Pakistan NSC: "ಸಿಂಧೂ ಜಲ ಒಪ್ಪಂದ ರದ್ಧಾದರೆ ಯುದ್ಧ ಎಂದು ಪರಿಗಣಿಸುತ್ತೇವೆ" ; ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನ
ಸಿಂಧೂ ಜಲ ಒಪ್ಪಂದದಡಿಯಲ್ಲಿ ನದಿ ನೀರು ಬಿಡುಗಡೆ ರದ್ದತಿ ಹಾಗೂ ಬೇರೆಡೆಗೆ ತಿರುಗಿಸಲು ಭಾರತ ನಡೆಸುವ ಯಾವುದೇ ಪ್ರಯತ್ನವನ್ನು "ಯುದ್ಧದ ಕೃತ್ಯ" ಎಂದು ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಗುರುವಾರ ಹೇಳಿದೆ.


ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದಡಿಯಲ್ಲಿ ನದಿ ನೀರು ಬಿಡುಗಡೆ ರದ್ದತಿ ಹಾಗೂ ಬೇರೆಡೆಗೆ ತಿರುಗಿಸಲು ಭಾರತ ನಡೆಸುವ ಯಾವುದೇ ಪ್ರಯತ್ನವನ್ನು "ಯುದ್ಧದ ಕೃತ್ಯ" ಎಂದು ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ (Pakistan NSC) ಗುರುವಾರ ಹೇಳಿದೆ. 1960 ರ ಸಿಂಧೂ ಜಲ ಒಪ್ಪಂದ ತನ್ನ 240 ಮಿಲಿಯನ್ ನಾಗರಿಕರಿಗೆ ಜೀವನಾಡಿ ಎಂದು ಕರೆದ ಪಾಕ್, ಒಪ್ಪಂದವನ್ನು ಏಕಪಕ್ಷೀಯವಾಗಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ. ಭಾರತ ಏಕಾ ಏಕಿ ಈ ರೀತಿಯ ನಿರ್ಧಾರವನ್ನು ಮಾಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಕಾಶ್ಮೀರದಲ್ಲಿ ನಡೆಸಿದ ದಾಳಿಯ ನಂತರ ಭಾರತ ರಾಜತಾಂತ್ರಿಕ ನಡೆಯನ್ನು ಅನುಸರಿಸಿದೆ. ದಾಳಿಯ ನಂತರ, ಭದ್ರತಾ ಕುರಿತ ಸಂಪುಟ ಸಮಿತಿ ಸಭೆ ನಡೆಸಿ ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡಲು ಆದೇಶ ನೀಡಲಾಗಿದೆ. 1960 ರಲ್ಲಿ ಸಹಿ ಹಾಕಲ್ಪಟ್ಟ ಮತ್ತು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವಿನ ಆರು ನದಿಗಳ ವಿಭಜನೆಯನ್ನು ನಿಯಂತ್ರಿಸುತ್ತದೆ. ಸಿಂಧೂ ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲುಜ್‌ಗಳ ನೀರು ಸರಬರಾಜು ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ನದಿಗಳು ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದು ಇದರಿಂದ ಪಾಕಿಸ್ತಾನದ ಲಕ್ಷಾಂತರ ಜನ ಜೀವನ ಅಸ್ತವ್ಯಸ್ತಗೊಳ್ಳಲಿದೆ.
2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಭದ್ರತಾ ಸಂಪುಟ ಸಮಿತಿಗೆ ಹೇಳಿದ್ದರು. ಆದರೆ ಆಗ ಇದನ್ನು ಜಾರಿಗೆ ತರಲಿಲ್ಲ. ಆದರೆ ಈ ಬಾರಿ ಜಾರಿಗೆ ತರುವ ನಿರ್ಣಯವನ್ನು ಭಾರತದ ಭದ್ರತಾ ಸಂಪುಟ ಸಮಿತಿ ಮಾಡಿದೆ. ಸಿಂಧ್, ಬಲೂಚಿಸ್ತಾನ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಸಂಭವಿಸಿದ ಬರಗಾಲಕ್ಕೆ ಪಾಕಿಸ್ತಾನ ಅಸಮರ್ಪಕವಾಗಿ ಪ್ರತಿಕ್ರಿಯಿಸಿದ ನಂತರ ಎಲ್ಲೆಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ಕಳೆದ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಹವಾಮಾನ ಸಂಸ್ಥೆ ಬೇಸಿಗೆ ಕಾಲದಿಂದಾಗಿ ಬರ ಪರಿಸ್ಥಿತಿ ಉಲ್ಬಣಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿತ್ತು. ಇದೀಗ ಈ ಒಪ್ಪಂದವನ್ನು ರದ್ದು ಮಾಡಿದರೆ ಪಾಕಿಸ್ತಾನಕ್ಕೆ ಭಾರೀ ಪ್ರಮಾಣದ ನೀರಿನ ಕೊರತೆ ಉಂಟಾಗುತ್ತದೆ.
ಈ ಸುದ್ದಿಯನ್ನೂ ಓದಿ: BSF Jawan Arrested: ಗಡಿ ಪ್ರದೇಶ ದಾಟಿದ ಬಿಎಸ್‌ಎಫ್ ಯೋಧ ಪಾಕ್ ಸೇನೆ ವಶಕ್ಕೆ
ನೀರು ಪಾಕಿಸ್ತಾನದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಯಾಗಿದ್ದು, ಅದರ 240 ಮಿಲಿಯನ್ ಜನರಿಗೆ ಜೀವನಾಡಿಯಾಗಿದೆ. ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ಘೋಷಣೆಯನ್ನು ಪಾಕಿಸ್ತಾನ ತೀವ್ರವಾಗಿ ತಿರಸ್ಕರಿಸುತ್ತದೆ" ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.