ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನವೆಂಬರ್‌ನಲ್ಲಿ ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಭಾರತಕ್ಕೆ ಭೇಟಿ?

Bangladesh PM Tarique Rahman: ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನರ್ ದಿನೇಶ್ ತ್ರಿವೇದಿ ಅವರು, ರಹಮಾನ್ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ನೀಡಲಾದ ಆಹ್ವಾನವು ಇನ್ನೂ ಜಾರಿಯಲ್ಲಿದೆ ಮತ್ತು ಈ ಭೇಟಿಯ ವಿಷಯದಲ್ಲಿ ಆತುರಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ನವೆಂಬರ್‌ನಲ್ಲಿ ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಭಾರತಕ್ಕೆ ಭೇಟಿ?

Bangladesh PM Tarique Rahman India Visit -

Abhilash BC
Abhilash BC Oct 24, 2026 9:39 AM

ನವದೆಹಲಿ, ಅ.24: ಬಾಂಗ್ಲದೇಶದ ನೂತನ ಪ್ರಧಾನಿ ತಾರಿಕ್‌ ರೆಹಮಾನ್‌ ಅವರು ನವೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2026ರ ಫೆಬ್ರವರಿಯಲ್ಲಿ ಬಾಂಗ್ಲಾದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಾರಿಕ್‌ ರೆಹಮಾನ್‌ ಅವರು ಭಾರತಕ್ಕೆ ಕೈಗೊಳ್ಳುತ್ತಿರುವ ಮೊದಲ ಅಧಿಕೃತ ದ್ವಿಪಕ್ಷೀಯ ಪ್ರವಾಸ ಇದಾಗಲಿದೆ.

ಉಭಯ ದೇಶಗಳ ರಾಜತಾಂತ್ರಿಕ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಭೇಟಿ ನೀಡಲಿದ್ದಾರೆ. ಈ ದ್ವಿಪಕ್ಷೀಯ ಭೇಟಿಯ ಕುರಿತು ಭಾರತ ಮತ್ತು ಬಾಂಗ್ಲಾದೇಶದ ಅಧಿಕಾರಿಗಳ ಮಟ್ಟದ ಮಾತುಕತೆಗಳು ನಡೆದಿವೆ ಎಂದು ಮೂಲಗಳು ಹೇಳಿವೆ.

ಡಿಸೆಂಬರ್ 12 ರಂದು ಮುಕ್ತಾಯಗೊಳ್ಳಲಿರುವ ಗಂಗಾ ನದಿ ನೀರು ಹಂಚಿಕೆ ಒಪ್ಪಂದವನ್ನು ನವೀಕರಿಸುವ ಕುರಿತು, ಭಾರತ ಮತ್ತು ಬಾಂಗ್ಲಾದೇಶಗಳು ತಮ್ಮ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಕಾರ್ಯವಿಧಾನಗಳ ಮೂಲಕ ಚರ್ಚೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ನವೆಂಬರ್ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಆಗಸ್ಟ್‌ 2024ರಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ದೇಶ ತೊರೆದು ಭಾರತಕ್ಕೆ ಆಗಮಿಸಿದ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ್‌ ಬಾಂಧವ್ಯದಲ್ಲಿ ಕಲೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಹಸೀನಾ ಅವರನ್ನು ಹಸ್ತಾಂತರಿಸುವಂತೆ ಢಾಕಾ ಮನವಿ ಮಾಡಿದ್ದರೂ, ಭಾರತ ಈ ಬಗ್ಗೆ ನಿರ್ಧಾರ ತಳೆದಿಲ್ಲ. ಈ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.

ಬಿಹಾರದಲ್ಲಿ ಪಟಾಕಿ ತಯಾರಿಕಾ ಮನೆಯಲ್ಲಿ ಭೀಕರ ಸ್ಫೋಟ: ನಾಲ್ವರ ದುರ್ಮರಣ

ಈ ತಿಂಗಳ ಆರಂಭದಲ್ಲಿ, ಬಾಂಗ್ಲಾದೇಶದ ಜಲಸಂಪನ್ಮೂಲ ಸಚಿವ ಶಾಹಿದುದ್ದೀನ್ ಚೌಧರಿ ಅನಿ ಅವರು, ಡಿಸೆಂಬರ್ 12ರ ಮೊದಲು ಭಾರತದೊಂದಿಗೆ ಹೊಸ ಒಪ್ಪಂದವೊಂದು ಸಹಿಗೊಳ್ಳಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

"1977ರ ಒಪ್ಪಂದದಲ್ಲಿದ್ದಂತೆ, ಖಾತರಿ ಷರತ್ತನ್ನು ಮರುಸ್ಥಾಪಿಸುವುದು ಹೊಸ ಒಪ್ಪಂದದಲ್ಲಿ ಬಾಂಗ್ಲಾದೇಶದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ' ಎಂದು ಶಾಹಿದುದ್ದೀನ್ ಹೇಳಿದ್ದರು.

ಗಂಗಾ ನದಿ ನೀರು ಹಂಚಿಕೆ ಒಪ್ಪಂದವು ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ 30 ವರ್ಷಗಳ ದ್ವಿಪಕ್ಷೀಯ ಒಪ್ಪಂದವಾಗಿದೆ. ಇದನ್ನು 1996ರ ಡಿಸೆಂಬರ್ 12ರಂದು ಪ್ರಧಾನ ಮಂತ್ರಿಗಳಾದ ಎಚ್.ಡಿ. ದೇವೇಗೌಡ ಮತ್ತು ಶೇಖ್ ಹಸೀನಾ ಅವರು ಸಹಿ ಹಾಕುವ ಮೂಲಕ ಅಸ್ತಿತ್ವಕ್ಕೆ ತಂದರು. ಈ ಒಪ್ಪಂದವು ಪ್ರತಿ ವರ್ಷ ಜನವರಿ 1ರಿಂದ ಮೇ 31ರವರೆಗಿನ ನೀರಿನ ಕೊರತೆಯ ಅವಧಿಯಲ್ಲಿ, ಪಶ್ಚಿಮ ಬಂಗಾಳದ ಫರಕ್ಕಾ ಬ್ಯಾರೇಜ್‌ನಲ್ಲಿ ಗಂಗಾ ನದಿಯ ನೀರನ್ನು ಹಂಚಿಕೊಳ್ಳುವ ವಿಧಾನವನ್ನು ನಿಯಂತ್ರಿಸುತ್ತದೆ.

ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನರ್ ದಿನೇಶ್ ತ್ರಿವೇದಿ ಅವರು, ರಹಮಾನ್ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ನೀಡಲಾದ ಆಹ್ವಾನವು ಇನ್ನೂ ಜಾರಿಯಲ್ಲಿದೆ ಮತ್ತು ಈ ಭೇಟಿಯ ವಿಷಯದಲ್ಲಿ ಆತುರಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.