ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೊದ ಫಾತಿಮಾ ಬಾಷ್
2025ರ ವಿಶ್ವ ಸುಂದರಿ ಪಟ್ಟವನ್ನು ಮೆಕ್ಸಿಕೋದ ಫಾತಿಮಾ ಬಾಷ್ ಅಲಂಕರಿಸಿಕೊಂಡಿದ್ದಾರೆ. ಥೈಲ್ಯಾಂಡ್‌ನಲ್ಲಿ ನಡೆದ 2025 ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಜೇತರಾದ ಅವರು ಕಿರೀಟವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದರು. ಭಾರತದ ಮಣಿಕಾ ವಿಶ್ವಕರ್ಮ ಅವರು ಟಾಪ್ 30ರಲ್ಲಿ ಸ್ಥಾನ ಪಡೆದು ಟಾಪ್ 12ರ ಬಳಿಕ ಸ್ಪರ್ಧೆಯಿಂದ ನಿರ್ಗಮಿಸಿದರು.
ಫಾತಿಮಾ ಬಾಷ್ (ಸಂಗ್ರಹ ಚಿತ್ರ ) -
ಬ್ಯಾಂಕಾಕ್: ಮೆಕ್ಸಿಕೋದ ಫಾತಿಮಾ ಬಾಷ್ 2025ರ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾರೆ. ಥೈಲ್ಯಾಂಡ್‌ನಲ್ಲಿ ನಡೆದ 2025 ರ ಮಿಸ್ ಯೂನಿವರ್ಸ್ ಸ್ಪರ್ಧೆ 74ನೇ ಆವೃತ್ತಿಯಲ್ಲಿ ಫಾತಿಮಾ ಬಾಷ್ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಯುವತಿಯರ ಸಬಲೀಕರಣದ ಬಗ್ಗೆ ಇವರು ನೀಡಿದ ಆಕರ್ಷಕ ಉತ್ತರ ನಿರ್ಣಾಯಕರ ಮನಗೆದ್ದಿತ್ತು. 74ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಒಟ್ಟು 120 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ಬಾರಿಯ ಮಿಸ್ ಯೂನಿವರ್ಸ್ ವಿಜೇತೆ ಡೆನ್ಮಾರ್ಕ್ ನ ವಿಕ್ಟೋರಿಯಾ ಕೆಜೆರ್ ಥಿಲ್ವಿಗ್ ಅವರು ಫಾತಿಮಾ ಬಾಷ್ ಅವರಿಗೆ ಕಿರೀಟವನ್ನು ತೊಡಿಸಿದರು.
ಥೈಲ್ಯಾಂಡ್‌ನಲ್ಲಿ ನಡೆದ 2025ರ ಮಿಸ್ ಯೂನಿವರ್ಸ್ ಕಿರೀಟವನ್ನು ಮೆಕ್ಸಿಕೋದ ಫಾತಿಮಾ ಬಾಷ್ ತಮ್ಮ ಮುಡಿಗೇರಿಸಿಕೊಂಡರೆ ಥೈಲ್ಯಾಂಡ್ ನ ಪ್ರವೀನರ್ ಸಿಂಗ್ ಮೊದಲ ರನ್ನರ್ ಅಪ್ , ವೆನೆಜುವೆಲಾದ ಸ್ಟೆಪನಿ ಆಬಸಾಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ಹಮಾಸ್‌ನ ಮೋಸ್ಟ್ ವಾಂಟೆಡ್ ಟನಲ್ ಪತ್ತೆ ಹಚ್ಚಿದ ಇಸ್ರೇಲ್ ಸೇನೆ
ತೀವ್ರ ಪೈಪೋಟಿಯ ಬಳಿಕ ಮಿಸ್ ಯೂನಿವರ್ಸ್ ಕಿರೀಟ ಧರಿಸುವ ವೇಳೆ ಭಾವುಕರಾದ ಫಾತಿಮಾ ಬಾಷ್ ಅವರ ವಿಡಿಯೋಗಳನ್ನು ಮಿಸ್ ಯೂನಿವರ್ಸ್ ಸಂಸ್ಥೆ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ಮಿಸ್ ಯೂನಿವರ್ಸ್ ಕಿರೀಟ ಗೆದ್ದ ನಾಲ್ಕನೇ ಮೆಕ್ಸಿಕನ್ ಮಹಿಳೆಯಾಗಿರುವ 25 ವರ್ಷದ ಫಾತಿಮಾ ಅವರು ಯುವತಿಯರನ್ನು ಸಬಲೀಕರಣದ ಬಗ್ಗೆ ನೀಡಿದ ಉತ್ತರ ತೀರ್ಪುಗಾರರ ಮನ ಗೆದ್ದಿತ್ತು.
ಸ್ಪರ್ಧೆಯಲ್ಲಿ ಭಾರತದ ಮಣಿಕಾ ವಿಶ್ವಕರ್ಮ ಕೂಡ ಇದ್ದರು. ಇವರು ಟಾಪ್ 30ರಲ್ಲಿ ಸ್ಥಾನ ಪಡೆದು ಬಳಿಕ ಟಾಪ್ 12ರ ಅನಂತರ ನಿರ್ಗಮಿಸಿದರು. ಈ ಹಿಂದೆ ಭಾರತದ ಸುಶ್ಮಿತಾ ಸೇನ್, ಲಾರಾ ದತ್ತಾ, ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಗೆದ್ದಿದ್ದರು.
ಫಾತಿಮಾ ನೀಡಿದ ಉತ್ತರವೇನು?
ಕೊನೆಯ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಕೇಳಲಾದ ಪ್ರಶ್ನೆಗಳಲ್ಲಿ ಫಾತಿಮಾ ಅವರಿಗೆ ನೀವು ಮಿಸ್ ಯೂನಿವರ್ಸ್ 2025 ಪ್ರಶಸ್ತಿಯನ್ನು ಗೆದ್ದರೆ ಯುವತಿಯರನ್ನು ಸಬಲೀಕರಣಗೊಳಿಸಲು ಈ ವೇದಿಕೆಯನ್ನು ಹೇಗೆ ಬಳಸುತ್ತೀರಿ? ಎಂದು ಕೇಳಲಾಯಿತು. ಇದಕ್ಕೆ ಫಾತಿಮಾ ಅವರು ತಮ್ಮ ಉತ್ತರವನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ಹೇಳಿದರು.
ನಿಮ್ಮ ಸತ್ಯಾಸತ್ಯತೆಯ ಶಕ್ತಿ, ನಿಮ್ಮ ಕನಸು, ನಿಮ್ಮ ಹೃದಯವನ್ನು ನಂಬಿರಿ. ನಿಮ್ಮ ಮೌಲ್ಯವನ್ನು ಯಾರೂ ಅನುಮಾನಿಸಲು ಬಿಡಬೇಡಿ. ಯಾಕೆಂದರೆ ನೀವು ಎಲ್ಲದಕ್ಕೂ ಯೋಗ್ಯರು ಮತ್ತು ನಿಮ್ಮಲ್ಲಿರುವ ಶಕ್ತಿಶಾಲಿ ಧ್ವನಿಯನ್ನು ಹೊರಬರುವಂತೆ ಮಾಡಿ ಎಂದು ಫಾತಿಮಾ ತಿಳಿಸಿದರು. ಅವರ ಈ ಉತ್ತರವು ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಪ್ರತಿಬಿಂಬಿಸಿತ್ತು. ಇದು ಕಿರೀಟದಷ್ಟೇ ಶಕ್ತಿಯುತ ಎನ್ನುವುದನ್ನು ಸಾರಿತ್ತು.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಬಗ್ಗೆಯೇ ನೆಗೆಟಿವ್ ಕಮೆಂಟ್; ಧ್ರುವಂತ್ ಡಬಲ್ ಗೇಮ್!
ಕೊನೆಯ ಸುತ್ತಿನಲ್ಲಿ ಚಿಲಿ, ಕೊಲಂಬಿಯಾ, ಕ್ಯೂಬಾ, ಗ್ವಾಡೆಲೋಪ್, ಮೆಕ್ಸಿಕೊ, ಪೋರ್ಟೊ ರಿಕೊ, ವೆನೆಜುವೆಲಾ, ಚೀನಾ, ಫಿಲಿಪೈನ್ಸ್, ಥೈಲ್ಯಾಂಡ್, ಮಾಲ್ಟಾ ಮತ್ತು ಕೋಟ್ ಡಿ'ಐವೊಯಿರ್ ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಫಿಲಿಪೈನ್ಸ್‌ನ ಮಾ ಅಹ್ತಿಸಾ ಮನಾಲೊ ಮೂರನೇ ರನ್ನರ್ ಅಪ್ ಆಗಿ, ಕೋಟ್ ಡಿ'ಐವೋರ್‌ನ ಒಲಿವಿಯಾ ಯೇಸ್ ನಾಲ್ಕನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ತೀರ್ಪುಗಾರರಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇದ್ದರು.