ಇರಾನ್ ಮೇಲೆ ಅಮೆರಿಕದಿಂದ ಮತ್ತಷ್ಟು ಭೀಕರ ದಾಳಿ? ಎಐ ಇಮೇಜ್ ಮೂಲಕ ಡೊನಾಲ್ಡ್ ಟ್ರಂಪ್ ನೀಡಿದ ಸೂಚನೆಗೆ ಜಗತ್ತೇ ಕಂಪಿಸಿದ್ದೇಕೆ?
Donald Trump: ಪಶ್ಚಿಮ ಏಷ್ಯಾದಲ್ಲಿ ಕವಿದಿರುವ ಸಂಘರ್ಷದ ಕಾರ್ವೋಡ ಕರಗುವ ಬದಲು ಮತ್ತಷ್ಟು ದಟ್ಟವಾಗುತ್ತಿದೆ. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಐ ರಚಿತ ಚಿತ್ರಗಳನ್ನು ಶೇರ್ ಮಾಡುವ ಮೂಲಕ ಭೀಕರ ದಾಳಿಯ ಮುನ್ಸೂಚನೆ ನೀಡಿದ್ದಾರೆ. ಅಮೆರಿಕ ಸೇನೆ ಇರಾನ್‌ನ ಮೇಲೆ ದಾಳಿ ನಡೆಸುತ್ತಿರುವುದನ್ನು ತೋರಿಸುವ ಎಐ ರಚಿತ ಚಿತ್ರಗಳನ್ನು ಟ್ರಂಪ್ ತಮ್ಮ ಟ್ರುತ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಎಐ ಚಿತ್ರ ಮತ್ತು ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಮೇ 12: ಪಶ್ಚಿಮ ಏಷ್ಯಾದಲ್ಲಿ ಕವಿದಿರುವ ಸಂಘರ್ಷದ ಕಾರ್ವೋಡ ಕರಗುವ ಬದಲು ದುರ್ಬಲ ಕದನ ವಿರಾಮದಿಂದಾಗಿ ಮತ್ತಷ್ಟು ದಟ್ಟವಾಗುತ್ತಿದೆ (West Asia conflict). ಎರಡೂವರೆ ತಿಂಗಳಿನಿಂದ ಅಮೆರಿಕ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವ ಬಗ್ಗೆ ಇರಾನ್ ಸಲ್ಲಿಸಿದ ಶಾಂತಿ ಪ್ರಸ್ತಾವನೆಯನ್ನು ಸೋಮವಾರ (ಮೇ 11) ತಿರಸ್ಕರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಎಐ ರಚಿತ ಚಿತ್ರಗಳನ್ನು ಶೇರ್ ಮಾಡುವ ಮೂಲಕ ಭೀಕರ ದಾಳಿಯ ಮುನ್ಸೂಚನೆ ನೀಡಿದ್ದಾರೆ. ಅಮೆರಿಕದ ದಾಳಿ ಮತ್ತಷ್ಟು ಶಕ್ತವಾದರೆ ಈಗಾಗಲೇ ಕುಸಿದು ಬಿದ್ದಿರುವ ಆರ್ಥಿಕತೆ ಮತ್ತೆ ಹಳ್ಳ ಹಿಡಿಯಲಿದೆ ಎನ್ನುವ ಆತಂಕ ಜಗತ್ತನ್ನೇ ಕಾಡುತ್ತಿದ್ದು, ಮುಂದಿನ ನಡೆ ಬಗ್ಗೆ ಕಳವಳದಿಂದ ಎದುರು ನೋಡುತ್ತಿದೆ.
ಅಮೆರಿಕ ಸೇನೆ ಇರಾನ್‌ನ ಮೇಲೆ ದಾಳಿ ನಡೆಸುತ್ತಿರುವುದನ್ನು ತೋರಿಸುವ ಎಐ ರಚಿತ ಚಿತ್ರಗಳನ್ನು ಟ್ರಂಪ್ ತಮ್ಮ ಟ್ರುತ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಮತ್ತಷ್ಟು ದಾಳಿ ನಡೆಸುವ ಮುನ್ಸೂಚನೆಯಾ? ಇರಾನ್‌ಗೆ ಎಚ್ಚರಿಕೆಯಾ? ಎನ್ನುವ ಚರ್ಚೆ ಆರಂಭವಾಗಿದೆ.
ಟ್ರಂಪ್ ಅವರ ಎಕ್ಸ್ ಪೋಸ್ಟ್:
TRUMP: Posts image of U.S. warship firing laser at Iranian aircraft pic.twitter.com/iHibXSE1ES
— Trump Truths (@trumptruthsbot) May 12, 2026
ಆತಂಕ ಯಾಕೆ?
ಟ್ರಂಪ್ ಅವರ ಟ್ರುತ್ ಖಾತೆಗೆ ಅಪ್‌ಲೋಡ್ ಮಾಡಲಾದ ಈ ಚಿತ್ರಗಳು, ಇರಾನಿನ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಮಿಲಿಟರಿ ಪಡೆಗಳು ನಡೆಸುವ ಕಾಲ್ಪನಿಕ ಯುದ್ಧ ದೃಶ್ಯಗಳನ್ನು ಒಳಗೊಂಡಿದೆ. ಒಂದು ಚಿತ್ರದಲ್ಲಿ ಅಮೆರಿಕದ ಯುದ್ಧನೌಕೆಯು ಹೈ-ಪವರ್ ಲೇಸರ್ ಆಯುಧದಿಂದ ಇರಾನಿನ ಧ್ವಜ ಹೊಂದಿರುವ ವಿಮಾನವನ್ನು ಸ್ಫೋಟಿಸುತ್ತಿರುವುದನ್ನು ತೋರಿಸಲಾಗಿದೆ. ಜತೆಗೆ ʼʼಲೇಸರ್: ಬಿಂಗ್, ಬಿಂಗ್, ಗೋನ್" ಎಂದು ಬರೆಯಲಾಗಿದೆ.
ಹೊರ್ಮುಜ್ ಜಲಸಂಧಿಗೆ ಅಮೆರಿಕದ ದಿಗ್ಬಂಧನ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಜತೆ ಪ್ರಧಾನಿ ಮೋದಿ ಚರ್ಚೆ
ಲೇಸರ್ ಆಯುಧ ಬಳಕೆಗೆ ಮುಂದಾಯ್ತ ಅಮೆರಿಕ?
ಲೇಸರ್ ಆಯುಧ ಬಳಸುವ ಮೂಲಕ ಅಮೆರಿಕ ಇರಾನ್ ವಿರುದ್ಧದ ಯುದ್ಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಮುಂದಾಗಿರುವ ಸೂಚನೆಯಾ ಇದು? ಎನ್ನುವ ಆತಂಕ ಈ ಪೋಸ್ಟ್ ಮೂಲಕ ಜಗತ್ತನ್ನೇ ಕಾಡಲು ಆರಂಭಿಸಿದೆ. ಶತ್ರುಗಳ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಶಸ್ತ್ರಗಳನ್ನು ಸೆಕೆಂಡುಗಳಲ್ಲಿ ಹೊಡೆದು ಹಾಕಬಲ್ಲ ಲೇಸರ್ ಆಯುಧವನ್ನು ಅಮೆರಿಕ ಬಳಸಲು ಮುಂದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯು ಯುದ್ಧಭೂಮಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತದೆ. ಮದ್ದುಗುಂಡುಗಳನ್ನು ಅವಲಂಬಿಸುವ ಅಗತ್ಯವನ್ನು ಇದು ಬಹಳ ಕಡಿಮೆ ಮಾಡುತ್ತದೆ ಎನ್ನುತ್ತಾರೆ ಅವರು. ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಈ ಆಧುನಿಕ ಶಸ್ತ್ರಾಸ್ತ್ರ ಬಳಸಿ ಇರಾನ್ ಅನ್ನು ಎದುರಿಸಲು ಮುಂದಾಗಿದೆ ಎನ್ನಲಾಗಿದೆ.
ಈಗಲೂ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ನಿರ್ಬಂಧವನ್ನು ಮುಂದುವರಿಸಿರುವುದರಿಂದ ಡೊನಾಲ್ಡ್ ಟ್ರಂಪ್ ಅಸಮಾಧಾನಗೊಂಡಿದ್ದು, ಹೀಗಾಗಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಅಮೆರಿಕ ಜತೆ ನೇರ ಸಂಘರ್ಷಕ್ಕೆ ಇಳಿಯುತ್ತದೆಯೇ ಚೀನಾ? ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ ಡೊನಾಲ್ಡ್ ಟ್ರಂಪ್ ನಡೆ
ಇರಾನ್ ಪ್ರಸ್ತಾವನೆ ತಳ್ಳಿದ ಟ್ರಂಪ್
ಈ ಹಿಂದೆ ಅಮೆರಿಕದ 14 ಅಂಶಗಳ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿತ್ತು. ಹೀಗಾಗಿ ಇರಾನ್‌ನ ಶಾಂತಿ ಪ್ರಸ್ತಾವನೆಯನ್ನು ಟ್ರಂಪ್ ತಳ್ಳಿ ಹಾಕಿದ್ದಾರೆ. ʼʼಇರಾನ್ ಕಳುಹಿಸಿರುವ ಶಾಂತಿ ಪ್ರಸ್ತಾವನೆಯನ್ನು ಪರಿಶೀಲಿಸಿದ್ದೇನೆ. ಅದು ನನಗೆ ಇಷ್ಟವಾಗಿಲ್ಲ ಹಾಗೂ ಸಂಪೂರ್ಣ ಸ್ವೀಕಾರಾರ್ಹವೂ ಅಲ್ಲʼʼ ಎಂದು ಟ್ರಂಪ್ ಹೇಳಿದ್ದರು. ಜತೆಗೆ ಇರಾನ್ ಕಳೆದ 50 ವರ್ಷದಿಂದ ಅಮೆರಿಕದ ಜತೆ ಆಟವಾಡುತ್ತಿದೆ ಎಂದಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.