ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‘ನ್ಯೂಕ್ ಇಂಡಿಯಾ’, ‘ಕಿಲ್ ಟ್ರಂಪ್’: ಅಮೆರಿಕ ಶೂಟರ್‌ನ ಶಸ್ತ್ರಗಳ ಮೇಲೆ ಕಂಡುಬಂದ ದ್ವೇಷ ಸಂದೇಶ

ಆಗಸ್ಟ್ 27ರಂದು ಅಮೆರಿಕದ ಮಿನ್ನಿಯಾಪೊಲಿಸ್‌ನ ಅನನ್ಸಿಯೇಷನ್ ಕ್ಯಾಥೊಲಿಕ್ ಶಾಲೆಯ ಚರ್ಚ್‌ ಬಳಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಆರೋಪಿ 23 ವರ್ಷ ರಾಬಿನ್ ವೆಸ್ಟ್‌ಮನ್ ತನ್ನ ಶಸ್ತ್ರಗಳ ಮೇಲೆ ʼಕಿಲ್ ಡೊನಾಲ್ಡ್ ಟ್ರಂಪ್ʼ, ʼನ್ಯೂಕ್ ಇಂಡಿಯಾʼ ಮತ್ತು ʼಬರ್ನ್ ಇಸ್ರೇಲ್ʼ ಎಂಬ ದ್ವೇಷ ಸಂದೇಶಗಳನ್ನು ಬರೆದಿದ್ದ ಎಂದು ತಿಳಿದುಬಂದಿದೆ.

ಸಾಮೂಹಿಕ ಗುಂಡಿನ ದಾಳಿಗೆ ಇಬ್ಬರು ಮಕ್ಕಳು ಬಲಿ

ರಾಬಿನ್ ವೆಸ್ಟ್‌ಮನ್

Profile Sushmitha Jain Aug 28, 2025 8:03 PM

ವಾಷಿಂಗ್ಟನ್‌: ಅಮೆರಿಕದಲ್ಲಿ (America) ಆಗಸ್ಟ್ 27ರಂದು ಮಿನ್ನಿಯಾಪೊಲಿಸ್‌ನ (Minneapolis) ಅನನ್ಸಿಯೇಷನ್ ಕ್ಯಾಥೊಲಿಕ್ ಶಾಲೆಯ ಚರ್ಚ್‌ ಬಳಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಆರೋಪಿ 23 ವರ್ಷ ರಾಬಿನ್ ವೆಸ್ಟ್‌ಮನ್ (Robin Westman) ತನ್ನ ಶಸ್ತ್ರಗಳ ಮೇಲೆ ʼಕಿಲ್ ಡೊನಾಲ್ಡ್ ಟ್ರಂಪ್ʼ, ʼನ್ಯೂಕ್ ಇಂಡಿಯಾʼ ಮತ್ತು ʼಬರ್ನ್ ಇಸ್ರೇಲ್ʼ ಎಂಬ ದ್ವೇಷ ಸಂದೇಶಗಳನ್ನು ಬರೆದಿದ್ದ ಎಂದು ತಿಳಿದುಬಂದಿದೆ.

ವೆಸ್ಟ್‌ಮನ್ ರೈಫಲ್, ಶಾಟ್‌ಗನ್ ಮತ್ತು ಪಿಸ್ತೂಲ್ ಬಳಸಿ ಬೆಳಗ್ಗೆ 8:30ಕ್ಕೆ ಚರ್ಚ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಈ ಘಟನೆಯಲ್ಲಿ 8 ಮತ್ತು 10 ವರ್ಷದ ಇಬ್ಬರು ಮಕ್ಕಳು ಮೃತಪಟ್ಟರೆ, 14 ಮಕ್ಕಳು ಮತ್ತು ಮೂವರು ವೃದ್ಧರು ಗಾಯಗೊಂಡಿದ್ದಾರೆ. ಆರೋಪಿ ಶಾಲೆಯ ಪಾರ್ಕಿಂಗ್‌ನಲ್ಲಿ ಸ್ವಯಂ-ಗುಂಡೇಟಿನಿಂದ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಕೆಲ ಗಂಟೆಗಳ ಮೊದಲು ವೆಸ್ಟ್‌ಮನ್ ತನ್ನ ʼರಾಬಿನ್ ಡಬ್ಲ್ಯು ಯೂಟ್ಯೂಬ್ ಚಾನೆಲ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ತೋರಿಸುವ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದ. ಈ ವಿಡಿಯೊದಲ್ಲಿ ʼಕಿಲ್ ಡೊನಾಲ್ಡ್ ಟ್ರಂಪ್ʼ, ʼನ್ಯೂಕ್ ಇಂಡಿಯಾʼ, ʼಇಸ್ರೇಲ್ ಮಸ್ಟ್ ಫಾಲ್ʼ ಮತ್ತು ʼವೇರ್ ಈಸ್ ಯುವರ್ ಗಾಡ್?ʼ ಎಂಬ ಸಂದೇಶಗಳನ್ನು ಮ್ಯಾಗಜೀನ್‌ಗಳ ಮೇಲೆ ಬರೆಯಲಾಗಿತ್ತು. ಕೆಲವು ಸಂದೇಶಗಳು ಸಿರಿಲಿಕ್ ಲಿಪಿಯಲ್ಲಿದ್ದವು.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ವೆಸ್ಟ್‌ಮನ್ 2020ರಲ್ಲಿ ರಾಬರ್ಟ್ ಎಂಬ ಹೆಸರಿನಿಂದ ರಾಬಿನ್ ಎಂದು ಬದಲಾಯಿಸಿಕೊಂಡಿದ್ದ. ಆರೋಪಿ ತನ್ನನ್ನು ಸ್ತ್ರೀಯಾಗಿ ಗುರುತಿಸಿಕೊಂಡಿದ್ದ. ಆದರೆ ತನ್ನ ಕೊನೆಯ ದಿನಗಳಲ್ಲಿ ಲಿಂಗ ಗುರುತಿನ ಬಗ್ಗೆ ಗೊಂದಲವನ್ನು ವ್ಯಕ್ತಪಡಿಸಿದ್ದ. “ನಾನು ಯಾವಾಗಲೂ ಹೆಣ್ಣಿನಂತೆ ಉಡುಗೆ ತೊಡಲು ಬಯಸುವುದಿಲ್ಲ, ಕೆಲವೊಮ್ಮೆ ಹೆಣ್ಣಿನ ಉಡುಗೆ ಇಷ್ಟವಾಗುತ್ತದೆ. ನಾನು ಸ್ತ್ರೀ ಅಲ್ಲ ಎಂದು ತಿಳಿದಿದ್ದೇನೆ, ಆದರೆ ಪುರುಷನಂತೂ ಖಂಡಿತ ಅಲ್ಲ” ಎಂದು ಬರೆದಿದ್ದ.

ವಿಡಿಯೊವೊಂದರಲ್ಲಿ, ವೆಸ್ಟ್‌ಮನ್ ತನ್ನ ಕುಟುಂಬಕ್ಕೆ ಕ್ಷಮಾಪಣಾ ಪತ್ರ ಬರೆದಿದ್ದ, ಈ ಕೃತ್ಯದಿಂದ ಅವರಿಗೆ ಉಂಟಾಗುವ ತೊಂದರೆಗೆ ವಿಷಾದ ವ್ಯಕ್ತಪಡಿಸಿದ್ದ. “ನಾನು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದೇನೆ, ವರ್ಷಗಳಿಂದ ಆತ್ಮಹತ್ಯೆಯ ಆಲೋಚನೆಗಳಿದ್ದವು” ಎಂದು ಆತ ಬರೆದಿದ್ದ.

ಅಮೆರಿಕ ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೊಯೆಮ್ ವಿಡಿಯೊದ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದಾರೆ. ಎಫ್‌ಬಿಐ ಈ ಘಟನೆಯನ್ನು ದೇಶೀಯ ಭಯೋತ್ಪಾದನೆ ಮತ್ತು ಕ್ಯಾಥೊಲಿಕ್‌ರನ್ನು ಗುರಿಯಾಗಿಸಿದ ದ್ವೇಷ ಅಪರಾಧವೆಂದು ತನಿಖೆ ಮಾಡುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೋಕದ ಸಂಕೇತವಾಗಿ ಅಮೆರಿಕ ಧ್ವಜವನ್ನು ಅರ್ಧಕ್ಕಿಳಿಸಲು ಆದೇಶಿಸಿದ್ದಾರೆ.