ಅಮೆರಿಕ-ಇಸ್ರೇಲ್‌ನಿಂದ ಕದನ ವಿರಾಮ ಒಪ್ಪಂದ ಉಲ್ಲಂಘನೆ: ಮತ್ತೆ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್
Strait of Hormuz: ಅಮೆರಿಕ ಮತ್ತು ಇಸ್ರೇಲ್ ಕದನ ವಿರಾಮ ಒಪ್ಪಂದ ಉಲ್ಲಂಘಿಸಿವೆ ಎಂದು ಆರೋಪಿಸಿರುವ ಇರಾನ್, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗ ಹೊರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕೆ ಮುಚ್ಚುವುದಾಗಿ ಘೋಷಿಸಿದೆ. ಈ ಕ್ರಮವನ್ನು ಮೊದಲ ಹೆಜ್ಜೆ ಎಂದು ಬಣ್ಣಿಸಿರುವ ಇರಾನ್ ಸೇನೆ, ಆಕ್ರಮಣಕಾರಿ ಕ್ರಮಗಳು ಮುಂದುವರಿದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ -
ಟೆಹ್ರಾನ್, ಜೂ. 20: ಅಮೆರಿಕ (United States) ಮತ್ತು ಇಸ್ರೇಲ್ (Israel) ಯುದ್ಧ ವಿರಾಮ (Ceasefire) ಒಪ್ಪಂದವನ್ನು ಉಲ್ಲಂಘಿಸಿವೆ ಎಂದು ಆರೋಪಿಸಿರುವ ಇರಾನ್, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿ (Strait of Hormuz)ಯನ್ನು ಹಡಗು ಸಂಚಾರಕ್ಕೆ ಮುಚ್ಚುವುದಾಗಿ (Shut Down) ಘೋಷಿಸಿದೆ. ಇರಾನ್‌ನ ಉನ್ನತ ಸೇನಾ ಕಮಾಂಡ್ ಖಾತಮ್ ಅಲ್-ಅನ್ಬಿಯಾ ಸೆಂಟ್ರಲ್ ಹೆಡ್‌ಕ್ವಾರ್ಟಸ್ ಈ ಘೋಷಣೆ ಮಾಡಿದ್ದು, ಅಮೆರಿಕ ಮತ್ತು ಇಸ್ರೇಲ್ ಒಪ್ಪಂದದ ಷರತ್ತುಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ರಾಜ್ಯ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, "ಆಕ್ರಮಣಕಾರಿ ಕ್ರಮಗಳು ಮುಂದುವರಿದರೆ ಮುಂದಿನ ಹಂತದ ಕ್ರಮಗಳನ್ನೂ ಕೈಗೊಳ್ಳಲು ಯೋಜನೆ ಸಿದ್ಧವಾಗಿದೆ" ಎಂದು ಸೇನೆ ಎಚ್ಚರಿಕೆ ನೀಡಿದೆ.
ಇರಾನ್ ಮಾಧ್ಯಮಗಳ ವರದಿ ಪ್ರಕಾರ, ಅಮೆರಿಕ ಯುದ್ಧ ಅಂತ್ಯದ ಒಪ್ಪಂದದ ಮೊದಲ ಷರತ್ತನ್ನು ಜಾರಿಗೆ ತರಲು ವಿಫಲವಾಗಿದೆ. ಜತೆಗೆ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಿರಂತರವಾಗಿ ಯುದ್ಧ ವಿರಾಮ ಉಲ್ಲಂಘನೆ ನಡೆಸುತ್ತಿರುವುದು, ನಾಗರಿಕರ ಸಾವುನೋವು ಹಾಗೂ ಸ್ಥಳಾಂತರಕ್ಕೆ ಕಾರಣವಾಗಿರುವುದನ್ನು ಉಲ್ಲೇಖಿಸಿ ಹೊರ್ಮುಜ್ ಜಲಸಂಧಿ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ʼʼಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಕದಲುವುದಿಲ್ಲʼʼ: ಸಿಜೆಪಿ ಹೇಳಿದ್ದೇನು?
ಈ ಕ್ರಮವನ್ನು ʼಮೊದಲ ಹೆಜ್ಜೆʼ ಎಂದು ಬಣ್ಣಿಸಿರುವ ಇರಾನ್ ಸೇನೆ, ದಾಳಿಗಳು ಮತ್ತು ಒಪ್ಪಂದ ಉಲ್ಲಂಘನೆಗಳು ಮುಂದುವರಿದರೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದೆ. ಆದರೆ ಈ ಘೋಷಣೆಯ ಕೆಲವೇ ಹೊತ್ತಿನಲ್ಲಿ ಇರಾನ್‌ನ ಮಾತುಕತೆ ತಂಡ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಲು ಸಿದ್ಧವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಪ್ರವಾಸ ಶುಕ್ರವಾರವೇ ನಿಗದಿಯಾಗಿತ್ತು ಎಂದು ತಿಳಿಸಲಾಗಿದೆ.
ಇದಕ್ಕೂ ಮುನ್ನ ಶನಿವಾರ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ಕನಿಷ್ಠ 16 ಮಂದಿ ಮೃತಪಟ್ಟಿದ್ದರು. ಒಂದು ದಿನದ ಹಿಂದಷ್ಟೇ ಇಸ್ರೇಲ್ ಮತ್ತು ಲೆಬನಾನ್ ನಡುವೆ ಯುದ್ಧ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಇದೇ ವೇಳೆ, ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಷರತ್ತುಗಳನ್ನು ತಕ್ಷಣ ಜಾರಿಗೆ ತರದಿದ್ದರೆ ಸಂಪೂರ್ಣ ಒಪ್ಪಂದವೇ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.