ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಇರಾನ್‌ಗೆ ಅನಗತ್ಯ ಪ್ರಯಾಣ ತಪ್ಪಿಸುವಂತೆ ನಾಗರಿಕರಿಗೆ ಭಾರತ ಸಲಹೆ

ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆ ಈಗ ಹಿಂಸೆಯ ರೂಪಕ್ಕೆ ತಿರುಗಿದೆ. ಈ ಗಲಭೆಗಳ ನಡುವೆ ಹಲವು ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ತನ್ನ ನಾಗರಿಕರಿಗೆ ಇರಾನ್‌ಗೆ ಪ್ರಯಾಣಿಸುವ ವೇಳೆ ಎಚ್ಚರಿಕೆ ವಹಿಸಲು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಸಲಹೆ ನೀಡಿದೆ.

ಇರಾನ್‌ಗೆ ಅನಗತ್ಯ ಪ್ರಯಾಣ ಮಾಡಬೇಡಿ

ಇರಾನ್‌ನಲ್ಲಿ ನಡೆದ ಪ್ರತಿಭಟನೆ (ಸಂಗ್ರಹ ಚಿತ್ರ) -

Profile
Sushmitha Jain Jan 6, 2026 1:46 PM

ಟೆಹ್ರಾನ್‌, ಜ. 6: ಇರಾನ್‌ (Iran) ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ವಿರುದ್ಧ ಕಳೆದೊಂದು ವಾರದಿಂದಲೂ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸೆಯ ಸ್ವರೂಪ ಪಡೆದುಕೊಂಡಿದ್ದು, ಹಲವಾರು ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣವಾಗಿವೆ. ಈ ಹಿನ್ನೆಲೆ ಭಾರತವು ಇರಾನ್‌ಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಹಾಗೂ ಅನಗತ್ಯ ಪ್ರಯಾಣ ತಪ್ಪಿಸುವಂತೆ ಸಲಹೆ ನೀಡಿದೆ.

ಇರಾನ್‌ನ ಇಸ್ಲಾಮಿಕ್ ಆಡಳಿತದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಾಳಿ ನಡೆಸದಂತೆ ಕಳೆದ ವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಟೆಹ್ರಾನ್‌(Tehran)ಗೆ ಎಚ್ಚರಿಕೆ ನೀಡಿದ್ದರು. ಆದರೂ ದೇಶದಲ್ಲಿ ಪ್ರತಿಭಟನಾಕಾರರ ಹತ್ಯಾಕಾಂಡ ಮುಂದುವರಿದಿದೆ. “ಇರಾನ್ ಶಾಂತಿಪೂರ್ಣ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಮಾಡಿ ಹಿಂಸಾತ್ಮಕವಾಗಿ ಹತ್ಯೆ ಮುಂದಾದರೆ, ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರತಿಭಟನಾಕಾರರ ರಕ್ಷಣೆಗೆ ಬರಲಿದೆ” ಎಂದು ಟ್ರಂಪ್ ಹೇಳಿದ್ದರು.

ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಎಚ್ಚರಿಕೆ:



ಇತ್ತೀಚೆಗೆ ಇರಾನ್‌ನ ಮಿತ್ರ ರಾಷ್ಟ್ರ ವೆನೆಜುವೆಲಾಗೆ ಸಂಬಂಧಿಸಿದ ಬೆಳವಣಿಗೆಗಳಿಂದಾಗಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆ ಮುಂದಿನ ಸೂಚನೆ ನೀಡುವವರೆಗೂ ಇರಾನ್‌ಗೆ ಅಗತ್ಯ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸುವಂತೆ ಭಾರತ ಸರ್ಕಾರ ತನ್ನ ನಾಗರಿಕರಿಗೆ ಸೂಚಿಸಿದೆ.

“ಈಗ ಇರಾನ್‌ನಲ್ಲಿ ಇರುವ ಭಾರತೀಯ ನಾಗರಿಕರು ಮತ್ತು ಪಿಐಒಗಳು (ಭಾರತೀಯ ಮೂಲದ ವ್ಯಕ್ತಿಗಳು) ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಪ್ರತಿಭಟನೆ ಅಥವಾ ಮೆರವಣಿಗೆ ನಡೆಯುತ್ತಿರುವ ಪ್ರದೇಶಗಳಲ್ಲಿ ಸಂಚಾರ ತಪ್ಪಿಸಬೇಕು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು” ಎಂದು ಭಾರತ ಸಲಹೆ ನೀಡಿದೆ.

ಇರಾನ್‌ನಲ್ಲಿ ಬೀದಿಗಿಳಿದ ಜನ, ಭಾರಿ ಪ್ರತಿಭಟನೆ, 7 ಮಂದಿ ಸಾವು

ಇರಾನ್‌ನಲ್ಲಿ ನಿವಾಸಿ ವೀಸಾದ ಮೇಲೆ ವಾಸಿಸುತ್ತಿರುವ ಭಾರತೀಯರು ಈಗಾಗಲೇ ನೋಂದಣಿ ಮಾಡಿಸದಿದ್ದರೆ, ಭಾರತೀಯ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಕೂಡ ಭಾರತ ತಿಳಿಸಿದೆ. "ಇರಾನ್‌ನಲ್ಲಿ ಪ್ರತಿಭಟನೆಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ವೇಳೆ ಇನ್ನಷ್ಟು ಸಾವು-ನೋವುಗಳು ಸಂಭವಿಸಿದರೆ ಅಮೆರಿಕ ಇರಾನ್ ಮೇಲೆ “ಭೀಕರ ದಾಳಿ” ನಡೆಸಲಿದೆ" ಎಂದು ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. “ನಾವು ಇದನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಈ ಹಿಂದಿನಂತೆ ಅವರು ಜನರನ್ನು ಕೊಲ್ಲಲು ಆರಂಭಿಸಿದರೆ, ಅಮೆರಿಕದಿಂದ ಭಾರೀ ಹೊಡೆತ ಬೀಳಲಿದೆ” ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದಾಗಿ ಇರಾನ್ ಕಳೆದ ಮೂರು ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ಪ್ರತಿಭಟನೆಗಳನ್ನು ಎದುರಿಸುತ್ತಿದೆ. ಇದರಿಂದ ಹಲವು ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಡಿಸೆಂಬರ್ 28ರಂದು ಕರೆನ್ಸಿ ಮೌಲ್ಯ ಕುಸಿತ ಮತ್ತು ಬೆಲೆ ಏರಿಕೆಯನ್ನು ಸರ್ಕಾರ ಸರಿಯಾಗಿ ನಿರ್ವಹಿಸಿಲ್ಲ ಎಂದು ಉದ್ಯಮಿಗಳು ಪ್ರತಿಭಟನೆ ಆರಂಭಿಸಿದ್ದು, ಲೋರ್ಡೆಗನ್, ಕುಹ್ದಷ್ಟ್ ಮತ್ತು ಇಸ್ಫಹಾನ್ ಪ್ರದೇಶಗಳಲ್ಲಿ ಸಾವುಗಳಾಗಿರುವ ಬಗ್ಗೆ ವರದಿಯಾಗಿವೆ.