ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲಬುರಗಿಯಲ್ಲಿ ‘ಲೀಪ್ ಗ್ರೋತ್ ಲ್ಯಾಬ್ʼ ಸ್ಥಾಪನೆಗೆ ಮಹತ್ವದ ಹೆಜ್ಜೆ: ಪ್ರಿಯಾಂಕ್‌ ಖರ್ಗೆ

Priyank Kharge: ಲೀಪ್ ಗ್ರೋತ್ ಲ್ಯಾಬ್ ಕೇವಲ ಮೂಲಸೌಕರ್ಯ ಕೇಂದ್ರವಾಗಿರದೆ, ನವೋದ್ಯಮಿಗಳು, ಯುವ ಉದ್ಯಮಿಗಳು ಹಾಗೂ ಸಂಶೋಧಕರಿಗೆ ಮಾರ್ಗದರ್ಶನ, ತಾಂತ್ರಿಕ ನೆರವು, ಅತ್ಯಾಧುನಿಕ ಸೌಲಭ್ಯಗಳು ಮತ್ತು ಬಂಡವಾಳ ಹೂಡಿಕೆದಾರರ ಸಂಪರ್ಕ ಕಲ್ಪಿಸುವ ಸಮಗ್ರ ನಾವೀನ್ಯತಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ‘ಲೀಪ್ ಗ್ರೋತ್ ಲ್ಯಾಬ್ʼ ಸ್ಥಾಪನೆ: ಪ್ರಿಯಾಂಕ್‌ ಖರ್ಗೆ

ಗೃಹ ಸಚಿವ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ) -

Profile
Siddalinga Swamy Nov 6, 2026 7:42 PM

ಬೆಂಗಳೂರು, ನ.06: ಕರ್ನಾಟಕದಲ್ಲಿ ನಾವೀನ್ಯತೆ, ತಂತ್ರಜ್ಞಾನ ಆಧಾರಿತ ಸಂಶೋಧನೆ ಹಾಗೂ ಉದ್ಯಮಶೀಲತೆಯನ್ನು ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸುವ ಉದ್ದೇಶದ ‘ಲೀಪ್ ಗ್ರೋತ್ ಲ್ಯಾಬ್’ ಯೋಜನೆಯಡಿ ಕಲಬುರಗಿಯಲ್ಲಿ ನಾವೀನ್ಯತಾ ಕೇಂದ್ರ ಸ್ಥಾಪಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈ ಕೇಂದ್ರಕ್ಕಾಗಿ ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿಯು ಉಚಿತವಾಗಿ ಭೂಮಿ ಮಂಜೂರು ಮಾಡಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕಲ್ಯಾಣ ಕರ್ನಾಟಕದ ಯುವಜನರಲ್ಲಿರುವ ನವೀನ ಆಲೋಚನೆಗಳು, ಸಂಶೋಧನಾ ಸಾಮರ್ಥ್ಯ ಮತ್ತು ಉದ್ಯಮಶೀಲತೆಯ ಆಸಕ್ತಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಈ ಯೋಜನೆಯ ಉದ್ದೇಶ. ಬೆಂಗಳೂರಿಗೆ ಸೀಮಿತವಾಗಿರುವ ತಂತ್ರಜ್ಞಾನ ಆಧಾರಿತ ಉದ್ಯಮ ವ್ಯವಸ್ಥೆಯನ್ನು ರಾಜ್ಯದ ಇತರ ನಗರಗಳಿಗೂ ವಿಸ್ತರಿಸಿ, ಸ್ಥಳೀಯ ಪ್ರತಿಭೆಗಳು ತಮ್ಮ ಜಿಲ್ಲೆಗಳಲ್ಲಿಯೇ ಉದ್ಯಮ ಆರಂಭಿಸಲು ಮತ್ತು ಉದ್ಯೋಗ ಸೃಷ್ಟಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಲೀಪ್ ಗ್ರೋತ್ ಲ್ಯಾಬ್ ಕೇವಲ ಮೂಲಸೌಕರ್ಯ ಕೇಂದ್ರವಾಗಿರದೆ, ನವೋದ್ಯಮಿಗಳು, ಯುವ ಉದ್ಯಮಿಗಳು ಹಾಗೂ ಸಂಶೋಧಕರಿಗೆ ಮಾರ್ಗದರ್ಶನ, ತಾಂತ್ರಿಕ ನೆರವು, ಅತ್ಯಾಧುನಿಕ ಸೌಲಭ್ಯಗಳು ಮತ್ತು ಬಂಡವಾಳ ಹೂಡಿಕೆದಾರರ ಸಂಪರ್ಕ ಕಲ್ಪಿಸುವ ಸಮಗ್ರ ನಾವೀನ್ಯತಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಆರಂಭಿಕ ಹಂತದ ನವೋದ್ಯಮಗಳು ತಮ್ಮ ಆಲೋಚನೆಗಳನ್ನು ಉತ್ಪನ್ನ ಮತ್ತು ಸೇವೆಗಳಾಗಿ ರೂಪಿಸಲು ಇದು ನೆರವಾಗಲಿದೆ ಎಂದು ಹೇಳಿದ್ದಾರೆ.

ಕೃಷಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಅರೆವಾಹಕ ತಂತ್ರಜ್ಞಾನ ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡಲಾಗುವುದು. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ನವೋದ್ಯಮಗಳ ನಡುವೆ ಸಹಭಾಗಿತ್ವ ಬೆಳೆಸುವುದಕ್ಕೂ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.

ʼಬಿಯಾಂಡ್ ಬೆಂಗಳೂರುʼ ಆಶಯದಡಿ ರಾಜ್ಯದ ವಿವಿಧ ಭಾಗಗಳಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡುವುದು ನಮ್ಮ ಗುರಿ. ಯುವಜನರು ಉದ್ಯೋಗಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ಕಡಿಮೆ ಮಾಡಿ, ತಮ್ಮ ಜಿಲ್ಲೆಗಳಲ್ಲಿಯೇ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಿ ಬೆಳೆಯಲು ಪೂರಕ ವಾತಾವರಣ ನಿರ್ಮಿಸಲಾಗುವುದು.

ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳನ್ನು ಕೆಪಿಎಸ್‌ಸಿಯಿಂದ ಹೊರಗಿರಿಸಿ, ಕೆಇಎ ಮೂಲಕ ಭರ್ತಿ ಮಾಡಿ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ ಲೀಪ್ ಗ್ರೋತ್ ಲ್ಯಾಬ್ ಸ್ಥಾಪನೆಯಿಂದ ಕಲ್ಯಾಣ ಕರ್ನಾಟಕದ ಯುವಜನರಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಈ ಭಾಗವನ್ನು ತಂತ್ರಜ್ಞಾನ, ಸಂಶೋಧನೆ ಮತ್ತು ನವೋದ್ಯಮ ಚಟುವಟಿಕೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.