ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mass Shooting in Louisiana: ಲೂಸಿಯಾನದಲ್ಲಿ ಗುಂಡಿನ ದಾಳಿ; 1ರಿಂದ 14 ವರ್ಷದ 8 ಮಕ್ಕಳು ಸಾವು

Mass Shooting: ಅಮೆರಿಕದ ಲೂಸಿಯಾನ ರಾಜ್ಯದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ರಕ್ತದೋಕುಳಿಯೇ ಹರಿದಿದ್ದು, ದುಷ್ಕರ್ಮಿಯ ಅಟ್ಟಹಾಸಕ್ಕೆ 1 ವರ್ಷದ ಮಗು ಸೇರಿ 8 ಮಕ್ಕಳು ಬಲಿಯಾಗಿದ್ದಾರೆ. ಶ್ರೆವೆಪೋರ್ಟ್‌ನಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಂದೂಕುಧಾರಿಯನ್ನೂ ಹೊಡೆದುರುಳಿಸಲಾಗಿದೆ.

ಲೂಸಿಯಾನದಲ್ಲಿ ಗುಂಡಿನ ದಾಳಿ; 8 ಮಕ್ಕಳು ಸಾವು

ಅಮೆರಿಕದ ಶ್ರೆವೆಪೋರ್ಟ್‌ನಲ್ಲಿ ಬಿಗಿ ಬಂದೋಬಸ್ತ್‌ (ಇಂಟರ್‌ನೆಟ್‌ ಚಿತ್ರ) -

Ramesh Ballamoole
Ramesh Ballamoole Apr 19, 2026 11:20 PM

ವಾಷಿಂಗ್ಟನ್‌, ಏ. 19: ಅಮೆರಿಕದ ಲೂಸಿಯಾನ (Louisiana) ರಾಜ್ಯದಲ್ಲಿ ಭಾನುವಾರ (ಏಪ್ರಿಲ್‌ 19) ಬೆಳ್ಳಂಬೆಳಗ್ಗೆ ರಕ್ತದೋಕುಳಿಯೇ ಹರಿದಿದ್ದು, ದುಷ್ಕರ್ಮಿಯ ಅಟ್ಟಹಾಸಕ್ಕೆ 1 ವರ್ಷದ ಮಗು ಸೇರಿ 8 ಮಕ್ಕಳು ಬಲಿಯಾಗಿದ್ದಾರೆ (Mass Shooting in Louisiana). ಶ್ರೆವೆಪೋರ್ಟ್‌ನಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಒಟ್ಟು 10 ಮಂದಿಗೆ ಗುಂಡೇಟು ತಗುಲಿದ್ದು, ಬಂದೂಕುಧಾರಿಯನ್ನೂ ಹೊಡೆದುರುಳಿಸಲಾಗಿದೆ. ಭಾನುವಾರದ ರಜೆಯ ಗುಂಗಿನಲ್ಲಿದ್ದವರನ್ನು ಈ ಘಟನೆ ಬೆಚ್ಚಿ ಬೀಳಿಸಿದೆ. ಮೃತರೆಲ್ಲ ಸುಮಾರು 1ರಿಂದ 14 ವರ್ಷ ವಯಸ್ಸಿನವರು.

ʼʼಕೆಲವು ಮೃತ ಮಕ್ಕಳು ಶಂಕಿತ ಬಂದೂಕುಧಾರಿಯ ಸಂಬಂಧಿಕರು ಎಂದು ಪ್ರಾಥಮಿಕ ವರದಿ ತಿಳಿಸಿದೆ. ಕೊನೆಗೆ ಪೊಲೀಸರು ಚೇಸ್‌ ಮಾಡಿ ಬಂದೂಕುಧಾರಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯಾಕಾಂಡದ ಬಗ್ಗೆ ಪೊಲೀಸ್‌ ಅಧಿಕಾರಿಂದ ಮಾಹಿತಿ:



ಶ್ರೆವೆಪೋರ್ಟ್ ಪೊಲೀಸ್ ಮುಖ್ಯಸ್ಥ ವೇಯ್ನ್ ಸ್ಮಿತ್ ಮಾತನಾಡಿ, ʼʼಗುಂಡಿನ ದಾಳಿಯು ಕೌಟುಂಬಿಕ ಕಲಹದಿಂದ ಉಂಟಾಗಿದೆ. ಈ ದಾಳಿಯು ಸಾಮಾನ್ಯಕ್ಕಿಂತ ಭಿನ್ನವಾಗಿ 3 ಪ್ರತ್ಯೇಕ ಸ್ಥಳಗಳಲ್ಲಿ ನಡೆದಿದೆʼʼ ಎಂದು ತಿಳಿಸಿದ್ದಾರೆ. ಘಟನೆಯ ನಿಖರ ಕಾರಣ ಪತ್ತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಂದೂಕುಧಾರಿಯನ್ನು ಹಿಂಬಾಲಿಸಿ ಹೊಡೆದುರುಳಿಸಿದ ಪೊಲೀಸರು

ಮಕ್ಕಳ ಮೇಲೆ ಮನಬಂದಂತೆ ದಾಳಿ ನಡೆಸಿದ ತಕ್ಷಣ ಬಂದೂಕುಧಾರಿ ಸ್ಥಳದಿಂದ ಪರಾರಿಯಾಗಿದ್ದಾನೆ. ವೆಸ್ಟ್ 79ನೇ ಬೀದಿ ಮತ್ತು ಲಿನ್ವುಡ್ ಬಳಿ ಕಾರು ಕಳವು ಮಾಡಿ ಓಡಿ ಹೋಗಲು ಯತ್ನಿಸಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಿದ್ದ ಶ್ರೆವೆಪೋರ್ಟ್ ಪೊಲೀಸ್ ಅಧಿಕಾರಿಗಳು ಆತನನ್ನು ಬೆನ್ನಟ್ಟಿದರು ಎಂದು ವರದಿ ತಿಳಿಸಿದೆ. ಕೊನೆಗೆ ಬೋಸಿಯರ್ ನಗರದಲ್ಲಿ ಕೊಲೆಗಾರ ಪತ್ತೆಯಾಗಿದ್ದು, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸರು ಗುಂಡೇಟಿಗೆ ಬಲಿಯಾಗಿದ್ದಾನೆ. ಓರ್ವ ವ್ಯಕ್ತಿಯಿಂದ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆತ ಬಲಿಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆತನ ಹಿನ್ನೆಲೆ ಪತ್ತೆಗೆ ತನಿಖೆ ಆರಂಭಗೊಂಡಿದೆ.

ಕೆನಡಾ ಬಳಿಕ ಥೈಲ್ಯಾಂಡ್‌ನ ಶಾಲೆ ಮೇಲೆಯೂ ಗುಂಡಿನ ದಾಳಿ; ವಿದ್ಯಾರ್ಥಿಗಳ ರಕ್ಷಣೆ

ಅಧಿಕಾರಿಗಳಿಗೆ ಗಾಯವಾಗಿಲ್ಲ

ಲೂಸಿಯಾನ ಪೊಲೀಸರ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಯಾವುದೇ ಅಧಿಕಾರಿ ಗಾಯಗೊಂಡಿಲ್ಲ. ಸ್ಥಳೀಯ ಅಧಿಕಾರಿಗಳ ಕೋರಿಕೆಯ ಮೇರೆಗೆ ರಾಜ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಯಾರ ಬಳಿಯಾದರೂ ದುಷ್ಕರ್ಮಿಯ ಫೋಟೊ, ವಿಡಿಯೊ ಅಥವಾ ಮಾಹಿತಿ ಹೊಂದಿದ್ದರೆ ಹಂಚಿಕೊಳ್ಳಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ನಗರದ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನೂ ಪರಿಶೀಲಿಸಲಾಗುತ್ತಿದೆ.

ಕೆನಡಾ ಶಾಲೆಯ ಮೇಲೆ ದಾಳಿ

ಕೆಲವು ದಿನಗಳ ಹಿಂದೆ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶೂಟರ್ ಸೇರಿದಂತೆ 10 ಮಂದಿ ಮೃತಪಟ್ಟು, ಕನಿಷ್ಠ 25 ಜನರು ಗಾಯಗೊಂಡಿದ್ದರು. ಮಹಿಳೆ ಈ ದಾಳಿ ನಡೆಸಿದ್ದು, ಮಕ್ಕಳನ್ನು ಕೊಂಡ ಬಳಿಕ ಶಾಲಾ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 1.20ರ ಸುಮಾರಿಗೆ ಘಟನೆ ನಡೆದಿತ್ತು.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.