ಮತ್ತೊಂದು ಭೀಕರ ವೈಮಾನಿಕ ದುರಂತ; ರಷ್ಯಾದ ಮಿಲಿಟರಿ ವಿಮಾನ ಪತನವಾಗಿ 17 ಮಂದಿ ಸಾವು
Russian Military Plane Crashes: ನೈಋತ್ಯ ಸೈಬೀರಿಯಾದ ಕೆಮೆರೋವೊದಲ್ಲಿ ಮಂಗಳವಾರ ರಷ್ಯಾದ ಮಿಲಿಟರಿ ಸಾರಿಗೆ ವಿಮಾನ An-12 ಪತನಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಮಾಧ್ಯಮ ಸಂಸ್ಥೆ ಇಜ್ವೆಸ್ಟಿಯಾ ವರದಿ ಮಾಡಿದೆ. ವಿಮಾನ ದುರಂತಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಸಾಂದರ್ಭಿಕ ಚಿತ್ರ -
ಮಾಸ್ಕೋ, ನ. 17: ಮತ್ತೊಂದು ಭೀಕರ ವೈಮಾನಿಕ ದುರಂತವೊಂದು ನಡೆದಿದ್ದು, ಸೈಬೀರಿಯಾದಲ್ಲಿ ರಷ್ಯಾದ ಮಿಲಿಟರಿ ವಿಮಾನ ಪತನವಾಗಿ 17 ಮಂದಿ ಮೃತಪಟ್ಟಿದ್ದಾರೆ (Russian Military Plane Crashes). ನೈಋತ್ಯ ಸೈಬೀರಿಯಾದ ಕೆಮೆರೋವೊದಲ್ಲಿ ಮಂಗಳವಾರ (ನವೆಂಬರ್ 17) ಮಿಲಿಟರಿ ಸಾರಿಗೆ ವಿಮಾನ An-12 ಪತನಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಮಾಧ್ಯಮ ಸಂಸ್ಥೆ ಇಜ್ವೆಸ್ಟಿಯಾ ವರದಿ ಮಾಡಿದೆ. ತಕ್ಷಣಕ್ಕೆ ವಿಮಾನ ದುರಂತಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಯಾಗುನೋವೊ ಗ್ರಾಮದ ಬಳಿ ವಿಮಾನ ಪತನಗೊಂಡಿರುವುದನ್ನು ಕೆಮೆರೋವೊ ಗವರ್ನರ್ ಇಲ್ಯಾ ಸೆರೆಡ್ಯುಕ್ ಖಚಿತಪಡಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ, ಅಪಘಾತಕ್ಕೀಡಾದ ವಿಮಾನ ಯಾವುದು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
ಸೈಬೀರಿಯಾದಲ್ಲಿ ಪತನಗೊಂಡ ವಿಮಾನ:
A military aircraft crashed in southern Russia, killing all 17 people aboard. https://t.co/jXinY85qiS
— Daily Loud (@DailyLoud) November 17, 2026
ಕಾರಣವೇನು?
ಇಂಧನ ಪಂಪ್ನಲ್ಲಿನ ದೋಷ, ಎಂಜಿನ್ನ ಹೊರಕವಚದಲ್ಲಿ ಇಂಧನ ಸೋರಿಕೆಯಾಗಿ ನಂತರ ಬೆಂಕಿ ಹೊತ್ತಿಕೊಂಡಿರುವುದು ಮತ್ತು ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ವೈಫಲ್ಯ-ಈ ಮೂರರ ಪೈಕಿ ಯಾವುದಾದರೊಂದು ಕಾರಣದಿಂದ ದುರಂತ ಸಂಭವಿಸಿರುವ ಸಾಧ್ಯತೆ ಇದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎಂಜಿನ್ನ ಹೊರಕವಚವು ಸುಟ್ಟುಹೋಗಿದೆ ಮತ್ತು ಇಂಧನ ವ್ಯವಸ್ಥೆಯು ಹಾನಿಗೊಳಗಾಗಿದೆ. ನಿಖರವಾದ ಕಾರಣವನ್ನು ಪತ್ತೆಹಚ್ಚಲು ತನಿಖಾ ತಂಡ ಮತ್ತು ವಿಮಾನ ಅಪಘಾತ ಆಯೋಗವು ಕಾರ್ಯನಿರ್ವಹಿಸುತ್ತಿದೆ. ಘಟನಾ ಸ್ಥಳಕ್ಕೆ ತುರ್ತು ಸೇವೆಗಳು, ಪೊಲೀಸರು, ನ್ಯಾಷನಲ್ ಗಾರ್ಡ್ ಮತ್ತು ವಿಪತ್ತು ವೈದ್ಯಕೀಯ ತಂಡಗಳ ಸಿಬ್ಬಂದಿ ಧಾವಿಸಿದ್ದಾರೆ.
110 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾ ಮಿಲಿಟರಿ ವಿಮಾನ ಪತನ; 80 ಮಂದಿ ಸಾವಿನ ಶಂಕೆ
ಹಿಂದೆಯೂ ಅಪಘಾತವಾಗಿತ್ತು
2021ರಲ್ಲಿ 17 ಜನರಿದ್ದ ರಷ್ಯಾದ ಪ್ರಯಾಣಿಕರ ವಿಮಾನವೊಂದು ಸೈಬೀರಿಯಾದಲ್ಲಿ ಹಾರಾಟ ನಡೆಸುತ್ತಿದ್ದಾಗ ನಾಪತ್ತೆಯಾಗಿತ್ತು. ಪಶ್ಚಿಮ ಸೈಬೀರಿಯಾದ ಟಾಮ್ಸ್ಕ್ ಪ್ರದೇಶದಲ್ಲಿ An-28 ವಿಮಾನ ಕಣ್ಮರೆಯಾಗಿತ್ತು. ವಿಮಾನದಲ್ಲಿ 4 ಮಕ್ಕಳು, ಮೂವರು ಸಿಬ್ಬಂದಿ ಹಾಗೂ 14 ಪ್ರಯಾಣಿಕರಿದ್ದರು.
ಅದಕ್ಕೂ ಮೊದಲು ಈಸ್ಟ್ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಕೆಟ್ಟ ಹವಾಮಾನದ ಕಾರಣ ರಷ್ಯಾದ ಮತ್ತೊಂದು ವಿಮಾನ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಎಲ್ಲ 28 ಜನರು ಸಾವನ್ನಪ್ಪಿದ್ದರು.
2025ರಲ್ಲಿ ತಾಂತ್ರಿಕ ದೋಷದಿಂದ ಚೀನಾದ ಗಡಿಯ ಸಮೀಪ ದೇಶದ ಫಾರ್ ಈಸ್ಟರ್ನ್ ಪ್ರದೇಶದಲ್ಲಿ ಹಾರಾಡುತ್ತಿದ್ದ ರಷ್ಯಾದ ಪ್ರಯಾಣಿಕ ವಿಮಾನವು ಪತನಗೊಂಡು ಮಕ್ಕಳು ಸೇರಿ 49 ಜನ ಮೃತಪಟ್ಟಿದ್ದರು. ಸೈಬೀರಿಯಾ ಮೂಲದ ಅಂಗಾರ ಎಂಬ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ AN-24 ಸಂಖ್ಯೆಯ ವಿಮಾನ ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ರಾಡಾರ್ನಿಂದ ಸಂಪರ್ಕ ಕಳೆದುಕೊಂಡು ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು.
ತಾಂತ್ರಿಕ ದೋಷದಿಂದ ರಷ್ಯಾ ವಿಮಾನ ಪತನ; ಮಕ್ಕಳು ಸೇರಿ 49 ಜನರ ಸಾವು?
ಮುಂದುವರಿದ ರಷ್ಯಾ-ಉಕ್ರೇನ್ ಸಂಘರ್ಷ
ರಷ್ಯಾದ ಭೂಪ್ರದೇಶದ ಆಳದ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ನಡೆಸುತ್ತಿರುವ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ತೀವ್ರತೆಯು ಹೆಚ್ಚಾಗಿರುವ ಮಧ್ಯೆಯೇ ಸೈಬೀರಿಯಾದಲ್ಲಿ ಅಪಘಾತ ಸಂಭವಿಸಿದೆ. 24 ಗಂಟೆಗಳ ಅವಧಿಯಲ್ಲಿ ಉಕ್ರೇನ್ನ 1,441 ಡ್ರೋನ್ಗಳನ್ನು ತಡೆದಿದ್ದಾಗಿ ರಷ್ಯಾದ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. 2022ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದ ನಂತರ, ಒಂದೇ ದಿನದಲ್ಲಿ ಇಷ್ಟೊಂದು ಹೆಚ್ಚಿನ ಸಂಖ್ಯೆಯ ಡ್ರೋನ್ಗಳನ್ನು ಹೊಡೆದುರುಳಿಸಿರುವುದು ಇದೇ ಮೊದಲು.
ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.