Touring Spot: ಇಲ್ಲಿದೆ ಪ್ರಪಂಚದ 9 ಅತ್ಯಂತ ಸುಂದರ ಊರುಗಳು – ಇಲ್ಲಿಗೆ ಭೇಟಿ ಕೊಡುವುದೇ ಒಂದು ಅನುಪಮ ಅನುಭವ?
ನಮ್ಮ ವಿಶ್ವ ವೈಚಿತ್ರ್ಯಗಳ ಆಗರ. ಪ್ರಕೃತಿ ರಮಣೀಯ ತಾಣಗಳು ಮತ್ತು ರುದ್ರ ರಮಣೀಯ ಪ್ರದೇಶಗಳು ಈ ನಮ್ಮ ಭೂಮಂಡಲದ ವಿಶೇಷತಗಳಲ್ಲಿ ಒಂದಾಗಿದೆ. ಸ್ವರ್ಗದಿಂದ ಉದುರಿಬಿದ್ದ ತುಣುಕಿನಂತಿರುವ ಸುಂದರ ಊರುಗಳನ್ನು ನೋಡುವುದೆಂದರೆ ಕಣ್ಣಿಗೆ ಒಂದು ಹಬ್ಬ. ಇಲ್ಲಿದೆ ಅಂತಹ ಒಂಭತ್ತು ಸೌಂದರ್ಯಮಯ ಊರುಗಳ ಸಂಕ್ಷಿಪ್ತ ಪರಿಚಯ.

ಸಾಂದರ್ಭಿಕ ಚಿತ್ರ

ನವದೆಹಲಿ: ಈ ನಮ್ಮ ಭೂಮಿಯ ಸಂರಚನೆಯೇ ಅತ್ಯದ್ಭುತವಾದದ್ದು. ಒಂದೆಡೆ ಹಿಮರಾಶಿಯಿದ್ದರೆ, ಇನ್ನೊಂದೆಡೆ ಬರಡು ಮರಳುಗಾಡು, ಮತ್ತೊಂದೆಡೆ ಅಗಾಧ ಕಡಲಿದ್ದರೆ, ಅದರ ಮಗದೊಂದೆಡೆ ನಿತ್ಯ ಹರಿದ್ವರ್ಣದಿಂದ ಕಂಗೊಳಿಸುತ್ತಿರುವ ಸುಂದರ ಕಾನನ. ಕೆಲವೆಡೆ ಜ್ವಾಲಾಮುಖಿ ಭೂಮಿಯೊಡಳಿಂದ ಬಾಯ್ತೆರೆದು ಹರಿಯುತ್ತಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಪರಿಶುದ್ಧವಾದ ಜಲರಾಶಿ ಬೆಟ್ಟದ ಕೊರಕಲುಗಳಿಂದ ಇಳಿದು ಬಯಲು ಸೀಮೆಗಳನ್ನು ಹಸುರಾಗಿಸಿ ಸಮುದ್ರವನ್ನು ಸೇರುತ್ತದೆ. ವಿಶ್ವದ ಅಪಾಯಕಾರಿ ಕಾಡುಗಳಲ್ಲಿ ಒಂದಾದ ಅಮೆಜಾನ್ ನಿಗೂಢಗಳನ್ನೇ ತನ್ನ ಒಡಲಲ್ಲಿ ತುಂಬಿಕೊಂಡಿದ್ದರೆ, ಹಿಮಾಲಯ ಪರ್ವತ ಶ್ರೇಣಿಗಳು ಮುಗಿಲಿಗೆ ಬಿಳಿ ಏಣಿ ಇಟ್ಟಂತೆ ಕಂಗೊಳಿಸುತ್ತಿರುತ್ತವೆ(Touring Spot). ಇನ್ನು ಕೆಲವೆಡೆ ಬಿಸಿನೀರಿನ ಬುಗ್ಗೆಗಳು, ಮತ್ತೆ ಕೆಲವೆಡೆ ಸಿಹಿ ನೀರಿನ ಸರೋವರಗಳು.. ಹೀಗೆ ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲದಷ್ಟು ವೈವಿಧ್ಯತೆಯನ್ನು ಪ್ರಕೃತಿ ತನ್ನ ಒಡಲಲ್ಲಿರಿಸಿಕೊಂಡು ಸಕಲ ಜೀವರಾಶಿಗಳನ್ನು ಸಲಹುತ್ತಾ ‘ಪ್ರಕೃತಿ ಮಾತೆ’ ಎಂದು ಕರೆಯಿಸಿಕೊಳ್ಳುತ್ತಿದ್ದಾಳೆ.
ಹಾಗೆಯೇ ಈ ಪ್ರಪಂಚದಲ್ಲಿರುವ ಕೆಲವು ಊರುಗಳು ನಾವು ನೋಡದ, ಆದರೆ ಕೇವಲ ವರ್ಣನೆಗಳಲ್ಲೇ ಕೇಳಿ ತಿಳಿದುಕೊಂಡಿರುವ ಸ್ವರ್ಗದ ಪ್ರದೇಶಗಳ ಕಲ್ಪನೆಯನ್ನು ನಮ್ಮಲ್ಲಿ ಮೂಡಿಸುವುದಂತು ಸತ್ಯ. ಅಂತಹ ಸುಂದರ ಊರುಗಳ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ. ಹಿಮಾಚ್ಛಾದಿತ ಪರ್ವತಗಳು, ತಿಳಿನೀರಿನ ಸರೋವರಗಳು, ಸುತ್ತ ಹಸುರು ಪರಿಸರ, ಇವುಗಳ ನಡುವೆ ಇರುವ ಊರನ್ನು ಕಣ್ತುಂಬಿಕೊಳ್ಳುವುದೇ ಒಂದು ಸುಂದರ ಅನುಭವ. ಅದು, ಇಟಲಿಯ ಸರೋವರಗಳಿಂದಾವೃತವಾದ ಊರು ಇರಬಹುದು, ಸ್ಪೇನ್‌ನಲ್ಲಿರುವ ಪರ್ವತಗಳ ತಪ್ಪಲಿನಲ್ಲಿರುವ ಭೂ ಪ್ರದೇಶವಿರಬಹುದು. ವರ್ಣಮಯ ಕೊಲಂಬಿಯಾ ರತ್ನ ಪ್ರದೇಶವಿರಬಹುದು.. ಹೀಗೆ ಈ ಒಂದೊಂದು ಊರುಗಳ ಸೌಂದರ್ಯವನ್ನು ಸವಿಯಲು ಎರಡು ಕಣ್ಣುಗಳಂತೂ ಸಾಲದು. ಇಲ್ಲಿವೆ ಪ್ರಪಂಚದ ಒಂಭತ್ತು ಸುಂದರ ಊರುಗಳು
1 ಇಟಲಿಯ ಒರ್ಟಾ ಸಾನ್ ಜ್ಯೂಲಿಯೋ:
ಉತ್ತರ ಇಟಲಿಯಲ್ಲಿ ಒರ್ಟಾ ಸರೋವರದ ಬಲಿ ಇರುವ ಈ ಊರು ತನ್ನ ಸೌಂದರ್ಯದಿಂದಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮಧ್ಯಕಾಲೀನ ರಸ್ತೆಗಳು, ಸುಂದರ ವಿಲ್ಲಾಗಳು ಇರುವ ಈ ಸಣ್ಣ ದ್ವೀಪ ಪ್ರದೇಶ, ಈ ಸರೋವರದ ಮೇಲೆ ತೇಲುತ್ತಿರುವ ಸ್ವರ್ಗದಂತಿದೆ. ಮನಃಶಾಂತಿ ಮತ್ತು ಮೌನ ನಿಮ್ಮ ಆಯ್ಕೆಯಾಗಿದ್ದರೆ ನಿಮಗೆ ಇದಕ್ಕಿಂತ ಪ್ರಶಸ್ತ ಜಾಗ ಇನ್ನೊಂದಿರಲಾರದು.

2 ಫ್ರಿಗ್ಲಿಯಾನಾ, ಸ್ಪೈನ್:
ದಕ್ಷಿಣ ಸ್ಪೈನ್ ನ ಪರ್ವತ ಪ್ರದೇಶಗಳಲ್ಲಿರುವ ಫ್ರಿಗ್ಲಿಯಾನ, ಚತುರ ಕಲಾವಿದ ಬಿಡಿಸಿಟ್ಟ ಸುಂದರ ವರ್ಣಚಿತ್ರದಂತಿರುವ ಊರಾಗಿದೆ. ವೈಟ್ ವಾಶ್ ಮಾಡಲ್ಟಟ್ಟ ಮನೆಗಳು, ಶುಭ್ರ ನೀಲಿ ಬಾಗಿಲುಗಳು. ಸುಂದರವಾಗಿ ಅರಳಿ ನಿಂತ ಹೂಗಳು, ಛಾಯಾಚಿತ್ರಕಾರರಿಗೆ ಅವರ ಕನಸಿನ ತಾಣವಾಗುವುದರಲ್ಲಿ ಸಂಶಯವೇ ಇಲ್ಲ. ಈ ಊರಿನ ಮನೆ-ಬೀದಿಗಳ ತುಂಬೆಲ್ಲಾ ಸ್ಪೈನ್ ನ ಹೆಸರಾಂತ ಕಲೆಯಾಗಿರುವ ಮೂರಿಶ್ ನ ಪ್ರಭಾವ ಎದ್ದು ಕಾಣುತ್ತದೆ. ಇಲ್ಲಿರುವ ಬೆಟ್ಟದ ತುದಿಯಿಂದ ನಿಮಗೆ ಕಾಣಿಸುವ ಮೆಡಿಟರೇನಿಯನ್ ಸಮುದ್ರದ ಸುಂದರ ದೃಶ್ಯಗಳನ್ನು ವರ್ಣಿಸಲು ಪದಗಳೇ ಸಾಲದು.

3 ಬೈಬುರಿ, ಇಂಗ್ಲೆಂಡ್:
ನೀವು ಗ್ರೀಟಿಂಗ್ ಕಾರ್ಡ್ ಅಥವಾ ಪೋಸ್ಟ್ ಕಾರ್ಡ್ ಗಳಲ್ಲಿ ಇಂಗ್ಲಿಷ್ ಕಂಟ್ರಿ ಸೈಡ್ ನೋಡಿದ್ದರೆ ಅದು ಖಂಡಿತವಾಗಿಯೂ ಬೈಬುರಿ ಆಗಿರುವ ಸಾಧ್ಯತೆಗಳಿವೆ. ಅರ್ಲಿಂಗ್ಟನ್ ಸಾಲಿನಲ್ಲಿ ಕಾಣಿಸುವ ಇಲ್ಲಿನ ಸುಂದರ ಮನೆಗಳ ನಿರ್ಮಾಣವನ್ನು ಜೇನಿನ ಬಣ್ಣದ ಕಲ್ಲಿನಿಂದ ನಿರ್ಮಿಸಲಾಗಿದ್ದು ಇದು ಪ್ರಕೃತಿಯೊಂದಿಗೆ ಬೆರೆತಂತೆ ನಮಗೆ ಭಾಸವಾಗುತ್ತದೆ. ಈ ಊರಿನುದ್ದಕ್ಕೂ ಹರಿಯುವ ನದಿ ಇಲ್ಲಿನ ಸೊಬಗಿಗೆ ಹೊಸ ಚಲನಶೀಲತೆಯನ್ನು ಕೊಟ್ಟಿದೆ. ಈ ಊರಿನ ಹಾದಿಗಳಲ್ಲಿ ಹಾಗೇ ಸುಮ್ಮನೆ ನಡೆಯುತ್ತಿದ್ದರೆ ಆದ್ಯಾವುದೋ ರಾಜರ ಕಾಲದಲ್ಲಿ ಅಡ್ಡಾಡುತ್ತಿರುವ ನೆನಪು ನಿಮ್ಮನ್ನು ಕಾಡದಿರಲಾರದು!

4 ಒಗಿಮಾಚಿ, ಜಪಾನ್:
ಯುನೆಸ್ಕೋ ಪಟ್ಟಿಯಲ್ಲಿರುವ ಶಿರಕಾವಾ-ಗೊ ಪ್ರದೇಶಲ್ಲಿರುವ ಅತೀ ದೊಡ್ಡ ಊರೇ ಈ ಒಗಿಮಾಚಿಯಾಗಿದೆ. ಇದು ಚಳಿಗಾಲದ ವಂಡರ್ ಲ್ಯಾಂಡ್ ತರ ನಿಮ್ಮ ಕಣ್ಣಿಗೆ ಗೊಚರವಾಗುತ್ತದೆ. ಇಲ್ಲಿ ವಿಶಿಷ್ಟ ಶಯಲಿಯ ಗ್ಯಾಶೋ-ಝುಕುರಿ ಫಾರ್ಮ್ ಹೌಸ್ ಗಳು ನಿಮ್ಮನ್ನು ಸೆಳೆಯದಿರದು. ಈ ಊರು ಎಲ್ಲಾ ಋತುಗಳಲ್ಲೂ ಅದ್ಭುತವಾಗೇ ಕಂಡರೂ, ಚಳಿಗಾಲದಲ್ಲಿ ಮಾತ್ರ ಇದರ ಸೊಬಗನ್ನು ವರ್ಣಿಸಲು ಕವಿಹೃದಯವೇ ಬೇಕು! ಇಲ್ಲಿರುವ ಮನೆಗಳಲ್ಲಿ ಕೆಲವೊಂದು ಮನೆಗಳು 250 ವರ್ಷಗಳಿಗೂ ಹಳೆಯದಾಗಿವೆ. ಇಲ್ಲಿ ಉಂಟಾಗುವ ಭಾರೀ ಹಿಮಪಾತವನ್ನು ತಡೆದುಕೊಳ್ಳುವ ರಿತಿಯಲ್ಲಿ ಇಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಇಲ್ಲಿರುವ ಮನೆಗಳಲ್ಲಿ ಹಲವಾರು ಇಂದಿಗೂ ಸುಸ್ಥಿತಿಯಲ್ಲಿದ್ದು, ವಾಸಯೋಗ್ಯವಾಗಿವೆ.
ಇದನ್ನೂ ಓದಿ: Vastu Tips: ಮನೆಯ ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಒಲಿಯುತ್ತದೆ ಅದೃಷ್ಟ; ಆದ್ರೆ ವಾಸ್ತು ನಿಯಮ ತಪ್ಪದೇ ಪಾಲಿಸಿ

5 ಗಾರ್ಡೆಸ್, ಫ್ರಾನ್ಸ್:
ಫ್ರಾನ್ಸ್ ನ ಲ್ಯುಬೆರಾನ್ ಪ್ರದೇಶದಲ್ಲಿರುವ ಪರ್ವತಗಳ ತಪ್ಪಲಿನಲ್ಲಿ ಸುಂದರವಾಗಿ ಹಬ್ಬಿ ನಿಂತಿರುವ ಸ್ವರ್ಗವನ್ನು ಹೋಲುವ ಊರೇ ಗೋರ್ಡೆಸ್! ಇಲ್ಲಿರುವ ಕಲ್ಲಿನ ಮನೆಗಳ ರಚನೆ ಈ ಪ್ರದೇಶದ ಸೊಬಗನ್ನು ಇನ್ನಷ್ಟು ಹೆಚ್ಚಿಸುವಂತಿದೆ. ಈ ದೃಶ್ಯವನ್ನು ನೋಡಿದ ಕವಿ ಸುಂದರ ಕವಿತೆ ಬರೆಯದಿರಲಾರ, ಚಿತ್ರಕಾರನ ಕುಂಚ ಹಿಡಿದ ಕೈ ಖಂಡಿತಾ ಸುಮ್ಮನಿರಲಾರದು! ಈ ಊರಿನಲ್ಲಿರುವ ಮಾರುಕಟ್ಟೆಯಲ್ಲಿ ಲ್ಯಾವೆಂಡರ್, ಆಲಿವ್ ಮತ್ತು ಕ್ರೀಂ ಭರಿತ ಆಡಿನ ಚೀಸ್ ನ ಸುವಾಸನೆ ಇಲ್ಲಿಯ ಪ್ರಕೃತಿ ಸೌಂದರ್ಯದ ಸೊಬಗಿಗೆ ಇನ್ನಷ್ಟು ಮತ್ತು ಭರಿಸುವಂತಿದೆ!

6 ಹಾಲ್ ಸ್ಟಾಟ್, ಆಸ್ಟ್ರಿಯಾ:
ಆಸ್ಟ್ರಿಯಾದ ಹಾಲ್ ಸ್ಟಾಟ್ ಎಂಬ ಊರು ಅದೆಷ್ಟು ಸುಂದರವಾಗಿದೆ ಎಂದರೆ, ಚೀನಿಯರು ತಮ್ಮ ದೇಶದಲ್ಲಿ ಇದೇ ತರಹದ ಊರೊಂದನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಒರಿಜಿನಲ್, ಒರಿಜಿನಲ್ಲೇ..! ಸ್ಪಟಿಕದಂತೆ ಶುಭ್ರವಾದ ಸರೋವರ ಮತ್ತು ಆಲ್ಪೈನ್ ಪರ್ವತ ಶ್ರೇಣಿಗಳು ಆವೃತವಾಗಿರುವಂತೆ ಇರುವ ಈ ಊರು ನೀವು ಉಸಿರು ಬಿಗಿ ಹಿಡಿದುಕೊಂಡು, ಕಣ್ಣರಳಿಸಿ ನೋಡುವಷ್ಟು ಸುಂದರವಾಗಿದೆ! ಪರ್ವತಕ್ಕೆ ಸಿಕ್ಕಿಸಿದಂತೆ ನಿರ್ಮಾಣಗೊಂಡಿರುವ ಮರದ ಮನೆಗಳು, ಸ್ವಚ್ಛವಾದ ತಿಳಿನೀರ ಸರೋವರದಲ್ಲಿ ಸಂಗಾತಿ ಜೊತೆಗೊಂದು ಬೋಟ್ ರೈಡ್, ನಿಮ್ಮ ಹನಿ ಮೂನನ್ನು ಸ್ವರ್ಗದಂತೆ ಕಂಗೊಳಿಸುವ ಈ ಊರಿನಲ್ಲಿ ಸ್ಮರಣೀಯವಾಗಿ ಆಚರಿಸಿಕೊಳ್ಳಬಹುದಾಗಿರುವುದರಲ್ಲಿ ಯಾವುದೇ ಡೌಟ್ ಬೇಡ!

7 ಪೆಂಗ್ಲಿಪುರನ್, ಇಂಡೋನೇಷ್ಯಾ:
ಬಾಲಿಯ ಹೃದಯ ಭಾಗದಲ್ಲಿರುವ ಪೆಂಗ್ಲಿಪುರನ್ ಎಂಬ ಸುಂದರ ಊರೊಂದು, ತನ್ನ ಸಾಂಪ್ರದಾಯಿಕ ಶೈಲಿಯಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಬಿದಿರಿನಿಂದ ನಿರ್ಮಿಸಲಾದ ಸುಂದರ ಮನೆಗಳ ಸಾಲುಗಳು ಮತ್ತು ವಾಹನ ಮುಕ್ತ ರಸ್ತೆಗಳು ನಿಮ್ಮನ್ನು ಹಳೆಯ ಕಾಲಕ್ಕೆ ಕರೆದೊಯ್ಯುವುದಂತು ಸತ್ಯ! ಇಲ್ಲಿನ ಸ್ಥಳೀಯರು ಈ ಆಧುನಿಕ ಯುಗದಲ್ಲೂ ಹಳೆಯ ಕಾಲದ ಸಂಪ್ರದಾಯಗಳನ್ನೇ ಆಚರಿಸಿಕೊಂಡು ಬರುತ್ತಿದ್ದಾರೆ. ಮತ್ತು ಇಲ್ಲಿರುವ ಎಲ್ಲಾ ಮನೆಗಳಿಗೂ ಪ್ರವಾಸಿಗರಿಗೆ ಮುಕ್ತ ಸ್ವಾಗತವಿದೆ. ಬಾಲಿ ಯ ಜನ ನಿಬಿಡ, ವಾಹನ ನಿಬಿಡ ಪ್ರದೇಶದಿಂದ ಪ್ರಶಾಂತತೆ ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

8 ಟ್ಯಾಕ್ಸೋ ಡಿ ಅಲಾರ್ಕೋನ್, ಮೆಕ್ಸಿಕೋ:
ಟೆರ್ರಾಕೋಟಾ ಮಾಡುಗಳನ್ನು ಹೊಂದಿದ್ದು, ಬಳಸು ರಸ್ತೆಗಳು ಹಾಗೂ ಐತಿಹಾಸಿಕ ಸಾಂತಾ ಪ್ರಿಸ್ಕಾ ಚರ್ಚ್ ಗಳಿರುವ ಈ ಸುಂದರ ಊರೊಂದು ದಕ್ಷಿಣ ಅಮೆರಿಕಾದ ಮೆಕ್ಸಿಕೋದಲ್ಲಿದೆ. ಒಂದು ಕಾಲದಲ್ಲಿ ಇದು ಬೆಳ್ಳಿಯ ಗಣಿಗಾರಿಕೆಗೆ ಹೆಸರುವಾಸಿಯಾಗಿತ್ತು. ಹಾಗಾಗಿ ಈ ಊರಲ್ಲಿ ನಿಮಗೆ ಬೆಳ್ಳಿಯ ಅಂಗಡಿಗಳಿಗೇನೂ ಬರವಿಲ್ಲ! ಬಿಳಿ ಬಣ್ಣದ ವೋಕ್ಸ್ ವೇಗನ್ ಟ್ಯಾಕ್ಸಿಗಳು, ರೂಫ್ ಟಾಪ್ ಟೆರೇಸ್ ನಲ್ಲಿ ಮೆಝ್ ಕಾಲ್ ಕಾಕ್ ಟೈಲ್ ಹೀರುತ್ತಾ ಈ ಪ್ರದೇಶದಲ್ಲಿ ಆನಂದಮಯ ಸಮಯವನ್ನು ಕಳೆಯಬಹುದಾಗಿದೆ.

9 ಗೌಟಾಪೆ, ಕೊಲಂಬಿಯಾ:
ದಕ್ಷಿಣ ಅಮೆರಿಕಾದ ಇನ್ನೊಂದು ಪ್ರಮುಖ ದೇಶ ಕೊಲಬಿಯಾದಲ್ಲಿರುವ ಗೌಟಾಪೆ ಎಂಬ ಊರು ತನ್ನ ಸೌಂದರ್ಯದ ಕಾರಣಕ್ಕಾಗಿ ದೇಶ ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಬಣ್ಣ ಬಣ್ಣಗಳ ಮನೆಗಳು ಇಲ್ಲಿನ ವೈಶಿಷ್ಟ್ಯಗಳು. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಎಲ್ ಪೆನಾಲ್, ಬೆಟ್ಟದ ಮೇಲಿರುವ ಈ ಕಲ್ಲಿನ ಟವರ್ ಇಲ್ಲಿಗೆ ಭೇಟಿ ನೀಡುವವರಲ್ಲಿ ರೋಮಾಂಚನವನ್ನುಂಟುಮಾಡುತ್ತದೆ. ಇದರಲ್ಲಿರುವ 740 ಮೆಟ್ಟಿಲುಗಳನ್ನು ಹತ್ತಿ ಮೇಲಿನಿಂದ ಸರೋವರ ಮತ್ತು ದ್ವೀಪಗಳ ಪಕ್ಷಿನೋಟವನ್ನು ಅನುಭವಿಸುವ ಅನುಭವವೇ ಒಂದು ಅನೂಹ್ಯ ಆಹ್ಲಾದಕರ ಅನುಭವ.
