೀವ್ರ ಹಾನಿಯಾಗಿತ್ತು.

ಮಸೀದಿಯೊಳಗೆ ಬಾಂಬ್ ಸ್ಫೋಟಗೊಂಡ ಪರಿಣಾಮ 21 ಮಂದಿ ಮೃತಪಟ್ಟು 78 ಮಂದಿ ಗಾಯಗೊಂಡಿದ್ದರು. ಪೊಲೀಸ್ ಕಚೇರಿಗಳಿರುವ ಕಟ್ಟಡದ ಸಮೀಪವೇ ಈ ದಾಳಿ ನಡೆದಿತ್ತು. ಮೃತರಲ್ಲಿ 15 ಮಂದಿ ಪೊಲೀಸ್ ಅಧಿಕಾರಿಗಳೂ ಇದ್ದರು.

ಪಾಕಿಸ್ತಾನದ ಮಸೀದಿಯಲ್ಲಿ ಭೀಕರ ಸ್ಫೋಟ; 14 ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ

ಸ್ಫೋಟದ ಬಳಿಕವೂ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ ಪರಿಣಾಮ ಎರಡೂ ಕಡೆಯವರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಸ್ಫೋಟಕ ತುಂಬಿದ ಜಾಕೆಟ್ ಧರಿಸಿದ್ದ ಒಬ್ಬ ದಾಳಿಕೋರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಮೂಲಗಳು ತಿಳಿಸಿದ್ದವು. ಈ ಘಟನೆ ಮಾಸುವ ಮುನ್ನ ಮತ್ತೊಂದು ದಾಳಿ ನಡೆದಿರುವುದು ಸ್ಥಳೀಯರ ನಿದ್ದೆಗೆಡಿಸಿದೆ.