ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಆತಂಕ: ಭಾರತೀಯ ಸಿಬ್ಬಂದಿಯಿದ್ದ ಎರಡು ಹಡಗುಗಳ ಮೇಲೆ ದಾಳಿ

Strait of Hormuz: ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ವಿದೇಶಿ ಧ್ವಜದ ಎರಡು ಸರಕು ಹಡಗುಗಳ ಮೇಲೆ ಗುರುವಾರ ಹೊರ್ಮುಜ್ ಜಲಸಂಧಿಯಲ್ಲಿ ದಾಳಿ ನಡೆದಿದೆ. ಪನಾಮ ಧ್ವಜ ಹೊತ್ತ ಎಂ.ಟಿ. ಬಸ್ರಾ ಎನರ್ಜಿ’ ಎಂಬ ಕಚ್ಚಾ ತೈಲ ಸಾಗಣೆ ನೌಕೆ ಹಾಗೂ ಟೋಗೊ ಧ್ವಜದ ಟ್ರೆಂಡ್ ಎಂಬ ತೈಲ ಉತ್ಪನ್ನಗಳ ಮತ್ತೊಂದು ಸಾಗಣೆ ನೌಕೆಯ ಮೇಲೆ ದಾಳಿ ನಡೆದಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ದಾಳಿ

ಸಾಂದರ್ಭಿಕ ಚಿತ್ರ -

Priyanka P
Priyanka P Sep 18, 2026 1:27 PM

ಟೆಹರಾನ್, ಸೆ.18: ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ವಿದೇಶಿ ಧ್ವಜದ ಎರಡು ಸರಕು ಹಡಗುಗಳ (vessels) ಮೇಲೆ ಗುರುವಾರ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ದಾಳಿ ನಡೆದಿದೆ. ಮೊದಲ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ, ಆದರೆ ಎರಡನೇ ದಾಳಿಯ ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ. ಪನಾಮ ಧ್ವಜ ಹೊತ್ತ ಎಂ.ಟಿ. ಬಸ್ರಾ ಎನರ್ಜಿ’ (M.T. Basrah Energy) ಎಂಬ ಕಚ್ಚಾ ತೈಲ ಸಾಗಣೆ ನೌಕೆಯು ಹೊರ್ಮುಜ್ ಜಲಸಂಧಿಯ ಹೊರಭಾಗದಲ್ಲಿ ಸಾಗುತ್ತಿದ್ದಾಗ ಅದರ ಫನೆಲ್ (ಹೊಗೆಹೋಗುವ ಭಾಗ) ಕ್ಕೆ ಕ್ಷಿಪಣಿಯಂತಹ ವಸ್ತುವೊಂದು ಡಿಕ್ಕಿ ಹೊಡೆದಿದೆ. ಈ ಹಡಗಿನಲ್ಲಿದ್ದ 14 ಭಾರತೀಯರು ಸೇರಿದಂತೆ ಎಲ್ಲಾ 22 ಸಿಬ್ಬಂದಿ ಸುರಕ್ಷಿತವಾಗಿದ್ದು, ಹಡಗು ಫುಜೈರಾ ಬಂದರನ್ನು ತಲುಪಿದೆ.

ಟೋಗೊ ಧ್ವಜದ ಟ್ರೆಂಡ್ ಎಂಬ ತೈಲ ಉತ್ಪನ್ನಗಳ ಮತ್ತೊಂದು ಸಾಗಣೆ ನೌಕೆಯ ಮೇಲೆ ಒಮಾನ್‌ನ ಖಸಾಬ್ ಬಂದರಿನ ಸಮೀಪ ಡ್ರೋನ್ ದಾಳಿ ನಡೆದಿದೆ ಎಂದು ವರದಿಯಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ಭಾರತದ ಆರು ಧ್ವಜ ಹೊತ್ತ ಹಡಗುಗಳು ಮತ್ತು ವಿದೇಶಿ ಧ್ವಜ ಹೊತ್ತ ಎಂಟು ಭಾರತೀಯ ಹಡಗುಗಳು ಹೊರ್ಮುಜ್ ಜಲಸಂಧಿಯ ಪಶ್ಚಿಮಕ್ಕೆ ಪರ್ಷಿಯನ್ ಕೊಲ್ಲಿಯಲ್ಲಿದ್ದು, ಒಟ್ಟು 153 ಭಾರತೀಯ ನಾವಿಕರು ಹಡಗಿನಲ್ಲಿದ್ದಾರೆ. ಹೊರ್ಮುಜ್ ಜಲಸಂಧಿಯ ಪಶ್ಚಿಮಕ್ಕೆ, ಪರ್ಷಿಯನ್ ಗಲ್ಫ್ ವಲಯದಲ್ಲಿ ಭಾರತೀಯ ಹಿತಾಸಕ್ತಿಯ ಒಟ್ಟು 10 ಸರಕು ಹಡಗುಗಳು ಸಿಲುಕಿಕೊಂಡಿದ್ದು, ಅವುಗಳನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಯೋಜಿಸಲಾಗಿದೆ.

ಅಮೆರಿಕ-ಇರಾನ್ ನಡುವಿನ ಕದನ ವಿರಾಮ ವಿಫಲ: ಮತ್ತೆ ಮುಚ್ಚಿದ ಹೊರ್ಮುಜ್ ಜಲಸಂಧಿ, ಭಾರತಕ್ಕೆ ಇಂಧನ ಕೊರತೆಯ ಆತಂಕ

ಭಾರತಕ್ಕೆ ರಸಗೊಬ್ಬರ ಪೂರೈಕೆ ನಿರಾತಂಕ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಕಾರಣದಿಂದ ಹೊರ್ಮುಜ್ ಜಲ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿ ಇದ್ದರೂ ಕೂಡ ಭಾರತಕ್ಕೆ ಹಿಂಗಾರು ಬೆಳೆಗೆ ಬೇಕಾದ ರಸಗೊಬ್ಬರಗಳ ಪೂರೈಕೆಯಾಗಲಿದೆ. ಗರಿಷ್ಠ ಬೇಡಿಕೆ ಆರಂಭಕ್ಕೂ ಮುನ್ನವೇ ಸರಕುಗಳು ಭಾರತೀಯ ಬಂದರು ತಲುಪಲಿದೆ. ರಸಗೊಬ್ಬರ ಕಂಪನಿಗಳು ಈಗಾಗಲೇ ಭಾರತಕ್ಕೆ ಕಳುಹಿಸಬೇಕಾದ ರಸಗೊಬ್ಬರಗಳನ್ನು ಕಳುಹಿಸಿಕೊಡುವ ಸಿದ್ಧತೆಯಲ್ಲಿದೆ ಎನ್ನಲಾಗಿದೆ. ಇದು ಸೆಪ್ಟೆಂಬರ್-ಅಕ್ಟೋಬರ್‌ ವೇಳೆಗೆ ಭಾರತೀಯ ಬಂದರುಗಳನ್ನು ತಲುಪಲಿದೆ.

ಹೊರ್ಮುಜ್ ಜಲಮಾರ್ಗದಲ್ಲಿ ನಿರಂತರ ಅಡ್ಡಿಯಿದ್ದರೂ ಹಿಂಗಾರು ಋತು ಆರಂಭಕ್ಕೂ ಮೊದಲೇ ಭಾರತಕ್ಕೆ ರಸಗೊಬ್ಬರ ಸರಬರಾಜು ಆಗಲಿದೆ. ಯೂರಿಯಾ ಆಮದು ಟೆಂಡರ್ ಅಗತ್ಯಕ್ಕಿಂತ ಹೆಚ್ಚಿನ ಬಿಡ್‌ಗಳನ್ನು ಆಕರ್ಷಿಸಿದ್ದು, ಇದು ಚಳಿಗಾಲದ ಬಿತ್ತನೆ ಋತುವಿಗೆ ಮುಂಚಿತವಾಗಿ ದೇಶದ ಬಂದರು ತಲುಪಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ದೇಶಕ್ಕೆ ವಾರ್ಷಿಕವಾಗಿ ಸುಮಾರು 39 ಮಿಲಿಯನ್ ಟನ್ ಯೂರಿಯಾ ಅಗತ್ಯವಿರುತ್ತದೆ. ದೇಶದಲ್ಲಿ ಇದರ ಸುಮಾರು ನಾಲ್ಕನೇ ಮೂರು ಭಾಗದಷ್ಟು ಮಾತ್ರ ಉತ್ಪಾದಿಸಲಾಗುತ್ತದೆ. ಉಳಿದ 8 ಮಿಲಿಯನ್ ಟನ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಪೂರೈಕೆ ಬಗ್ಗೆ ಆತಂಕವಿತ್ತು. ಯಾಕೆಂದರೆ ದೇಶಕ್ಕೆ ಪೂರೈಕೆಯಾಗುವ ಶೇಕಡಾ 70ರಷ್ಟು ಯೂರಿಯಾ ಹೊರ್ಮುಜ್ ಜಲ ಮಾರ್ಗದ ಮೂಲಕವೇ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತವು ಸಂಪ್ರದಾಯವನ್ನು ಮುರಿದು ಗಲ್ಫ್ ದೇಶಗಳನ್ನು ಹೊರತುಪಡಿಸಿ ಬೇರೆ ದೇಶಗಳಿಂದ ಯೂರಿಯಾ ಆಮದಿಗೆ ಮುಂದಾಗಿತ್ತು. ಇದರಿಂದಾಗಿ ಈ ವರ್ಷ ಭಾರತವು 5 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಯೂರಿಯಾವನ್ನು ಬೇರೆ ಕಡೆಗಳಿಂದ ಆಮದು ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದೆ.