ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Israel Election Results 2026: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಯುಗಾಂತ್ಯ? ಅರಬ್‌ ಪಕ್ಷದಿಂದ ಪ್ರತಿಸ್ಪರ್ಧಿ ಗಾಡಿ ಐಸೆನ್‌ಕೋಟ್‌ಗೆ ಬೆಂಬಲ

Benjamin Netanyahu: ಅತ್ತ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಹಿನ್ನಡೆಯಾಗಿದ್ದರೆ ಇತ್ತ ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬಹುಮತ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದರೊಂದಿಗೆ ಅವರು ಹುದ್ದೆಯಿಂದ ಕೆಳಗಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇಸ್ರೇಲ್‌ ಚುನಾವಣೆ: ಬಹುಮತ ಪಡೆಯುವಲ್ಲಿ ಎಡವಿದ ಬೆಂಜಮಿನ್‌ ನೆತನ್ಯಾಹು

ಬೆಂಜಮಿನ್ ನೆತನ್ಯಾಹು (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 6, 2026 7:20 PM

ಜೆರುಸಲೇಂ, ನ. 6: ಜಗತ್ತಿನ ಕುತೂಹಲ ಕೆರಳಿಸಿದ ಇಸ್ರೇಲ್‌ ಚುನಾವಣೆಯ ಫಲಿತಾಂಶ (Israel Election Results 2026) ಹೊರ ಬಿದ್ದಿದ್ದು, ಬಹುಮತ ಪಡೆಯಲು ವಿಫಲವಾದ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಹುದ್ದೆಯಿಂದ ಕೆಳಗಿಳಿಯುವುದು ಬಹುತೇಕ ಖಚಿತವಾದಂತಾಗಿದೆ. ಇಸ್ರೇಲ್‌ನ ಅರಬ್ ಬಹುಸಂಖ್ಯಾತರನ್ನು ಹೊಂದಿರುವ 2 ಪಕ್ಷಗಳು, ವಿರೋಧ ಪಕ್ಷದ ನಾಯಕ ಗಾಡಿ ಐಸೆನ್‌ಕೋಟ್ (Gadi Eisenkot) ಅವರನ್ನು ಮುಂದಿನ ಪ್ರಧಾನ ಮಂತ್ರಿಯನ್ನಾಗಿ ಶಿಫಾರಸು ಮಾಡಿವೆ. ಆ ಮೂಲಕ ದೇಶದ ಅತಿ ದೀರ್ಘಕಾಲ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಬೆಂಜಮಿನ್ ನೆತನ್ಯಾಹು ಅವರ ಯುಗಾಂತ್ಯದ ಕಾಲ ಸನ್ನಿಹಿತವಾಗಿದೆ ಎನ್ನಲಾಗಿದೆ.

ನೆತನ್ಯಾಹು ಬಣ ಕೇವಲ 53 ಸ್ಥಾನ ಮತ್ತು ವಿರೋಧ ಪಕ್ಷ ಬಣ 48 ಸ್ಥಾನಗಳನ್ನು ಗಳಿಸಿದ್ದು, ಸರ್ಕಾರ ರಚನೆಗೆ 61 ಮ್ಯಾಜಿಕ್‌ ನಂಬರ್‌. ಇದೀಗ ನೆತನ್ಯಾಹು ಅವರ ಆಡಳಿತಕ್ಕೆ ಅರಬ್‌ ರಾಜಕೀಯ ಪಕ್ಷಗಳು ಸವಾಲೋಡ್ಡಿವೆ. ಅರಬ್‌ ನೇತೃತ್ವದ ರಾಂ ಮತ್ತು ಜಾಯಿಂಟ್‌ ಲಿಸ್ಟ್‌ ಪಕ್ಷಗಳು 120 ಸದಸ್ಯ ಬಲದ ಸಂಸತ್‌ನಲ್ಲಿ ನಿರ್ಣಾಯಕ 19 ಸ್ಥಾನಗಳನ್ನು ಗೆದ್ದುಕೊಂಡಿವೆ. ಇವು 48 ಸ್ಥಾನ ಗಳಿಸಿದ ವಿರೋಧ ಪಕ್ಷ ಬಣಕ್ಕೆ ಬೆಂಬಲ ಸೂಚಿಸಿವೆ.

ಮುಂದಿನ ಸರ್ಕಾರವನ್ನು ರಚಿಸಲು ಯಾಶರ್ ಪಕ್ಷದ ನಾಯಕ ಗಾಡಿ ಐಸೆನ್‌ಕೋಟ್ ಅವರನ್ನು ಬೆಂಬಲಿಸುವುದಾಗಿ ಜಾಯಿಂಟ್ ಲಿಸ್ಟ್ ಮತ್ತು ರಾಂ ಪಕ್ಷಗಳು ಗುರುವಾರ (ನವೆಂಬರ್‌ 5) ಘೋಷಿಸುವ ಮೂಲಕ ನೆತನ್ಯಾಹು ಮತ್ತೊಮ್ಮೆ ಪ್ರಧಾನಿಯಾಗುವ ಸಾಧ್ಯತೆ ಬಹುತೇಕ ಕ್ಷಿಣಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೆರುಸಲೆಮ್‌ನಲ್ಲಿರುವ ಅಧ್ಯಕ್ಷ ಐಸಾಕ್ ಹರ್ಜೋಗ್ ಅವರ ನಿವಾಸದಲ್ಲಿ ನಡೆದ ಸಮಾಲೋಚನೆಗಳ ನಂತರ ಅರಬ್‌ ರಾಜಕೀಯ ಪಕ್ಷಗಳು ತಮ್ಮ ನಿರ್ಧಾರ ಪ್ರಕಟಿಸಿದವು.

ಫ್ಲೈದುಬೈ ವಿಮಾನ ದಾಳಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಪ್ರತೀಕಾರದ ಪ್ರತಿಜ್ಞೆ; ಸಹ ಪೈಲಟ್‌ ಕಳುಹಿಸಿದವರು ತಕ್ಕ ಪಾಠ ಕಲಿಯಲಿದ್ದಾರೆಂದು ಎಚ್ಚರಿಕೆ

ಎಲ್ಲ ನಾಗರಿಕರ, ವಿಶೇಷವಾಗಿ ಅರಬ್ ನಾಗರಿಕರ ಜೀವನಮಟ್ಟವನ್ನು ಸುಧಾರಿಸುವ ಆಶಯದೊಂದಿಗೆ ಈ ನಿರ್ಧಾರ ತಳೆಯಲಾಗಿದೆ ಎಂದು ಜಾಯಿಂಟ್ ಲಿಸ್ಟ್ ಮುಖ್ಯಸ್ಥ ಯೂಸಫ್ ಜಬರೀನ್ ತಿಳಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಅಧ್ಯಕ್ಷ ಐಸಾಕ್ ಹರ್ಜೋಗ್ ಹೇಳಿದ್ದೇನು?

ಸರ್ಕಾರ ರಚನೆಯ ಸಮಾಲೋಚನೆಯ ಬಳಿಕ ಹರ್ಜೋಗ್ ಅಂತಿಮ ಲೆಕ್ಕಾಚಾರ ನೀಡಿದರು. ಒಟ್ಟು 67 ಶಾಸಕರನ್ನು ಹೊಂದಿರುವ ಗುಂಪು ಐಸೆನ್‌ಕೋಟ್ ಅವರನ್ನು ಪ್ರಧಾನಿಯಾಗಿ ಶಿಫಾರಸು ಮಾಡಿದರೆ, 46 ಶಾಸಕರನ್ನು ಹೊಂದಿರುವ ಗುಂಪು ನೆತನ್ಯಾಹು ಅವರಿಗೆ ಬೆಂಬಲ ಸೂಚಿಸಿದೆ. ನವೆಂಬರ್‌ 8ರಂದು ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗಲಿದೆ.

2023ರ ಅಕ್ಟೋಬರ್ 7ರ ಹಮಾಸ್ ನೇತೃತ್ವದ ದಾಳಿಯ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ಅಚ್ಚರಿ ಎಂದರೆ ಮತದಾರರು ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ. ಲಿಕುಡ್ 120 ಸ್ಥಾನಗಳಲ್ಲಿ 27 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಐಸೆನ್‌ಕೋಟ್‌ ಅವರ ಯಾಶಾರ್ 21 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಮತದಾನದ ಮೊದಲು ನೆತನ್ಯಾಹು ಅವರ ಬಣ 68 ಸ್ಥಾನಗಳನ್ನು ಹೊಂದಿತ್ತು. ಸದ್ಯ ಇಸ್ರೇಲ್‌ನಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಯನ್ನು ಜಗತ್ತು ಗಮನಿಸುತ್ತಿದೆ.

ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.