Donald Trump: ಚೀನಾ ಮೇಲೆ ಶೇ.104ರಷ್ಟು ಸುಂಕ ಇಂದಿನಿಂದ ಜಾರಿ ; ಜಾಗತಿಕವಾಗಿ ಇನ್ನಷ್ಟು ಹೆಚ್ಚಿದ ಆತಂಕ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ವಿವಿಧ ದೇಶಗಳ ಮೇಲೆ ಪರಸ್ಪರ ಸುಂಕವನ್ನು ವಿಧಿಸುತ್ತಿದ್ದಾರೆ. ಈಗಾಗಲೇ ಭಾರತದ ಮೇಲೆ ಇದು ಜಾರಿಯಾಗಿದ್ದು, ಇಂದಿನಿಂದ ಚೀನಾದ ಮೇಲೆಯೂ ಸುಂಕ ಬೀಳಲಿದೆ. ತನ್ನ ಮೇಲೆ ಹೇರಿದ್ದ ಶೇ.34ರಷ್ಟು ತೆರಿಗೆ ಹಿಂಪಡೆಯಲು ಚೀನಾ ನಿರಾಕರಿಸಿದ ಬೆನ್ನಲ್ಲೇ, ಆ ದೇಶದ ಮೇಲೆ ಹೆಚ್ಚುವರಿ ಶೇ.50ರಷ್ಟು ತೆರಿಗೆ ಹಾಕುವುದಾಗಿ ಟ್ರಂಪ್ ಘೋಷಿಸಿದ್ಧಾರೆ.


ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ವಿಶ್ವದ ವಿವಿಧ ದೇಶಗಳ ಮೇಲೆ ಪರಸ್ಪರ ಸುಂಕವನ್ನು ವಿಧಿಸುತ್ತಿದ್ದಾರೆ. ಈಗಾಗಲೇ ಭಾರತದ ಮೇಲೆ ಇದು ಜಾರಿಯಾಗಿದ್ದು, ಇಂದಿನಿಂದ ಚೀನಾದ ಮೇಲೆಯೂ ಸುಂಕ ಬೀಳಲಿದೆ. ತನ್ನ ಮೇಲೆ ಹೇರಿದ್ದ ಶೇ.34ರಷ್ಟು ತೆರಿಗೆ ಹಿಂಪಡೆಯಲು ಚೀನಾ ನಿರಾಕರಿಸಿದ ಬೆನ್ನಲ್ಲೇ, ಆ ದೇಶದ ಮೇಲೆ ಹೆಚ್ಚುವರಿ ಶೇ.50ರಷ್ಟು ತೆರಿಗೆ ಹಾಕುವುದಾಗಿ ಟ್ರಂಪ್ ಘೋಷಿಸಿದ್ಧಾರೆ. ಇದರೊಂದಿಗೆ ಚೀನಾದ ಮೇಲಿನ ಅಮೆರಿಕದ ತೆರಿಗೆ ಪ್ರಮಾಣ ಶೇ.104ಕ್ಕೆ ಏರಿದ್ದು ಅದು ಬುಧವಾರದಿಂದಲೇ ಜಾರಿಗೆ ಬರಲಿದೆ. ಅಮೆರಿಕದ ಸರಕುಗಳ ಮೇಲೆ ವಿಧಿಸಿರುವ ಪ್ರತೀಕಾರದ ಶೇ. 34 ಸುಂಕವನ್ನು ಹಿಂಪಡೆಯಲು ಅಮೆರಿಕ 24 ಗಂಟೆಗಳ ಗಡುವು ನೀಡಿತ್ತು. ಆದರೆ ಈ ಆದೇಶಕ್ಕೆ ಚೀನಾ ಕ್ಯಾರೇ ಅಂದಿರಲಿಲ್ಲ.
ಇದೀಗ ಟ್ರಂಪ್ ಚೀನಾದ ಮೇಲಿನ ತೆರಿಗೆಯನ್ನು ಶೇ.104ಕ್ಕೆ ಏರಿಸಿದ್ದಾರೆ. ಕಳೆದ ತಿಂಗಳವರೆಗೆ ಅಮೆರಿಕ ಚೀನಾದ ಮೇಲೆ ಶೇಕಡಾ 10 ರಷ್ಟು ಸುಂಕ ವಿಧಿಸುತ್ತಿತ್ತು. ಜೊತೆಗೆ ಏ.2ರಂದು ಟ್ರಂಪ್ ಮತ್ತೆ ಶೇ.34 ತೆರಿಗೆ ಘೋಷಿಸಿದ್ದರು. ಬಳಿಕ ಚೀನಾ ಕೂಡ ಅಮೆರಿಕದ ಮೇಲೆ ಶೇ.34 ಪ್ರತಿತೆರಿಗೆ ಘೋಷಿಸಿತ್ತು. ಇದೇ ಕೋಪದಲ್ಲಿ ಈಗ ಟ್ರಂಪ್ ಶೇ.50 ಹೆಚ್ಚುವರಿ ತೆರಿಗೆ ಪ್ರಕಟಿಸಿದ್ದಾರೆ. ಇದನ್ನು ಮಂಗಳವಾರ ರಾತ್ರಿ ಶ್ವೇತಭವನ ದೃಢಪಡಿಸಿದೆ.
ಈ ನಡುವೆ ಅಮೆರಿಕದ ಶೇ.104ರಷ್ಟು ತೆರಿಗೆ ದಾಳಿಗೆ ಪ್ರತಿಯಾಗಿ ಹಾಲಿವುಡ್ ಸಿನೆಮಾಗಳನ್ನೇ ನಿಷೇಧಿಸುವ ಬಗ್ಗೆ ಚೀನಾ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ವಿಶ್ವದ ಟಾಪ್ 2 ಬಲಿಷ್ಠ ದೇಶಗಳ ತೆರಿಗೆ ಸಮರ ಮತ್ತಷ್ಟು ತೀವ್ರತೆ ಪಡೆದಂತಾಗಿದೆ. ಟ್ರಂಪ್ ನೀಡಿರುವ ಬೆದರಿಕೆಗೆ ಚೀನಾ ಬ್ಲಾಕ್‌ಮೇಲ್ ಎಂದು ಕರೆದಿತ್ತು. ಅಮೆರಿಕದ ಬ್ಲ್ಯಾಕ್‌ಮೇಲಿಂಗ್ ಸ್ವಭಾವವನ್ನು ಜಗತ್ತಿಗೆ ಕಾಣಿಸುತ್ತಿದೆ. ಅಮೆರಿಕ ತನ್ನ ಇಚ್ಛೆಯಂತೆ ನಡೆಯಬೇಕೆಂದು ಒತ್ತಾಯಿಸಿದರೆ, ಚೀನಾ ಕೊನೆಯವರೆಗೂ ಹೋರಾಡುತ್ತದೆ ಎಂದು ಹೇಳಿಕೆ ನೀಡಿತ್ತು. ಅಮೆರಿಕಾದ ಈ ವಾಣಿಜ್ಯ ನೀತಿಯನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದನ್ನ ನಾವು ಖಂಡಿಸುತ್ತೇವೆ. ಅಮೆರಿಕದ ಜೊತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿತ್ತು.
ಟ್ರಂಪ್ ಪ್ರತಿತೆರಿಗೆಗೆ ಕಾರಣವೇನು?
ಏ.1ರಂದು ಮಾತನಾಡಿದ್ದ ಟ್ರಂಪ್, ‘ಹಲವು ದಶಕಗಳ ಕಾಲ ನಮ್ಮ ದೇಶವನ್ನು ಸ್ನೇಹಿತರು ಸೇರಿ ಎಲ್ಲರೂ ವ್ಯಾಪಾರದ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಇದೀಗ ನ್ಯಾಯಸಮ್ಮತ ವ್ಯಾಪಾರಕ್ಕಾಗಿ ಆ ದೇಶಗಳ ಮೇಲೆ ಪ್ರತಿ ತೆರಿಗೆ ಹಾಕುತ್ತಿದ್ದೇವೆ. ‘ಈ ರೀತಿಯ ತೆರಿಗೆಯ ಮೂಲಕ ಅಮೆರಿಕದ ಖಜಾನೆಗೆ ನೂರಾರು ಶತಕೋಟಿ ಆದಾಯ ಬರಲಿದೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರವನ್ನು ನ್ಯಾಯಸಮ್ಮತಗೊಳಿಸಲಿದೆ ಎಂದು ಹೇಳಿದ್ದರು.