ಇರಾನ್ ವಿರುದ್ಧದ ಹೋರಾಟಕ್ಕೆ ಅಮೆರಿಕದೊಂದಿಗೆ ಕೈ ಜೋಡಿಸಲು ಯುಎಇ ಸಜ್ಜು; ಪಶ್ಚಿಮ ಏಷ್ಯಾ ಸಂಘರ್ಷ ಮತ್ತಷ್ಟು ತೀವ್ರ?
UAE ready to join the war: ಇರಾನ್ ವಿರುದ್ಧ ಹೋರಾಡಲು ಅಮೆರಿಕದೊಂದಿಗೆ ಕೈಜೋಡಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ ಸಜ್ಜಾಗಿದೆ ಎಂದು ಎಂದು ವರದಿ ತಿಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುದ್ಧವನ್ನು ಬೇಗನೆ ಮುಗಿಸಲು ಮುಂದಾಗಿದ್ದಾರೆ ಎಂಬ ಸುದ್ದಿಯ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಸಾಂದರ್ಭಿಕ ಚಿತ್ರ -
ಅಬುದಾಭಿ, ಏ. 1: ಇರಾನ್ ವಿರುದ್ಧದ ಯುದ್ಧ (Iran war) ಶೀಘ್ರದಲ್ಲೇ ಮತ್ತೊಂದು ಹಂತ ತಲುಪಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗಾಗಿ ಇರಾನ್ ಹಿಡಿತದಲ್ಲಿರುವ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಬಲವಂತವಾಗಿ ತೆರೆಸಲು ಸಿದ್ಧತೆ ನಡೆಸುತ್ತಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಅಮೆರಿಕದೊಂದಿಗೆ (US) ಎಮಿರೇಟ್ಸ್ ಕೂಡ ಯುದ್ಧಕ್ಕೆ ಇಳಿಯಲು ಮುಂದಾಗಿದೆ ಎಂದು ಹೇಳಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುದ್ಧವನ್ನು ಬೇಗನೆ ಮುಗಿಸಲು ಮುಂದಾಗಿದ್ದಾರೆ ಎಂಬ ಸುದ್ದಿಯ ಮಧ್ಯೆ ಈ ಬೆಳವಣಿಗೆ ನಡೆದಿದೆ. ಅಮೆರಿಕವು ಯುದ್ಧದಿಂದ ಹಿಂದೆ ಸರಿಯಲು ಮುಂದಾಗಿದ್ದು, ಯುಎಇ ಮುಂಚೂಣಿಯಲ್ಲಿರುವ ಕೆಲವು ಗಲ್ಫ್ ಮಿತ್ರರಾಷ್ಟ್ರಗಳು ಹೋರಾಟವನ್ನು ಮುಂದುವರಿಸುವಂತೆ ಅಮೆರಿಕವನ್ನು ಒತ್ತಾಯಿಸುತ್ತಿವೆ.
ವರದಿಯ ಪ್ರಕಾರ, ಯುಎಇಯು ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿಯಿಂದ ಸೈನಿಕ ಕ್ರಮಕ್ಕೆ ಅನುಮತಿ ನೀಡುವ ನಿರ್ಣಯಕ್ಕಾಗಿ ಲಾಬಿ ಮಾಡುತ್ತಿದೆ. ಅಮೆರಿಕ ಹಾಗೂ ಯುರೋಪ್ ಮತ್ತು ಏಷ್ಯಾದ ಸೈನಿಕ ಶಕ್ತಿಗಳ ದೇಶಗಳ ಒಕ್ಕೂಟ ರಚಿಸಿ ಆ ಸಮುದ್ರ ಮಾರ್ಗವನ್ನು ಬಲವಂತವಾಗಿ ಮರು ತೆರೆಯಲು ಮನವಿ ಮಾಡಿದೆ. ಹೊರ್ಮುಜ್ ಜಲಸಂಧಿ ಆ ರಾಷ್ಟ್ರದ ಇಂಧನ ರಫ್ತು, ಹಡಗು ಉದ್ಯಮ ಮತ್ತು ಆಹಾರ ಸರಬರಾಜಿಗೆ ಜೀವನಾಡಿ ಎನಿಸಿಕೊಂಡಿದೆ.
ʼʼನಮ್ಮ ಪಡೆಗಳು ಸಿದ್ಧವಾಗಿವೆʼʼ: ಇರಾನ್‌ನ ದಾಳಿ ಬೆದರಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗು
ಇರಾನ್ ಆಡಳಿತವು ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಪ್ರಮುಖ ಹಡಗು ಮಾರ್ಗವನ್ನು ತಡೆಗಟ್ಟುವ ಮೂಲಕ ಜಾಗತಿಕ ಆರ್ಥಿಕತೆಯನ್ನು ಕುಸಿಯುವಂತೆ ಮಾಡುತ್ತಿದೆ ಎಂದು ಯುಎಇ ಅಧಿಕಾರಿಯೊಬ್ಬರು ಹೇಳಿದರು. ಯುಎಇಯ ತೈಲ ಮತ್ತು ಅನಿಲ ಸೌಲಭ್ಯಗಳ ಮೇಲೆ ಪದೇ ಪದೆ ಬಾಂಬ್ ದಾಳಿ ನಡೆಸುತ್ತಿರುವುದರಿಂದ ಟೆಹರಾನ್‌ನ ಆಕ್ರಮಣಶೀಲತೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಗಲ್ಫ್ ದೇಶಗಳು ತೀರ್ಮಾನಿಸಿವೆ.
ಸಮುದ್ರ ಮಾರ್ಗದ ಭದ್ರತೆಯನ್ನು ಖಚಿತಪಡಿಸಲು ತಾವು ಯಾವ ರೀತಿಯಲ್ಲಿ ಪಾತ್ರವಹಿಸಬಹುದು ಎಂಬುದನ್ನು ಯುಎಇ ಸಕ್ರಿಯವಾಗಿ ಪರಿಶೀಲಿಸುತ್ತಿದೆ. ಇದರಲ್ಲಿ ಸಮುದ್ರದಲ್ಲಿ ಅಳವಡಿಸಿರುವ ಮೈನ್‌ಗಳನ್ನು ತೆರವುಗೊಳಿಸುವುದು ಹಾಗೂ ಇತರ ಸೇವೆಗಳನ್ನು ಒದಗಿಸುವುದೂ ಸೇರಿದೆ.
ಇನ್ನು ಯುಎಇ ಮಿಲಿಟರಿ ಕ್ರಮಕ್ಕೆ ಮುಂದಾಗಿರುವುದು ಅದರ ಕಾರ್ಯತಂತ್ರದ ದೃಷ್ಟಿಕೋನದಲ್ಲಿ ಮೂಲಭೂತ ಬದಲಾವಣೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಇರಾನ್‌ನೊಂದಿಗೆ ದೀರ್ಘಕಾಲ ವಾಣಿಜ್ಯ ಸಂಬಂಧಗಳನ್ನು ಉಳಿಸಿಕೊಂಡಿದೆ. ಹೀಗಾಗಿ ವಾಷಿಂಗ್ಟನ್ ಮತ್ತು ಟೆಹರಾನ್ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದೆ.
ಇರಾನ್ ಯುದ್ಧ ನಿಲ್ಲಿಸಲು ಚೀನಾ, ಪಾಕಿಸ್ತಾನದ 5 ಅಂಶಗಳ ಯೋಜನೆಯಲ್ಲಿ ಏನಿದೆ?
ಯುಎಇ ವಿಶೇಷವಾಗಿ ಹೊರ್ಮುಜ್ ಜಲಸಂಧಿಯ ಭದ್ರತೆಯನ್ನು ಖಚಿತಪಡಿಸುವ ವಿಚಾರದಲ್ಲಿ, ಮೈತ್ರಿ ರಾಷ್ಟ್ರಗಳು ಹೆಚ್ಚಿನ ಮಿಲಿಟರಿ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂಬ ಡೊನಾಲ್ಡ್ ಟ್ರಂಪ್ ಅವರ ನಿಲುವಿಗೆ ಹೊಂದಿಕೊಳ್ಳುತ್ತಿರುವಂತೆ ಕಾಣುತ್ತಿದೆ.
ಅಬು ಮೂಸಾ ಸೇರಿದಂತೆ ಜಲಸಂಧಿಯಲ್ಲಿರುವ ಪ್ರಮುಖ ದ್ವೀಪಗಳನ್ನು ಅಮೆರಿಕ ವಶಪಡಿಸಿಕೊಳ್ಳಬೇಕೆಂದು ಯುಎಇ ಸೂಚಿಸಿದೆ ಎಂದು ಅರಬ್ ಅಧಿಕಾರಿಗಳು ತಿಳಿಸಿದ್ದಾರೆ. ವಿವಾದಿತ ದ್ವೀಪದ ಮೇಲೆ ಯುಎಇ ಹಕ್ಕು ಸಾಧಿಸಿದೆ. ಆದರೆ ದಶಕಗಳಿಂದ ಇರಾನ್ ಅದನ್ನು ನಿಯಂತ್ರಿಸುತ್ತಿದೆ.
ಇತ್ತೀಚಿನ ವಾರಗಳಲ್ಲಿ ಇರಾನ್, ಎಮಿರೇಟ್ಸ್ ಮೇಲಿನ ದಾಳಿಯನ್ನು ಹೆಚ್ಚಿಸಿದೆ. ಮಂಗಳವಾರವಷ್ಟೇ (ಮಾ. 31) ಸುಮಾರು 50 ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ಇದುವರೆಗೆ ಯುಎಇ ಮೇಲೆ ಸುಮಾರು 2,500 ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದೆ.