Sunita Williams: ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಕುಟುಂಬ ಬಗ್ಗೆ ನಿಮಗೆಷ್ಟು ಗೊತ್ತು?
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ದೀರ್ಘಾವಧಿಯ ವಾಸ್ತವ್ಯದ ನಂತರ NASA ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬುಧವಾರ ಭೂಮಿಗೆ ಮರಳಿದ್ದಾರೆ. ಸುನಿತಾ ವಿಲಿಯಮ್ಸ್ ಭಾರತೀಯ ಮೂಲದವರಾಗಿದ್ದು, ಅವರ ತಂದೆ ಗುಜರಾತಿನವರಾಗಿದ್ದಾರೆ. ಸುನಿತಾ ಕುಟುಂಬದ ಸಂಪೂರ್ಣ ವಿವರ ಇಲ್ಲಿದೆ.

ಸುನಿತಾ ವಿಲಿಯಮ್ಸ್ ಕುಟುಂಬ

ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ದೀರ್ಘಾವಧಿಯ ವಾಸ್ತವ್ಯದ ನಂತರ NASA ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ ಬುಧವಾರ ಭೂಮಿಗೆ ಮರಳಿದ್ದಾರೆ. ಈ ಜೋಡಿ ಜೂನ್ 2024ರಲ್ಲಿ ISS ತಲುಪಿತ್ತು. ಆರಂಭದಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯನ್ನು ಅದರ ಮೊದಲ ಸಿಬ್ಬಂದಿ ಹಾರಾಟದ ಸಮಯದಲ್ಲಿ ಪರೀಕ್ಷಿಸಲು ಸಂಕ್ಷಿಪ್ತ, ದಿನಗಳ ಕಾರ್ಯಾಚರಣೆಯಾಗಿ ಯೋಜಿಸಲಾಗಿತ್ತು. ಆದರೆ, ಈ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ಪ್ರೊಪಲ್ಷನ್ ಸಮಸ್ಯೆಗಳನ್ನು ಎದುರಿಸಿದ ಕಾರಣ, ಗಗನಯಾತ್ರಿಗಳು ಭೂಮಿಗೆ ಹಿಂದಿರುಗಲು ಅನರ್ಹ ಎಂದು ಘೋಷಿಸಲಾಯಿತು. ಪರಿಣಾಮವಾಗಿ, ಸ್ಟಾರ್‌ಲೈನರ್ ಖಾಲಿಯಾಗಿ ಹಿಂತಿರುಗಿತು, ಗಗನಯಾತ್ರಿಗಳು ISSನಲ್ಲಿಯೇ ಸಿಲುಕಿದರು.
ಮಂಗಳವಾರ, ಇಬ್ಬರೂ ಗಗನಯಾತ್ರಿಗಳು ಭಾರತೀಯ ಕಾಲಮಾನ ಬೆಳಿಗ್ಗೆ 10:35ಕ್ಕೆ ISSನಿಂದ ಅನ್‌ಡಾಕ್ ಮಾಡಿ ಭೂಮಿಗೆ ತಮ್ಮ 17 ಗಂಟೆಗಳ ಪ್ರಯಾಣವನ್ನು ಪ್ರಾರಂಭಿಸಿದ್ದರು. ಅವರು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸಿದ್ದು, ಇದು ಬುಧವಾರ ಭಾರತೀಯ ಕಾಲಮಾನ ಬೆಳಿಗ್ಗೆ 3:27ರ ಸುಮಾರಿಗೆ ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ.
ಸುನಿತಾ ಅವರ ಸುರಕ್ಷಿತ ಮರಳುವಿಕೆಗೆ ಭಾರತದ ಅವರ ಪೂರ್ವಜರ ಗ್ರಾಮದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸುನಿತಾ ಅವರಿಗೆ ಪತ್ರವನ್ನು ಬರೆದು, “ಭಾರತ ಮಾತೆ ತನ್ನ ಹೆಮ್ಮೆಯ ಪುತ್ರಿಯರಲ್ಲಿ ಒಬ್ಬಳನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದಾಳೆ” ಎಂದಿದ್ದರು.
ಭಾರತಕ್ಕೂ ಸುನಿತಾ ವಿಲಿಯಮ್ಸ್‌ಗೂ ಇರುವ ನಂಟೇನು?
ಸುನಿತಾ ವಿಲಿಯಮ್ಸ್ ಅವರ ತಂದೆ ದೀಪಕ್ ಪಾಂಡ್ಯ ಗುಜರಾತ್‌ನ ಜುಲಾಸನ್‌ನವರು. 1953 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಇಂಟರ್ಮೀಡಿಯೇಟ್ ಸೈನ್ಸ್ (ಐ.ಎಸ್.) ಮುಗಿಸಿದ ನಂತರ, ಅವರು 1957ರಲ್ಲಿ ತಮ್ಮ ಎಂ.ಡಿ. ಪದವಿ ಪಡೆದರು. ನಂತರ ಅವರು ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದರು. ಅಲ್ಲಿ ಓಹಾಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ವೈದ್ಯಕೀಯದಲ್ಲಿ ಇಂಟರ್ನ್‌ಶಿಪ್ ಮತ್ತು ರೆಸಿಡೆನ್ಸಿಯನ್ನು ಪೂರ್ಣಗೊಳಿಸಿದರು. 1964ರಲ್ಲಿ, ದೀಪಕ್ ಪಾಂಡ್ಯ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ಅಂಗರಚನಾಶಾಸ್ತ್ರ ವಿಭಾಗದಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋ ಆಗಿ ಸೇರಿದರು ಮತ್ತು ದೇಶಾದ್ಯಂತ ವಿವಿಧ ಆಸ್ಪತ್ರೆಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಂಡರು.
1957 ರಲ್ಲಿ ಅಮೆರಿಕಕ್ಕೆ ಬಂದಾಗ ಪಾಂಡ್ಯ ಸ್ಲೊವೇನಿಯನ್-ಅಮೇರಿಕನ್ ಉರ್ಸುಲಿನ್ ಬೋನಿ ಜಲೋಕರ್ ಅವರನ್ನು ಭೇಟಿಯಾದರು. ಇದಾದ ಸ್ವಲ್ಪ ಸಮಯದ ನಂತರ ಇಬ್ಬರೂ ವಿವಾಹವಾದರು. ಕಳೆದ ತಿಂಗಳು, ಜಲೋಕರ್ ತನ್ನ ಮಗಳು ಐಎಸ್‌ಎಸ್‌ನಲ್ಲಿ ಸಿಲುಕಿರುವ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದರು.
"ಸುನಿತಾಗೆ ಬಾಹ್ಯಾಕಾಶ ಎಂದರೆ ತುಂಬಾ ಇಷ್ಟ. ಇಂತಹ ದೀರ್ಘ ಕಾರ್ಯಾಚರಣೆಗೆ ಹೋಗಲು ಸಾಧ್ಯವಾಗಿದ್ದಕ್ಕೆ ಅವರಿಗೆ ಹೆಮ್ಮೆ ಇದೆ. ನಿಮಗೆ ಗೊತ್ತಾ, ಅವರು ಅದರ ಬಗ್ಗೆ ತುಂಬಾ ಸಂತೋಷಪಡುತ್ತಾರೆ" ಎಂದು ಅವರು ಸಂದರ್ಶನದಲ್ಲಿ ಹೇಳಿದ್ದರು. "ಅವಳು ತನಗೆ ಇಷ್ಟವಾದದ್ದನ್ನು ಮಾಡುತ್ತಿದ್ದಾಳೆ. ಹೀಗಿರುವಾಗ ನಾನು ಅದರ ಬಗ್ಗೆ ದುಃಖಪಡಲು ಹೇಗೆ ಸಾಧ್ಯ? ನನಗೆ ಅವಳ ಬಗ್ಗೆ ಸಂತೋಷವಿದೆ" ಎಂದಿದ್ದರು.
ಸುನಿತಾ ವಿಲಿಯಮ್ಸ್ ಪತಿ ಯಾರು?
ಸುನಿತಾ ವಿಲಿಯಮ್ಸ್ ಟೆಕ್ಸಾಸ್‌ನಲ್ಲಿ ಫೆಡರಲ್ ಮಾರ್ಷಲ್ ಆಗಿರುವ ಮೈಕೆಲ್ ಜೆ. ವಿಲಿಯಮ್ಸ್ ಅವರನ್ನು ವಿವಾಹವಾದರು. ಇಬ್ಬರೂ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ಹೆಲಿಕಾಪ್ಟರ್‌ಗಳನ್ನು ಹಾರಿಸುವ ವೃತ್ತಿಯಲ್ಲಿದ್ದರು. ದಂಪತಿ ಮದುವೆಯಾಗಿ 20 ವರ್ಷಗಳಾಗಿದ್ದು, ಮಕ್ಕಳಿಲ್ಲ. ಆದರೆ, ಮೂರು ಸಾಕುನಾಯಿಗಳನ್ನು ಅವರು ತಮ್ಮ ಮಕ್ಕಳಂತೆಯೇ ಸಾಕುತ್ತಿದ್ದಾರೆ. ಅವುಗಳ ಹೆಸರು, ಗನ್ನರ್, ರೋಟರ್ ಮತ್ತು ಬೇಯ್ಲಿ.
ಈ ಸುದ್ದಿಯನ್ನೂ ಓದಿ: Sunita Williams: ಭಾರತಕ್ಕೆ ಬಂದ್ರೆ ಸಮೋಸ ಪಾರ್ಟಿ ಗ್ಯಾರಂಟಿ...! ಸುನಿತಾ ವಿಲಿಯಮ್ಸ್ ಕುಟುಂಬಸ್ಥರ ಸಂಭ್ರಮಾಚರಣೆ
ಆಗಸ್ಟ್ 2024ರಲ್ಲಿ ದಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ, ಸುನಿತಾಗೆ ಬಾಹ್ಯಾಕಾಶ ಅತ್ಯಂತ ಹೆಚ್ಚು ಸಂತೋಷ ನೀಡುವ ಸ್ಥಳ ಎಂದು ಮೈಕೆಲ್ ವಿಲಿಯಮ್ಸ್ ಹೇಳಿಕೊಂಡಿದ್ದರು.