ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎವರೆಸ್ಟ್ ಶಿಖರದಲ್ಲಿ 6 ದಿನ ನಾಪತ್ತೆಯಾಗಿದ್ದ ಗೈಡ್‌ ವಾಪಸ್; ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ ಕುಟುಂಬಕ್ಕೆ ಬಿಗ್‌ ಸರ್‌ಪ್ರೈಸ್‌

Mountaineering Guide: ಮೌಂಟ್ ಎವರೆಸ್ಟ್‌ನಲ್ಲಿ ನಾಪತ್ತೆಯಾದ ಆರು ದಿನಗಳ ನಂತರ ನೇಪಾಳಿ ಪರ್ವತಾರೋಹಣ ಮಾರ್ಗದರ್ಶಿ ದಾವಾ ಶೆರ್ಪಾ ಜೀವಂತವಾಗಿ ಮರಳಿದ್ದಾರೆ. ಶೆರ್ಪಾ ಅವರಿಗಾಗಿ ಹುಡುಕಾಟ ನಡೆಸಿ ಭರವಸೆ ಕಳೆದುಕೊಂಡ ತಂಡವು ಅವರು ಮೃತಪಟ್ಟಿರಬಹುದೆಂದು ಭಾವಿಸಿತ್ತು. ಅವರ ಕುಟುಂಬ ಅಂತ್ಯಕ್ರಿಯೆ ಸಮಾರಂಭಕ್ಕೆ ಸಿದ್ಧತೆಗಳನ್ನು ಆರಂಭಿಸಿತ್ತು.

ಎವರೆಸ್ಟ್ ಶಿಖರದಲ್ಲಿ ನಾಪತ್ತೆಯಾಗಿದ್ದ ಗೈಡ್‌ ವಾಪಸ್

ನಾಪತ್ತೆಯಾಗಿದ್ದ ಪರ್ವತಾರೋಹಣ ಮಾರ್ಗದರ್ಶಿ ವಾಪಸ್ -

Priyanka P
Priyanka P Jun 4, 2026 11:07 PM

ಕಠ್ಮಂಡು, ಜೂ. 4: ಪರ್ವತಾರೋಹಿ ಮತ್ತು ನೇಪಾಳಿ ಪರ್ವತಾರೋಹಣ ಮಾರ್ಗದರ್ಶಿ (Nepali climbing guide) ಸತ್ತು ಬದುಕಿದ ಕಥೆ ಇದು. ಹೌದು ದಾವಾ ಶೆರ್ಪಾ ಎಂಬ ಗೈಡ್‌ ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್‌ನಲ್ಲಿ (Mount Everest) 6 ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಅವರಿಗಾಗಿ ಸಾಕಷ್ಟು ಹುಡುಕಅಟ ನಡೆಸಲಾಗಿತ್ತು. ಅವರ ಪತ್ತೆಯಾಗದಿದ್ದಾಗ ಭರವಸೆ ಕಳೆದುಕೊಂಡ ಕುಟುಂಬಸ್ಥರು ಅಂತ್ಯಕ್ರಿಯೆ ಸಮಾರಂಭಕ್ಕೆ ಸಿದ್ಧತೆಗಳನ್ನು ಆರಂಭಿಸಿದ್ದರು. ಆಗಲೇ ಅಚ್ಚರಿ ಎಂಬಂತೆ ದಾವಾ ಶೆರ್ಪಾ ಮರಳಿ ಬಂದಿದ್ದಾರೆ.

ಈ ಪವಾಡ ಸಂಭವಿಸುವವರೆಗೂ ಕುಟುಂಬಸ್ಥರ ಎಲ್ಲ ಭರವಸೆಗಳು ಕಳೆದುಹೋಗಿದ್ದವು. ಪರ್ವತದ ಮೇಲೆ ಉಳಿದಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಸಾಗರಮಾತಾ ಮಾಲಿನ್ಯ ನಿಯಂತ್ರಣ ಸಮಿತಿಯ ಕ್ಲೀನರ್‌ಗಳ ತಂಡವು ಬೇಸ್ ಕ್ಯಾಂಪ್ ಬಳಿ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುವುದನ್ನು ಗಮನಿಸಿತು. ಕ್ಲೀನರ್‌ಗಳು ಅವರನ್ನು ಶಿಬಿರಕ್ಕೆ ಕರೆತರಲು ಧಾವಿಸಿದರು. ಅಲ್ಲಿಂದ ಅವರನ್ನು ಹೆಲಿಕಾಪ್ಟರ್ ಮೂಲಕ ಟ್ರಾಲಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೊನೆಗೆ ಅವರೇ ದಾವಾ ಶೆರ್ಪಾ ಎನ್ನುವುದು ಗೊತ್ತಾಯಿತು.

52 ವರ್ಷದ ದಾವಾ ಶೆರ್ಪಾ ಯುರೋಪಿಯನ್ ಪರ್ವತಾರೋಹಿಯೊಂದಿಗೆ ಹಿಂತಿರುಗುತ್ತಿದ್ದಾಗ ಕ್ಯಾಂಪ್ 3 ಮತ್ತು ಕ್ಯಾಂಪ್ 4ರ ನಡುವೆ ನಾಪತ್ತೆಯಾಗಿದ್ದರು. ಬೇಸ್ ಕ್ಯಾಂಪ್ ಬಳಿ ತೆವಳುತ್ತಾ ಇರುವುದನ್ನು ಗಮನಿಸಿದ ತಂಡವು ಅವರನ್ನು ರಕ್ಷಿಸಿತು.

13 ದಿನಗಳಲ್ಲಿ 3 ಬಾರಿ ಎವರೆಸ್ಟ್ ಏರಿ ಸಾಧನೆಗೈದ ಯುವತಿ: ವಿಶ್ವದಾಖಲೆಯ ದಿನ ನೆನೆದು ಭಾವುಕ!

ಶೆರ್ಪಾ ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಕುಟುಂಬ ಹೇಳಿದೆ. ದಾವಾ ಶೆರ್ಪಾ ಸುಮಾರು ಒಂದು ವಾರದ ಕಾಲ ಆಹಾರ, ನೀರು, ಪೂರಕ ಆಮ್ಲಜನಕವಿಲ್ಲದೆ ಅಪಾಯಕಾರಿ ಖುಂಬು ಐಸ್ ಫಾಲ್‌ನಲ್ಲಿ ಬದುಕುಳಿದರು ಎಂದು ನೇಪಾಳದ ಮೌಂಟ್ ಎವರೆಸ್ಟ್ ಟ್ರೆಕ್ಕಿಂಗ್ ಕಂಪನಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

“ಈ ಸುದ್ದಿ ಕೇಳಿ ನಮಗೆ ತುಂಬಾ ಸಂತೋಷವಾಯಿತು. ನಾವು ಭರವಸೆಯನ್ನೇ ಕಳೆದುಕೊಂಡಿದ್ದೆವು” ಎಂದು ಅವರ ಕುಟುಂಬ ಹೇಳಿದೆ. “ತಂದೆ ಪತ್ತೆಯಾಗಿದ್ದಾರೆಂದು ದೂರವಾಣಿ ಕರೆ ಬಂದಾಗ ಅದನ್ನು ನಂಬಲು ಸಾಧ್ಯವಾಗಲಿಲ್ಲ. ತುಂಬಾ ಸಂತೋಷವಾಯಿತು” ಎಂದು ಅವರ ಪುತ್ರಿ ಮೆಂಡೋ ಲಾಮು ಶೆರ್ಪಾ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಋತುವಿನಲ್ಲಿ ಸುಮಾರು 1,000 ಮಂದಿಯೊಂದಿಗೆ ಎವರೆಸ್ಟ್ ಏರಿದ್ದ ಬ್ರಿಟಿಷ್ ರಾಯಲ್ ಮೆರೈನ್ ಮಾಜಿ ಯೋಧ ಕ್ರಿಸ್ ಟ್ರಾಲ್ ಅವರಿಗೆ ಸಹಾಯ ಮಾಡುತ್ತಿದ್ದ ಗೈಡ್‌ ಈ ದಾವಾ ಶೆರ್ಪಾ. ಮೇ 29ರಂದು ಸಂಜೆ ಸುಮಾರು 5 ಗಂಟೆಗೆ, ಕ್ಯಾಂಪ್-4ರಿಂದ ಇಬ್ಬರೂ ಕೆಳಗಿಳಿಯಲು ಆರಂಭಿಸಿದಾಗ ಏನಾಯಿತು ಎಂಬುದರ ಕುರಿತು ಟ್ರಾಲ್ ವಿಡಿಯೊದಲ್ಲಿ ವಿವಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೊ ಸಂದೇಶದಲ್ಲಿ, ಶೆರ್ಪಾ ಮೃತಪಟ್ಟಿರಬಹುದು ಎಂದು ಭಾವಿಸಿ ಅವರು ದುಃಖ ವ್ಯಕ್ತಪಡಿಸಿದ್ದರು. ಇತರರಂತೆ, ದಾವಾ ಶೆರ್ಪಾ ಮತ್ತೆ ಜೀವಂತವಾಗಿ ಮರಳುವುದಿಲ್ಲ ಅಂತಾ ಅಂದುಕೊಂಡಿದ್ದರು. ಇದೀಗ ಅವರು ಮರಳಿ ಬಂದಿರುವುದಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.