ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಸಿಂಧೂ ನದಿ ನಮ್ಮದು, ನೀರು ಬಿಡದಿದ್ದರೆ ಭಾರತೀಯರ ರಕ್ತ ಹರಿಯುತ್ತದೆ; ನಾಲಗೆ ಹರಿಬಿಟ್ಟ ಪಾಕ್‌ ರಾಜಕಾರಣಿ ಬಿಲಾವಲ್ ಭುಟ್ಟೋ ಝರ್ದಾರಿ

Indus Waters Treaty: ಸಿಂಧೂ ನದಿ ಒಪ್ಪಂದವನ್ನು ಅಮಾನತು ಮಾಡುವುದಾಗಿ ಭಾರತ ಘೋಷಿಸಿದೆ ಬೆನ್ನಲ್ಲೇ ನಾಲಗೆ ಹರಿಬಿಟ್ಟ ಪಾಕಿಸ್ತಾನದ ರಾಜಕಾರಣಿ ಬಿಲಾವಲ್ ಭುಟ್ಟೋ ಝರ್ದಾರಿ, ಸಿಂಧೂ ನದಿ ಇಸ್ಲಾಮಾಬಾದ್‌ಗೆ ಸೇರಿದೆ ಮತ್ತು ಹಾಗೆಯೇ ಮುಂದುವರಿಯುತ್ತದೆ. ನೀರಿನ ಹರಿವನ್ನು ನಿಲ್ಲಿಸಿದರೆ ಭಾರತೀಯರ ರಕ್ತ ಹರಿಯುತ್ತದೆ ಎಂದು ನಾಲಗೆ ಹರಿಬಿಟ್ಟಿದ್ದಾರೆ.

ಸಿಂಧೂ ನದಿ ನೀರು ಬಿಡದಿದ್ದರೆ ರಕ್ತ ಹರಿಯುತ್ತದೆ: ಬಿಲಾವಲ್ ಭುಟ್ಟೋ

ಬಿಲಾವಲ್ ಭುಟ್ಟೋ ಝರ್ದಾರಿ.

Ramesh B Ramesh B Apr 26, 2025 3:54 PM

ಇಸ್ಲಾಮಾಬಾದ್:‌ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮೂವರು ಕನ್ನಡಿಗರು ಸೇರಿದಂತೆ 26 ಜನರನ್ನು ಹತ್ಯೆ ಮಾಡಿದ ಪಾಕಿಸ್ತಾನ ಬೆಂಬಲಿತ ಉಗ್ರರ ಕೃತ್ಯಕ್ಕೆ ಭಾರತ ದಿಟ್ಟ ಉತ್ತರ ನೀಡಲು ಮುಂದಾಗಿದ್ದು, ಸಿಂಧೂ ನದಿ ಒಪ್ಪಂದವನ್ನು (Indus Waters Treaty) ಅಮಾನತು ಮಾಡುವುದಾಗಿ ಘೋಷಿಸಿದೆ (Pahalgam Terror Attack). ಸಿಂಧೂ ನದಿ ನೀರನ್ನೇ ನೆಚ್ಚಿಕೊಂಡಿರುವ ಪಾಕ್‌ ಈ ಕ್ರಮದಿಂದ ಬೆಚ್ಚಿಬಿದ್ದು ವಿಲವಿಲ ಒದ್ದಾಡುತ್ತಿದೆ. ಇದೀಗ ಈ ಬಗ್ಗೆ ಹೇಳಿಕೆ ನೀಡಿರುವ ಪಾಕಿಸ್ತಾನದ ರಾಜಕಾರಣಿ ಬಿಲಾವಲ್ ಭುಟ್ಟೋ ಝರ್ದಾರಿ (Bilawal Bhutto Zardari) ಸಿಂಧೂ ನದಿ ಇಸ್ಲಾಮಾಬಾದ್‌ಗೆ ಸೇರಿದೆ ಮತ್ತು ಹಾಗೆಯೇ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ನೀರಿನ ಹರಿವನ್ನು ನಿಲ್ಲಿಸಿದರೆ ಭಾರತೀಯರ ರಕ್ತ ಹರಿಯುತ್ತದೆ ಎಂದು ಎಚ್ಚರಿಸಿದ್ದಾರೆ.

ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಝರ್ದಾರಿ, ʼʼಭಾರತವು ತನ್ನ ದೌರ್ಬಲ್ಯಗಳನ್ನು ಮರೆಮಾಚಲು ಮತ್ತು ಜನರನ್ನು ಮೂರ್ಖರನ್ನಾಗಿಸಲು ಇಸ್ಲಾಮಾಬಾದ್ ಅನ್ನು ದೂಷಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಆರೋಪಗಳನ್ನು ಮಾಡಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದಾರೆʼʼ ಎಂದು ಆರೋಪಿಸಿದ್ದಾರೆ.

ಬಿಲಾವಲ್ ಭುಟ್ಟೋ ಝರ್ದಾರಿ ಹೇಳಿದ್ದಿಷ್ಟು:



ಈ ಸುದ್ದಿಯನ್ನೂ ಓದಿ: Pakistan NSC: "ಸಿಂಧೂ ಜಲ ಒಪ್ಪಂದ ರದ್ಧಾದರೆ ಯುದ್ಧ ಎಂದು ಪರಿಗಣಿಸುತ್ತೇವೆ" ; ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನ

"ಸಿಂಧೂ ಪಾಕಿಸ್ತಾನಕ್ಕೆ ಸೇರಿದೆ ಎಂಬುದನ್ನು ಭಾರತವೂ ಒಪ್ಪಿಕೊಂಡಿದೆ" ಎಂದಿರುವ ಅವರು, "ನಾನು ಇಲ್ಲಿ ಸಿಂಧೂ ನದಿಯ ಪಕ್ಕದಲ್ಲಿ ನಿಂತು ಸಿಂಧೂ ನಮ್ಮದು ಮತ್ತು ಸಿಂಧೂ ನಮ್ಮದಾಗಿ ಉಳಿಯುತ್ತದೆ ಎಂದು ಭಾರತಕ್ಕೆ ಹೇಳಲು ಬಯಸುತ್ತೇನೆ. ಈ ಸಿಂಧೂವಿನಲ್ಲಿ ನೀರು ಹರಿಯಲಿ ಅಥವಾ ಅವರ ರಕ್ತ ಹರಿಯಲಿ ಅದು ಎಂದೆಂದಿಗೂ ನಮ್ಮದೇ" ಎಂದು ನಾಲಗೆ ಹರಿಯಬಿಟ್ಟಿದ್ದಾರೆ. ಝರ್ದಾರಿ ಅವರ ಈ ಬೆದರಿಕೆಗೆ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾರತ ಕೈಗೊಂಡ ಕ್ರಮಗಳೇನು?

ಪೆಹಲ್ಗಾಮ್‌ನಲ್ಲಿ ದಾಳಿ ನಡೆಸಿ ಉಗ್ರರು ಅಮಾಯಕ ಪ್ರವಾಸಿಗರ ಹತ್ಯೆ ಮಾಡಿದ ಬಳಿಕ ಭಾರತ ಹಲವು ಕ್ರಮಗಳನ್ನು ಕೈಗೊಂಡಿದೆ. ಸಿಂಧೂ ನದಿ ಒಪ್ಪಂದ ಅಮಾನತು, ರಾಜತಾಂತ್ರಿಕರ ಉಚ್ಚಾಟನೆ, ಪಾಕ್‌ ಪ್ರಜರಗಳ ವಾಸ್ತವ್ಯಕ್ಕೆ ನಿರ್ಬಂಧ, ಅಟ್ಟಾರಿ-ವಾಘಆ ಗಡಿ ಬಂದ್‌ ಸೇರಿದಂತೆ ಹಲವು ಕಠಿಣ ಕ್ರಮ ಜರುಗಿಸಿದೆ.

ಏನಿದು ಸಿಂಧೂ ನದಿ ನೀರು ಒಪ್ಪಂದ?

ದಶಕಗಳಷ್ಟು ಹಳೆಯದಾದ ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಅನಿರ್ದಿಷ್ಟಾವಧಿಗೆ ರದ್ದುಗೊಳಿಸಿರುವುದರಿಂದ ಸಿಂಧೂ ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲುಜ್‌ಗಳ ನೀರು ಸರಬರಾಜು ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ನದಿಗಳು ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದು, ತಡೆ ಹಿಡಿಯುವುದರಿಂದ ಅಲ್ಲಿನ ಲಕ್ಷಾಂತರ ಜನರ ಜೀವನ ಅಸ್ತವ್ಯಸ್ತಗೊಳ್ಳಲಿದೆ.

ಭಾರತ ಮತ್ತು ಪಾಕಿಸ್ತಾನ ಈ ಎರಡು ರಾಷ್ಟ್ರಗಳು 1960ರಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದಕ್ಕೆ ಸಾಕ್ಷಿಯಾಗಿ ವಿಶ್ವ ಬ್ಯಾಂಕ್ ಕೂಡ ಸಹಿ ಹಾಕಿತ್ತು. ಈ ಒಪ್ಪಂದದ ಪ್ರಕಾರ ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರನ್ನು ಎರಡೂ ದೇಶಗಳ ನಡುವೆ ಸಮಾನವಾಗಿ ಹಂಚಲು ತೀರ್ಮಾನಿಸಲಾಯಿತು. ಮೂರು ಪೂರ್ವ ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್‌ನಿಂದ ಭಾರತಕ್ಕೆ ಮತ್ತು ಮೂರು ಪಶ್ಚಿಮ ನದಿಗಳಾದ ಚೆನಾಬ್, ಸಿಂಧೂ ಮತ್ತು ಝೀಲಂನಿಂದ ಪಾಕಿಸ್ತಾನಕ್ಕೆ ಸಿಂಧೂ ನದಿಯ ನೀರನ್ನು ಹಂಚಲಾಯಿತು. ಇದೀಗ ಭಾರತ ಪಾಕಿಸ್ತಾನಕ್ಕೆ ನೀರು ಹರಿಸದಿರಲು ನಿರ್ಧರಿಸಿದೆ.