ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶ ಪ್ರಧಾನಿ ಸಲಹೆಗಾರನಿಗೆ ತಡೆ: ಭಾರತದ ವಿರುದ್ಧ ಢಾಕಾ ತೀವ್ರ ಅಸಮಾಧಾನ

Dr Zahed Ur Rahman: ಬಾಂಗ್ಲಾದೇಶ ಪ್ರಧಾನಿಯ ಹಿರಿಯ ಸಲಹೆಗಾರ ಡಾ. ಜಾಹೇದ್ ಉರ್ ರಹಮಾನ್ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ತಡೆದು ವಿಚಾರಣೆ ನಡೆಸಿದ ಘಟನೆ ರಾಜತಾಂತ್ರಿಕ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಾಂಗ್ಲಾದೇಶ, ಭಾರತ ಉಪ ಹೈಕಮಿಷನರ್ ಅವರನ್ನು ಕರೆಸಿ ತನ್ನ ಆಕ್ಷೇಪವನ್ನು ದಾಖಲಿಸಿದೆ.

ಭಾರತ ಪ್ರವಾಸ ರದ್ದುಪಡಿಸಿದ ಬಾಂಗ್ಲಾ ಪ್ರಧಾನಿ ಸಲಹೆಗಾರ

ಡಾ. ಜಾಹೇದ್ ಉರ್ ರಹಮಾನ್ (ಸಂಗ್ರಹ ಚಿತ್ರ) -

Profile
Sushmitha Jain Jun 15, 2026 11:32 PM

ನವದೆಹಲಿ, ಜೂ. 15: ಬಾಂಗ್ಲಾದೇಶ ಪ್ರಧಾನಮಂತ್ರಿ ತಾರಿಕ್ ರಹಮಾನ್ (Tarique Rahman) ಅವರ ಹಿರಿಯ ಸಲಹೆಗಾರ ಡಾ. ಜಾಹೇದ್ ಉರ್ ರಹಮಾನ್ (Dr Zahed Ur Rahman) ಅವರನ್ನು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಸುಮಾರು ಎರಡೂವರೆ ಗಂಟೆಗಳ ಕಾಲ ವಲಸೆ ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದ ಘಟನೆಗೆ ಬಾಂಗ್ಲಾದೇಶ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಭಾರತ ಮಹಾಸಾಗರ ತೀರ ರಾಷ್ಟ್ರಗಳ ಸಂಘಟನೆಯ (IORA) ಹಿರಿಯ ಅಧಿಕಾರಿಗಳ ಸಮಿತಿಯ 28ನೇ ಸಭೆಯಲ್ಲಿ ಭಾಗವಹಿಸಲು ಡಾ. ಜಾಹೇದ್ ಉರ್ ರಹಮಾನ್ ಭಾನುವಾರ ಸಂಜೆ ಭಾರತಕ್ಕೆ ಆಗಮಿಸಿದ್ದರು. ಆದರೆ ಸಾಮಾನ್ಯ ಭದ್ರತಾ ತಪಾಸಣೆಯ ವೇಳೆ ಅವರ ಹೆಸರು ಭದ್ರತಾ ನಿಗಾ ಪಟ್ಟಿಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ವಲಸೆ ತಪಾಸಣಾ ಕೇಂದ್ರದಲ್ಲಿ ತಡೆಹಿಡಿಯಲಾಗಿದೆ ಎಂದು ವರದಿಗಳು ತಿಳಿಸಿವೆ.

ದೆಹಲಿಯಲ್ಲಿ ಡಾ. ಜಾಹೇದ್ ಉರ್ ರಹಮಾನ್ ಅವರ ತಪಾಸಣೆ:



ಬಾಂಗ್ಲಾದೇಶದ ನಿಯೋಗದ ಇತರ ಸದಸ್ಯರು ಯಾವುದೇ ತೊಂದರೆಯಿಲ್ಲದೆ ವಲಸೆ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ, ರಹಮಾನ್ ಮಾತ್ರ ತಪಾಸಣಾ ಕೇಂದ್ರದಲ್ಲೇ ಉಳಿಯಬೇಕಾಯಿತು. ಈ ವೇಳೆ ಭಾರತದಲ್ಲಿನ ಬಾಂಗ್ಲಾದೇಶದ ಹೈಕಮಿಷನರ್ ಎಂ. ರಿಯಾಜ್ ಹಮೀದುಲ್ಲಾ ವಿಮಾನ ನಿಲ್ದಾಣದಲ್ಲೇ ಹಾಜರಿದ್ದು, ರಹಮಾನ್ ಅವರ ಗುರುತನ್ನು ಅಧಿಕಾರಿಗಳಿಗೆ ದೃಢಪಡಿಸಿದರು. ಅಲ್ಲದೆ ಅವರು ಬಾಂಗ್ಲಾದೇಶ ನಿಯೋಗದ ಮುಖ್ಯಸ್ಥರಾಗಿರುವ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಸುಮಾರು ಎರಡೂವರೆ ಗಂಟೆಗಳ ಕಾಲ ಕಾಯಿಸಿದ ಬಳಿಕ ರಹಮಾನ್ ಭಾರತ ಪ್ರವಾಸವನ್ನು ಮುಂದುವರಿಸದಿರಲು ನಿರ್ಧರಿಸಿದರು. ಬಳಿಕ ಭಾರತೀಯ ಅಧಿಕಾರಿಗಳು ಸಮಸ್ಯೆ ಪರಿಹರಿಸಬಹುದು ಎಂದು ಮನವಿ ಮಾಡಿದರೂ, ಅವರು ಭಾರತ ಪ್ರವೇಶಿಸದೆ ಕೊಲಂಬೊ ಮಾರ್ಗವಾಗಿ ಢಾಕಾಗೆ ಮರಳಿದರು.

ಅಮೆರಿಕ-ಇರಾನ್ ಒಪ್ಪಂದಕ್ಕೆ ಇಸ್ರೇಲ್‌ನಲ್ಲಿ ಭಾರಿ ವಿರೋಧ: ಡೊನಾಲ್ಡ್‌ ಟ್ರಂಪ್ ಘೋಷಣೆಗೆ ಸಚಿವ ಬೆನ್-ಗ್ವಿರ್ ಕಿಡಿ

ಡಾ. ರಹಮಾನ್ ಸಾಮಾನ್ಯ ಬಾಂಗ್ಲಾದೇಶ ಪಾಸ್‌ಪೋರ್ಟ್ ಹಾಗೂ ಸಾರ್ಕ್ ವೀಸಾ ಹೊಂದಿದ್ದು, ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರಲಿಲ್ಲ. ಹೀಗಾಗಿ ಅವರು ಸಾಮಾನ್ಯ ವಲಸೆ ತಪಾಸಣೆಗೆ ಒಳಪಟ್ಟಿದ್ದರು. ತಾಂತ್ರಿಕ ಅಥವಾ ಡೇಟಾಬೇಸ್ ದೋಷದಿಂದ ಅವರ ಹೆಸರು ಭದ್ರತಾ ಪಟ್ಟಿಯಲ್ಲಿ ಕಾಣಿಸಿಕೊಂಡಿರಬಹುದೆಂದು ವರದಿಗಳು ಸೂಚಿಸಿವೆ.

ಈ ಘಟನೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾರತ ಉಪ ಹೈಕಮಿಷನರ್ ಪವನ್ ಬಾಧೆ ಅವರನ್ನು ಕರೆಸಿ ತನ್ನ ʼಗಾಢ ಅಸಾಮಾಧಾನʼ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವ ಡಾ. ಖಲೀಲುರ್ ರಹಮಾನ್ ಈ ಘಟನೆಯನ್ನು "ಅನಿರೀಕ್ಷಿತ ಹಾಗೂ ದುರದೃಷ್ಟ ಎಂದು ಬಣ್ಣಿಸಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿದೆʼʼ ಎಂದು ತಿಳಿಸಿದ್ದಾರೆ.

ವೈದ್ಯರಾಗಿದ್ದ ಡಾ. ಜಾಹೇದ್ ಉರ್ ರಹಮಾನ್ ಇತ್ತೀಚೆಗೆ ರಾಜ್ಯ ಸಚಿವರ ಹುದ್ದೆಮಾನ ಹೊಂದಿದ ಸಲಹೆಗಾರರಾಗಿ ಸರ್ಕಾರಕ್ಕೆ ಸೇರ್ಪಡೆಯಾಗಿದ್ದರು. ಅವರು ಜೂನ್ 15-16ರಂದು ನವದೆಹಲಿಯಲ್ಲಿ ನಡೆದ ಐಒಆರ್‌ಎ ಸಭೆಯಲ್ಲಿ ಬಾಂಗ್ಲಾದೇಶ ನಿಯೋಗವನ್ನು ಮುನ್ನಡೆಸಬೇಕಾಗಿತ್ತು. ಆದರೆ ಅವರ ಅನುಪಸ್ಥಿತಿಯಲ್ಲಿಯೇ ಉಳಿದ ನಿಯೋಗ ಸಭೆಯಲ್ಲಿ ಭಾಗವಹಿಸಿತು.