ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ನಿಮ್ಮದು ಪ್ರಜಾಪ್ರಭುತ್ವವಲ್ಲ, ಸೇನಾ ಸರ್ಕಾರ": ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಭಾರತ

India rips into Pak at UN: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಮ್ಮು-ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ರಾಜತಾಂತ್ರಿಕ ಮಟ್ಟದಲ್ಲಿ ಖಡಕ್ ತಿರುಗೇಟು ನೀಡಿದೆ. ಪಾಕ್‌ನ ಪ್ರಜಾಪ್ರಭುತ್ವದ ಮುಖವಾಡವನ್ನು ಬಿಚ್ಚಿಟ್ಟ ಭಾರತ, ಅದನ್ನು "ಸೇನೆಯಿಂದ, ಸೇನೆಗೋಸ್ಕರ ಮತ್ತು ಸೇನೆಯೇ ನಡೆಸುತ್ತಿರುವ ಆಡಳಿತ" ಎಂದು ಚಾಟಿ ಬೀಸಿದೆ. ಪಾಕಿಸ್ತಾನಕ್ಕೆ ಮಾನವ ಹಕ್ಕುಗಳ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಭಾರತದ ಪ್ರತಿನಿಧಿ ಖಡಕ್ ಆಗಿ ಹೇಳಿದರು.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ಚಾಟಿ

ಪೆಟಲ್ ಗೆಹ್ಲೋಟ್ -

Ramesh Ballamoole
Ramesh Ballamoole Sep 26, 2026 3:14 PM

ನ್ಯೂಯಾರ್ಕ್, ಸೆ. 26: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಮತ್ತೆ ಕೆದಕಿದ ಪಾಕಿಸ್ತಾನಕ್ಕೆ ಭಾರತ ಖಡಕ್‌ ಪ್ರತ್ಯುತ್ತರ ನೀಡಿದ್ದು, ಪಾಕ್ ಸರ್ಕಾರವನ್ನು “ಸೇನೆಯಿಂದ, ಸೇನೆಗೋಸ್ಕರ ಮತ್ತು ಸೇನೆಯೇ ನಡೆಸುತ್ತಿರುವ ಆಡಳಿತ” (Regime of the army, by the army, for the army) ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಪೆಟಲ್ ಗೆಹ್ಲೋಟ್ ಪ್ರತ್ಯುತ್ತರ ನೀಡುವ ಹಕ್ಕನ್ನು (Right of Reply) ಚಲಾಯಿಸಿ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಾಡಿದ್ದ ಪ್ರಚೋದನಾಕಾರಿ ಆರೋಪಗಳಿಗೆ ಸಾಕ್ಷಿ ಸಮೇತ ತಿರುಗೇಟು ನೀಡಿದರು. ಸ್ವತಃ ತನ್ನ ದೇಶದಲ್ಲೇ ಸಾರ್ವಜನಿಕರ ಮೇಲೆಯೇ ಸೇನಾ ದಬ್ಬಾಳಿಕೆ ನಡೆಸುತ್ತಿರುವ ಪಾಕಿಸ್ತಾನಕ್ಕೆ, ಇತರ ರಾಷ್ಟ್ರಗಳ ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಭಾರತ ಖಡಕ್ ಆಗಿ ಹೇಳಿತು.

ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯಲ್ಲಿ ಶೆಹಬಾಜ್ ಷರೀಫ್ ಭಾರತದ ವಿರುದ್ಧ ಮಾಡಿದ ಟೀಕೆಗಳಿಗೆ ಪ್ರತ್ಯುತ್ತರ ನೀಡಿರುವ ಪೆಟಲ್ ಗೆಹ್ಲೋಟ್, 'ʼಪಾಕಿಸ್ತಾನದಲ್ಲಿ ಅಧಿಕಾರದಲ್ಲಿರುವ ನಾಯಕರು ಕೇವಲ ಕೈಗೊಂಬೆಗಳು. ಅಲ್ಲಿ ನಿಜವಾದ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ಪಾಕಿಸ್ತಾನ, ಸ್ವತಃ ತನ್ನದೇ ದೇಶದ ಪ್ರಜೆಗಳ ವಿರುದ್ಧ ರಾಜಧಾನಿಯನ್ನು ಸೇನಾ ಕೋಟೆಯನ್ನಾಗಿ ಪರಿವರ್ತಿಸಿದೆ'' ಎಂದು ಹೇಳಿದರು.

ಪಾಕಿಸ್ತಾನದ ಬೆವರಿಳಿಸಿದ ಭಾರತ:



“ಹಗಲಿನಲ್ಲಿ ಭದ್ರತೆ ಮತ್ತು ಶಾಂತಿಯ ಮಾತುಗಳನ್ನಾಡುವ ಪಾಕಿಸ್ತಾನ, ರಾತ್ರಿಯಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತದೆ. ಉಗ್ರವಾದ, ವಂಚನೆ ಮತ್ತು ದ್ವಂದ್ವ ನೀತಿಯಿಂದ ಪಾಕಿಸ್ತಾನಕ್ಕಾಗಲಿ ಅಥವಾ ಜಗತ್ತಿಗಾಗಲಿ ಯಾವುದೇ ಪ್ರಯೋಜನವಿಲ್ಲ” ಎಂದು ಭಾರತ ಸ್ಪಷ್ಟಪಡಿಸಿತು. ಒಸಾಮಾ ಬಿನ್‌ ಲಾಡೆನ್‌ ನೆನಪಿಸಿದ ಭಾರತ 9/11 ಭಯೋತ್ಪಾದಕ ದಾಳಿಯ 25ನೇ ವಾರ್ಷಿಕೋತ್ಸವ ಮುಗಿದ ಬೆನ್ನಲ್ಲೇ ಪಾಕಿಸ್ತಾನದ ಈ ಹೇಳಿಕೆಗಳು ಹಾಸ್ಯಾಸ್ಪದ. ವಿಶ್ವದ ಅತ್ಯಂತ ಭೀಕರ ಉಗ್ರ ಒಸಾಮಾ ಬಿನ್ ಲಾಡೆನ್, ಪಾಕಿಸ್ತಾನದ ಪ್ರಮುಖ ಮಿಲಿಟರಿ ಅಕಾಡೆಮಿಯ ಅಕ್ಕಪಕ್ಕದಲ್ಲೇ ಅಡಗಿ ಕುಳಿತಿದ್ದನ್ನು ಜಗತ್ತು ಮರೆತಿಲ್ಲ ಎಂದು ಭಾರತ ನೆನಪಿಸಿತು.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಭಾಷಣ; ಭಾರತೀಯ ರಾಜತಾಂತ್ರಿಕರ ‘ಸ್ಮೈಲ್‌’ ವೈರಲ್!

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ

ಜಮ್ಮು ಮತ್ತು ಕಾಶ್ಮೀರದ ಕುರಿತು ಶೆಹಬಾಜ್ ಷರೀಫ್ ಮಾಡಿದ ಪ್ರಸ್ತಾಪಕ್ಕೆ ಪ್ರತ್ಯುತ್ತರ ನೀಡಿದ ಗೆಹ್ಲೋಟ್, ʼʼಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಅಂಗʼʼ ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದರು.

“ಇದು ನನ್ನ ದೇಶದ ಅತ್ಯಂತ ಪ್ರಮುಖ ಹಾಗೂ ಬೇರ್ಪಡಿಸಲಾಗದ ಅಂಗವಾಗಿದ್ದು, ಎಂದೆಂದಿಗೂ ಹಾಗೆಯೇ ಇರಲಿದೆ” ಎಂದು ಅವರು ಹೇಳಿದರು. ʼʼಒಂದು ವೇಳೆ ನಾವು ಕಾಶ್ಮೀರದ ಕುರಿತು ಮಾತನಾಡಲೇಬೇಕೆಂದಿದ್ದರೆ, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದತ್ತ ನಮ್ಮ ಗಮನ ಹರಿಸೋಣ. ಅಲ್ಲಿನ ರಾವಲಾಕೋಟ್ ಪ್ರಜೆಗಳನ್ನು ಕೇಳಿ ನೋಡಿ. ಅವರು ದೀರ್ಘಕಾಲದಿಂದ ಅನುಭವಿಸುತ್ತಿರುವ ಅಮಾನವೀಯ ಹತ್ಯೆಗಳು, ಭೀಕರ ಹಿಂಸಾಚಾರ ಮತ್ತು ಮೂಲಭೂತ ಹಕ್ಕುಗಳ ವಂಚನೆಯ ಕಹಿ ಸತ್ಯ ನಿಮಗರಿವಾಗುತ್ತದೆ” ಎಂದು ಅವರು ಹೇಳಿದರು.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.