ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕ ಪೈಲಟ್‌ಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಐವರು ಸಾವು: ಇರಾನ್

US pilots rescue operation: ಪತನಗೊಂಡ ಫೈಟರ್ ಜೆಟ್ ಸಿಬ್ಬಂದಿಯನ್ನು ರಕ್ಷಿಸಲು ಅಮೆರಿಕ ನಡೆಸಿದ ಕಾರ್ಯಾಚರಣೆಯ ವೇಳೆ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ ಎಂದು ಇರಾನ್‌ ತಿಳಿಸಿದೆ. ಇಸ್ಫಹಾನ್‌ನ ದಕ್ಷಿಣದಲ್ಲಿ ಸಿ-130 ಮಿಲಿಟರಿ ಸಾರಿಗೆ ವಿಮಾನ ಮತ್ತು ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ಪತನಗೊಂಡಿವೆ. ಇರಾನಿನ ಸೇನೆಯು ಇಸ್ರೇಲಿ ಡ್ರೋನ್ ಅನ್ನು ಸಹ ಹೊಡೆದುರುಳಿಸಿದೆ ಎಂದು ವರದಿಯಾಗಿದೆ.

ಅಮೆರಿಕ ಪೈಲಟ್‌ಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಐವರು ಸಾವು

ಅಮೆರಿಕ ಪೈಲಟ್‌ಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಐವರು ಸಾವು -

Priyanka P
Priyanka P Apr 5, 2026 6:47 PM

ಟೆಹರಾನ್‌, ಏ. 5: ಪತನಗೊಂಡ ಫೈಟರ್ ಜೆಟ್ ಸಿಬ್ಬಂದಿಯನ್ನು ರಕ್ಷಿಸಲು ಅಮೆರಿಕ ನಡೆಸಿದ ಕಾರ್ಯಾಚರಣೆಯ (US pilots rescue operation) ವೇಳೆ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ಸಾರಿಗೆ ವಿಮಾನ ಸೇರಿ ಹಲವು ಅಮೆರಿಕ ಉಪಕರಣ ನಾಶವಾದವು ಎಂದು ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ತಿಳಿಸಿವೆ ಎಂಬುದಾಗಿ ಇರಾನಿನ ಮಾಧ್ಯಮ ವರದಿ ಮಾಡಿದೆ (Iran War).

ಇರಾನಿನ ಸಶಸ್ತ್ರ ಪಡೆಗಳ ಏಕೀಕೃತ ಕಮಾಂಡ್ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರರ ಪ್ರಕಾರ, ಇಸ್ಫಹಾನ್‌ನ ದಕ್ಷಿಣದಲ್ಲಿ ಪತನಗೊಂಡ ವಿಮಾನಗಳಲ್ಲಿ ಸಿ-130 ಮಿಲಿಟರಿ ಸಾರಿಗೆ ವಿಮಾನ ಮತ್ತು ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ಸೇರಿವೆ. ಇರಾನಿನ ಸೇನೆಯು ಇಸ್ರೇಲಿ ಡ್ರೋನ್ ಅನ್ನು ಸಹ ಹೊಡೆದುರುಳಿಸಿದೆ ಎಂದು ವರದಿಯಾಗಿದೆ.

ಅಮೆರಿಕ ವಿಮಾನಗಳು ದಕ್ಷಿಣ ಇಸ್ಫಹಾನ್ ಪ್ರದೇಶಕ್ಕೆ ನುಗ್ಗಿದವು. ಅವುಗಳಲ್ಲಿ 2 ಹೆಲಿಕಾಪ್ಟರ್‌ಗಳು ಮತ್ತು ಒಂದು ಸಿ -130 ಮಿಲಿಟರಿ ಸಾರಿಗೆ ವಿಮಾನ ಇದ್ದವು. ಅದನ್ನು ಬೆಂಕಿ ಹಚ್ಚಿ ಸುಟ್ಟುಹಾಕಲಾಗಿದೆ ಎಂದು ಮಿಲಿಟರಿಯ ಕೇಂದ್ರ ಕಮಾಂಡ್ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ ಎಂದು ಅದು ಹೇಳಿದೆ.

ಪೋಸ್ಟ್ ಇಲ್ಲಿದೆ:



ಇರಾನ್ F-15E ಯುದ್ಧ ವಿಮಾನವನ್ನು ಹೊಡೆದುರುಳಿಸಿದ ನಂತರ ಎರಡು ದಿನಗಳ ಕಾಲ ನಾಪತ್ತೆಯಾಗಿದ್ದ ಅಮೆರಿಕದ ಯುದ್ಧ ವಿಮಾನ ಸಿಬ್ಬಂದಿಯನ್ನು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರೂತ್‌ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಟ್ರಂಪ್ ಪ್ರಕಾರ, ಕರ್ನಲ್ ಹುದ್ದೆಯನ್ನು ಹೊಂದಿದ್ದ ಸಿಬ್ಬಂದಿಗೆ ಗಾಯಗಳಾಗಿದ್ದು, ಆದರೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಮೆರಿಕ ಸೇನೆಯ ಭರ್ಜರಿ ಕಾರ್ಯಾಚರಣೆ; ಇರಾನ್‌ಗೆ ನುಗ್ಗಿ ಪೈಲಟ್ ರಕ್ಷಣೆ: ಡೊನಾಲ್ಡ್‌ ಟ್ರಂಪ್ ಹೇಳಿದ್ದೇನು?

ಟ್ರಂಪ್ ನಿರ್ದೇಶನದ ಮೇರೆಗೆ ಪೈಲಟ್ ಅನ್ನು ರಕ್ಷಿಸಲು ಅಮೆರಿಕ ಸೇನೆಯು ವಿಶ್ವದ ಅತ್ಯಂತ ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತವಾದ 10ಕ್ಕೂ ಹೆಚ್ಚು ವಿಮಾನಗಳನ್ನು ಕಳುಹಿಸಿತು. ನೂರಾರು ವಿಶೇಷ ಕಾರ್ಯಾಚರಣೆ ಪಡೆಗಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದವು. ಅವರು ವಾಯುಪಡೆಯ ಸಿಬ್ಬಂದಿಯನ್ನು ರಕ್ಷಿಸಲು ಇರಾನ್‌ಗೆ ನುಗ್ಗಿದರು. ಅವರನ್ನು ಈಗ ಇರಾನ್‌ನಿಂದ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.

ಶುಕ್ರವಾರ (ಏ. 3) ಇರಾನ್, ಅಮೆರಿಕದ F-15E ಸ್ಟ್ರೈಕ್ ಈಗಲ್ ಅನ್ನು ಹೊಡೆದುರುಳಿಸಿತು. ಅದರಲ್ಲಿ ಪೈಲಟ್ ಮತ್ತು ಶಸ್ತ್ರಾಸ್ತ್ರ ಅಧಿಕಾರಿ ಇದ್ದರು. ಅವರಲ್ಲಿ ಒಬ್ಬರನ್ನು ತಕ್ಷಣವೇ ರಕ್ಷಿಸಲಾಯಿತು, ಮತ್ತೊಬ್ಬರು ನಾಪತ್ತೆಯಾಗಿದ್ದರು.

ಸೇನೆಯ ಇತಿಹಾಸದಲ್ಲೇ ಮೊದಲ ಬಾರಿಗೆ, ಶತ್ರು ದೇಶದ ಮಧ್ಯಭಾಗದಲ್ಲಿ ಇಬ್ಬರು ಅಮೆರಿಕ ಪೈಲಟ್‌ಗಳನ್ನು ರಕ್ಷಿಸಲಾಗಿದೆ. ನಾವು ಯಾವತ್ತೂ ಅಮೆರಿಕ ಯೋಧರನ್ನು ಬಿಟ್ಟು ಕೊಡುವುದಿಲ್ಲ. ಒಬ್ಬರಿಗೂ ಯಾವುದೇ ಗಂಭೀರ ಗಾಯವಾಗಿಲ್ಲ. ಈ ಎರಡೂ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶತ್ರು ರಾಷ್ಟ್ರದಲ್ಲಿ ನಾವು ಸಂಪೂರ್ಣ ವಾಯು ಪ್ರಾಬಲ್ಯ ಮತ್ತು ಮೇಲುಗೈ ಸಾಧಿಸಿದ್ದೇವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.