ಬಾಂಗ್ಲಾ ಚುನಾವಣೆ ಫಲಿತಾಂಶ; ಬಿಎನ್‌ಪಿಗೆ ಸ್ಪಷ್ಟ ಬಹುಮತ, ತಾರಿಕ್ ರೆಹಮಾನ್ ಮುಂದಿನ ಪ್ರಧಾನಿ
Bangladesh Election Result: ಬಿಎನ್‌ಪಿ ಚುನಾವಣೆಯಲ್ಲಿ ಬಹುಮತ ಸಾಧಿಸಿದರೆ, ಅದರ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಬಿಎನ್‌ಪಿ ಈ ಹಿಂದೆಯೇ ಘೋಷಣೆ ಮಾಡಿದೆ.
Tarique Rahman -
ಢಾಕಾ, ಫೆ.13: ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸಿದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಮುಂದಿನ ಸರ್ಕಾರವನ್ನು(Bangladesh Election Result) ರಚಿಸಲು ಸಜ್ಜಾಗಿದೆ. 20 ವರ್ಷಗಳ ಅಧಿಕಾರದ ಕಾಯುವಿಕೆಗೆ ಅಂತ್ಯ ಹಾಡಿರುವ ಬಿಎನ್‌ಪಿ ಮತ್ತೆ ದೇಶದಲ್ಲಿ ಶಾಂತಿ ನೆಲೆಸಲು ಮುಂದಾಗಿದೆ. 2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನಗೊಂಡ ಬಳಿಕ ಬಾಂಗ್ಲಾದಲ್ಲಿ ಅರಾಜಕತೆ ಸೃಷ್ಟಿಯಾಗಿತ್ತು.
ಒಟ್ಟು 300 ಸದಸ್ಯರ ಸಂಖ್ಯಾ ಬಲದ ಬಾಂಗ್ಲಾ ಸಂಸತ್ತಿನಲ್ಲಿ ಬಿಎನ್‌ಪಿ 151ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಸ್ಪಷ್ಟ ಬಹುಮತ ದಾಖಲಿಸಿದೆ ಎಂದು ಬುಹುತೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಚುನಾವಣಾ ಆಯೋಗ ಅಧಿಕೃತ ಘೋಷಣೆ ಇನ್ನಷ್ಟೇ ಮಾಡಬೇಕಿದೆ.
2001 ರಲ್ಲಿ ಕೊನೆಯ ಬಾರಿಗೆ ಚುನಾವಣೆಯಲ್ಲಿ ಗೆದ್ದಿದ್ದ ತಾರಿಕ್ ರೆಹಮಾನ್ ನೇತೃತ್ವದ ಪಕ್ಷವು, ಎಣಿಕೆಯ ಪ್ರವೃತ್ತಿಗಳು ಭರ್ಜರಿ ಬಹುಮತದ ಸೂಚನೆ ನೀಡುತ್ತಿದ್ದಂತೆ ವಿಜಯವನ್ನು ಘೋಷಿಸಿತು. ಎರಡು ದಶಕಗಳ ನಂತರ ಅಧಿಕಾರಕ್ಕೆ ಮರಳಲು ಮುನ್ನುಡಿ ಬರೆದಿದೆ.
ಬಿಎನ್‌ಪಿ ಚುನಾವಣೆಯಲ್ಲಿ ಬಹುಮತ ಸಾಧಿಸಿದರೆ, ಅದರ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಬಿಎನ್‌ಪಿ ಈ ಹಿಂದೆಯೇ ಘೋಷಣೆ ಮಾಡಿದೆ.
ಏತನ್ಮಧ್ಯೆ, ಜಮಾತೆ-ಇ-ಇಸ್ಲಾಮಿ ತೀವ್ರ ಹಿನ್ನಡೆಯನ್ನು ಅನುಭವಿಸಿತು. ಫಲಿತಾಂಶಗಳು ನಿರಂತರವಾಗಿ ಹೊರಬರುತ್ತಿದ್ದಂತೆ ಎರಡಂಕಿಯ ಸ್ಥಾನಗಳಿಗೆ ಸೀಮಿತವಾಯಿತು. ಹಲವಾರು ಕ್ಷೇತ್ರಗಳಲ್ಲಿ ಮತ ಎಣಿಕೆ ಮುಂದುವರಿದಿದ್ದರೂ, ಒಟ್ಟಾರೆ ಪ್ರವೃತ್ತಿಗಳು ಅಂತಿಮ ಎಣಿಕೆಯಲ್ಲಿ ಪ್ರಮುಖ ಬದಲಾವಣೆಗಳಿಗೆ ಕಡಿಮೆ ಅವಕಾಶವನ್ನು ಸೂಚಿಸಿವೆ. ಬೆಳಿಗ್ಗೆ 4 ಗಂಟೆಯ ಸುಮಾರಿಗೆ, ಜಮಾತ್-ಎ-ಇಸ್ಲಾಮಿ 56 ಸ್ಥಾನಗಳನ್ನು ಗೆದ್ದಿತ್ತು.
ಚುನಾವಣೆ ವೇಳೆ ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ಹಿಂಸಾಚಾರದಿಂದ ಹಾನಿಗೊಳಗಾದವು. ಮತದಾನಕ್ಕೆ ಸಂಬಂಧಿಸಿದ ಘರ್ಷಣೆಗಳಲ್ಲಿ 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೋದಿ ಅಭಿನಂದನೆ
ನಿರ್ಣಾಯಕ ಗೆಲುವಿಗಾಗಿ ರೆಹಮಾನ್ ಮತ್ತು ಬಿಎನ್‌ಪಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. "ಬಾಂಗ್ಲಾದೇಶದಲ್ಲಿ ಸಂಸತ್ತಿನ ಚುನಾವಣೆಯಲ್ಲಿ ಬಿಎನ್‌ಪಿಯನ್ನು ನಿರ್ಣಾಯಕ ಗೆಲುವಿನತ್ತ ಕೊಂಡೊಯ್ದ ತಾರಿಕ್ ರೆಹಮಾನ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಗೆಲುವು ಬಾಂಗ್ಲಾದೇಶದ ಜನರು ನಿಮ್ಮ ನಾಯಕತ್ವದ ಮೇಲಿನ ನಂಬಿಕೆಯನ್ನು ತೋರಿಸುತ್ತದೆ ಎಂದು ಮೋದಿ ಹೇಳಿದರು.
"ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ" ಭಾರತವು ಬೆಂಬಲವಾಗಿ ನಿಲ್ಲುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಮೋದಿ ಮುಂಬರುವ ಸರ್ಕಾರಕ್ಕೆ ಭರವಸೆ ನೀಡಿದರು.
"ನಮ್ಮ ಬಹುಮುಖಿ ಸಂಬಂಧಗಳನ್ನು ಬಲಪಡಿಸಲು ಮತ್ತು ನಮ್ಮ ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಮೋದಿ ಹೇಳಿದರು.