ಪೂರ್ವ ಕಾಂಗೋದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿಗೆ 25 ಜನ ಬಲಿ
ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಉಗ್ರಗಾಮಿ ಗುಂಪೊಂದು ನಡೆಸಿರುವ ದಾಳಿಯಿಂದ 25 ಮಂದಿ ಸಾವನ್ನಪ್ಪಿರುವ ಘಟನೆ ಪೂರ್ವ ಕಾಂಗೋದಲ್ಲಿ ನಡೆದಿದೆ. ಐಎಸ್ಐಎಲ್ (ಐಎಸ್ಐಎಸ್) ಜೊತೆ ಸಂಪರ್ಕ ಹೊಂದಿರುವ ಎಡಿಎಫ್ ಬಂಡಾಯ ಗುಂಪು ಉಗಾಂಡಾ ಮತ್ತು ಡಿಆರ್ ಕಾಂಗೊ ನಡುವಿನ ಗಡಿ ಪ್ರದೇಶದಲ್ಲಿ ನಾಗರಿಕರ ಮೇಲೆ ದಾಳಿ ನಡೆಸಿದೆ.
ಸಂಗ್ರಹ ಚಿತ್ರ -
ಕಾಂಗೊ: ಐಎಸ್ಐಎಲ್ (ISIS) ಜೊತೆ ಸಂಪರ್ಕ ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ (Islamic State-backed group) ಉಗ್ರಗಾಮಿ ಗುಂಪು ಎಡಿಎಫ್ (Allied Democratic Forces) ನಡೆಸಿರುವ ದಾಳಿಯಿಂದ 25 ಮಂದಿ ಸಾವನ್ನಪ್ಪಿರುವ ಘಟನೆ ಪೂರ್ವ ಕಾಂಗೋದಲ್ಲಿ (eastern Congo) ನಡೆದಿದೆ. ಉಗಾಂಡಾ ಮತ್ತು ಡಿಆರ್ ಕಾಂಗೊ (Democratic Republic of the Congo) ನಡುವಿನ ಗಡಿ ಪ್ರದೇಶದಲ್ಲಿ ನಾಗರಿಕರ ಮೇಲೆ ಈ ದಾಳಿ ನಡೆಸಿದೆ. ಎಡಿಎಫ್ ನಿರಂತರವಾಗಿ ನಾಗರಿಕರ ಮೇಲೆ ದಾಳಿಯನ್ನು ನಡೆಸುತ್ತಿದೆ. ಕ್ಯಾರಿಟಾಸ್ ಚಾರಿಟಿ ನಡೆಸುತ್ತಿರುವ ಚರ್ಚ್‌ನಲ್ಲಿ ಕ್ಯಾಥೋಲಿಕ್ ಕ್ರೈಸ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾಗ ಈ ದಾಳಿ ನಡೆದಿದ್ದು, ಹಲವಾರು ಮನೆ, ಅಂಗಡಿಗಳು ಸುಟ್ಟು ಹೋಗಿವೆ. ದಾಳಿಯ ಬಳಿಕ ಅನೇಕರು ನಾಪತ್ತೆಯಾಗಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಉಗ್ರಗಾಮಿ ಗುಂಪು ಎಡಿಎಫ್ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆಸಿರುವ ದಾಳಿಯಿಂದ ಸತ್ತವರಲ್ಲಿ ಮನೆಯಲ್ಲಿ ಜೀವಂತವಾಗಿ ಸುಟ್ಟುಹೋದ 15 ಪುರುಷರು ಮತ್ತು ಇಟುರಿ ಪ್ರಾಂತ್ಯದ ಇರುಮು ಪ್ರದೇಶದ ಅಪಕುಲು ಗ್ರಾಮದಲ್ಲಿ ಗುಂಡು ಹಾರಿಸಲ್ಪಟ್ಟ ಏಳು ಜನರು ಸೇರಿದ್ದಾರೆ. ವೇಲೆಸ್ ವೊಂಕುಟು ಆಡಳಿತ ಪ್ರದೇಶದಲ್ಲಿ ಇತರ ಮೂವರು ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾನವ ಹಕ್ಕುಗಳ ಕಾರ್ಯಕರ್ತ ಕ್ರಿಸ್ಟೋಫ್ ಮುನ್ಯಾಂಡೆರು, ಚರ್ಚ್ ನಲ್ಲಿ ರಾತ್ರಿ ಉಳಿದುಕೊಂಡಿದ್ದವರ ಮೇಲೆ ದಾಳಿ ನಡೆಸಿದ ದಾಳಿಕೋರರು ಜನರ ಮೇಲೆ ಬಂದೂಕುಗಳಿಂದ ದಾಳಿ ನಡೆಸಿದರು. ಮಚ್ಚುಗಳಿಂದ ಇರಿದರು. ಸುಮಾರು 43 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ ಎಂದು ಹೇಳಿದರು.
ಡಿಆರ್‌ಸಿ ಸೇನಾ ವಕ್ತಾರ ಜೂಲ್ಸ್ ನ್ಗೊಂಗೊ ಅವರು ಮಾತನಾಡಿ, ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಕೊಮಾಂಡಾದಿಂದ ಸ್ವಲ್ಪ ದೂರದಲ್ಲಿರುವ ಚರ್ಚ್‌ಗೆ ನುಗ್ಗಿದ್ದ ಶಸ್ತ್ರಸಜ್ಜಿತ ವ್ಯಕ್ತಿಗಳು ಅಲ್ಲಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು ಮೂರು ಸುಟ್ಟಿರುವ ಶವಗಳು ಕಂಡು ಬಂದಿವೆ. ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದರು.
ಕೊಮಾಂಡಾದ ನಾಗರಿಕ ಸಮಾಜದ ಸಂಯೋಜಕರಾದ ಡಿಯುಡೋನ್ ಡುರಾಂತಬೊ ಮಾತನಾಡಿ, ಎಲ್ಲಾ ಭದ್ರತಾ ಅಧಿಕಾರಿಗಳು ಇರುವ ಪಟ್ಟಣದಲ್ಲಿ ಇಂತಹ ಘಟನೆ ನಡೆದಿರುವುದು ನಂಬಲಾಗದ ಸಂಗತಿ. ಕೆಲವರು ಇಲ್ಲಿಂದ ಪಲಾಯನ ಮಾಡಿ ಬುನಿಯಾ ಪಟ್ಟಣಕ್ಕೆ ತೆರಳಿದ್ದಾರೆ ಎಂದು ತಿಳಿಸಿದರು.
ಫುಟ್ಬಾಲ್ ಮೈದಾನದಲ್ಲಿ ಸಶಸ್ತ್ರ ದಾಳಿ, 11 ಸಾವು; ಇನ್ನೊಂದೆಡೆ ಜೆಟ್ ವಿಮಾನ ಅಪಘಾತ
ಯುಎನ್ ವಕ್ತಾರರು ಘಟನೆಯನ್ನು ಖಂಡಿಸಿದ್ದು, ಇದು ರಕ್ತಪಾತ ಎಂದು ಬಣ್ಣಿಸಿದ್ದಾರೆ. ಉಗಾಂಡಾದಲ್ಲಿ ಅಧ್ಯಕ್ಷ ಯೊವೆರಿ ಮುಸೆವೇನಿ ಅವರೊಂದಿಗಿನ ಅಸಮಾಧಾನದ ಬಳಿಕ 1990ರ ದಶಕದ ಉತ್ತರಾರ್ಧದಲ್ಲಿ ಎಡಿಎಫ್ ಸಣ್ಣ ಸಣ್ಣ ಗುಂಪಗಳನ್ನು ರಚಿಸಿತ್ತು. 2002ರಲ್ಲಿ ಉಗಾಂಡಾದ ಪಡೆಗಳು ಮಿಲಿಟರಿ ದಾಳಿ ನಡೆಸಿದ ಬಳಿಕ ಎಡಿಎಫ್ ತನ್ನ ಚಟುವಟಿಕೆಗಳನ್ನು ನೆರೆಯ ಡಿಆರ್ ಕಾಂಗೊಗೆ ಸ್ಥಳಾಂತರಿಸಿತ್ತು. ಬಳಿಕ ಅದು ಐಎಸ್ಐಎಲ್ (ಐಎಸ್ಐಎಸ್) ಜೊತೆ ಸಂಬಂಧವನ್ನು ಬೆಳೆಸಿದೆ. ಅನಂತರ ಸಾವಿರಾರು ನಾಗರಿಕರನ್ನು ಹತ್ಯೆಗೈದಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಕಾಂಗೋದ ಪೂರ್ವ ಪ್ರದೇಶವು ಎಡಿಎಫ್ ಮತ್ತು ರುವಾಂಡಾ ಬೆಂಬಲಿತ ಎಂ23 ಬಂಡಾಯ ಗುಂಪು ಸೇರಿದಂತೆ ಸಶಸ್ತ್ರ ಗುಂಪುಗಳ ಹಲವಾರು ದಾಳಿಗಳಿಗೆ ಸಾಕ್ಷಿಯಾಗಿದೆ.