Navika World Kannada Summit: ಆ.29 ರಿಂದ 3 ದಿನ ಫ್ಲೋರಿಡಾದ ಲೇಕ್‌ಲ್ಯಾಂಡ್‌ನಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ
Navika World Kannada Summit: 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025 ವನ್ನು ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್ ನಗರದಲ್ಲಿರುವ ಆರ್‌ಪಿ ಫಂಡಿಂಗ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಗಸ್ಟ್ 29 ರಿಂದ 31ರವರೆಗೆ ಆಯೋಜಿಸಲಾಗಿದೆ ಎಂದು ನಾವಿಕ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
-ಬೆಂಕಿ ಬಸಣ್ಣ ನ್ಯೂ ಯಾರ್ಕ್, ಛೇರ್ಮನ್, ನಾವಿಕ ಪ್ರಚಾರ ಸಮಿತಿ
ಫ್ಲೋರಿಡಾ: 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025 (Navika World Kannada Summit) ವನ್ನು ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್ ನಗರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆರ್‌ಪಿ ಫಂಡಿಂಗ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಗಸ್ಟ್ 29 ರಿಂದ 31ರವರೆಗೆ ಆಯೋಜಿಸಲಾಗಿದೆ ಎಂದು ನಾವಿಕ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ʼನಮ್ಮ ನಾವಿಕ ಸಂಸ್ಥೆಯು ಫ್ಲೋರಿಡಾ ರಾಜ್ಯದಲ್ಲಿರುವ ನಾಲ್ಕು ಪ್ರಮುಖ ಕನ್ನಡ ಸಂಘಗಳಾದ ಶ್ರೀಗಂಧ ಕನ್ನಡ ಕೂಟ, ಟಾಂಪ, ಒರ್ಲಾಂಡೋ ಕನ್ನಡ ಕೂಟ, ನಂದಿ ಕನ್ನಡ ಕೂಟ, ಮಯಾಮಿ, ಮತ್ತು ಸವಿಕನ್ನಡ ಕೂಟ ಜ್ಯಾಕ್ಸನ್ವಿಲ್ ಸಹಯೋಗದೊಂದಿಗೆ ಈ ಬೃಹತ್ ವಿಶ್ವ ಕನ್ನಡ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಪ್ರಯತ್ನಗಳಲ್ಲಿ ನಾವಿಕ ಕಾರ್ಯಕಾರಿಣಿ ಸಮಿತಿಯ ಹರ್ಷಿತ ಗೌಡ ಅಪಾರ ಶ್ರಮ ವಹಿಸಿದ್ದಾರೆʼ ಎಂದು ಅವರು ಹೇಳಿದರು.
ನಾವಿಕ ಸಮಿತಿಯು ಕಳೆದ ಒಂದು ವರ್ಷದಿಂದ ನಾವಿಕ ವಿಶ್ವ ಕನ್ನಡ ಸಮಾವೇಶ ನಡೆಸಲು ಸೂಕ್ತ ಸ್ಥಳಕಾಗಿ ಅಮೇರಿಕಾದ ಸುಮಾರು 20ಕ್ಕೂ ಹೆಚ್ಚು ನಗರಗಳ ಹುಡುಕಾಟ ಮತ್ತು ಅವಲೋಕನ ಮಾಡಿ ಕೊನೆಗೆ ಎಲ್ಲಾ ರೀತಿಯಿಂದಲೂ ಅತ್ಯಂತ ಅನುಕೂಲಕರವಾದ ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್ ನಗರವನ್ನು ಆಯ್ಕೆ ಮಾಡಿದೆ. ಲೇಕ್‌ಲ್ಯಾಂಡ್ ನಗರವು ಟ್ಯಾಂಪಾ ಮತ್ತು ಒರ್ಲ್ಯಾಂಡೊಗಳ ಮಧ್ಯೆ ಇದೆ.
ಈ ಸಮಾವೇಶದಲ್ಲಿ ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್, ಕವಿ ಗೋಷ್ಠಿ, ಯೂಥ್ ಫೋರಮ್, ಸಾಹಿತ್ಯ ಗೋಷ್ಠಿ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿದ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ನಾವಿಕ ಸಂಸ್ಥೆಯು ಮಾತೃ ಭೂಮಿ ಕರ್ನಾಟಕ ಜನತೆಗೆ, ವಿದ್ಯಾರ್ಥಿಗಳಿಗೆ ಕೋವಿಡ್ ಸಮಯದಲ್ಲಿ, ಪ್ರವಾಹ ವಿಕೋಪ, ನೈಸರ್ಗಿಕ ವಿಕೋಪ ಮುಂತಾದ ಸಂದರ್ಭಗಳಲ್ಲಿ ಸಹಾಯ ಮಾಡುತ್ತಲೇ ಬಂದಿದೆ. ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಅನೇಕ ಪ್ರಯತ್ನಗಳಲ್ಲಿ ಒಂದು ಭಾಗವಾಗಿ ಈ ಸಂಸ್ಥೆ ವಿಶ್ವ ಕನ್ನಡ ಸಮ್ಮೇಳನಗಳನ್ನು ಸಂಯೋಜಿಸುತ್ತಾ ಬಂದಿದೆ. ನಾವಿಕ ಸಂಸ್ಥೆಯು ಬೆಸ ವರ್ಷಗಳಲ್ಲಿ ಅಮೇರಿಕಾ ದೇಶದಲ್ಲಿ ಮತ್ತು ಸಮ ವರ್ಷಗಳಲ್ಲಿ ಅಮೇರಿಕಾದ ಹೊರಗಡೆ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿದೆ. ಕಳೆದ ವರ್ಷ 2024 ರಲ್ಲಿ ಸಂಸ್ಥೆಯು ಯೂರೋಪ್ ಖಂಡದ ಜರ್ಮನಿ ದೇಶದ ಫ್ರಾಂಕ್ಫರ್ಟ್‌ನಲ್ಲಿ ರೈನ್ ಮೇನ್ ಕನ್ನಡ ಸಂಘದ ಸಹಯೋಗದೊಂದಿಗೆ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವನ್ನು ಭಾರಿ ಅದ್ದೂರಿಯಾಗಿ ಆಯೋಜಿಸಿದ್ದನ್ನು ನೆನಪಿಸಿಕೊಳ್ಳಬಹುದು. ಈ ಸಮಾವೇಶದ ಕುರಿತು ಹೆಚ್ಚಿನ ವಿವರಗಳು ಮತ್ತು ರಿಜಿಸ್ಟ್ರೇಷನ್ ಲಿಂಕ್ www.navika.org ನಲ್ಲಿ ಶೀಘ್ರದಲ್ಲಿ ಪ್ರಕಟವಾಗಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | ತೆಂಡೂಲ್ಕರ್‌ಗೆ ಜೀವಮಾನ ಶ್ರೇಷ್ಠ: 2023-24ರ ಸಾಲಿನ ಬಿಸಿಸಿಐ ಪ್ರಶಸ್ತಿ ವಿಜೇತರ ವಿವರ!
ಫ್ಲೋರಿಡಾದಲ್ಲಿ ದಶಕಗಳ ಕಾಲ ನೆಲೆಸಿ, ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿರುವ, ಇತ್ತೀಚಿಗೆ ನಿಧನರಾದ ನಾವಿಕ ಸಂಸ್ಥೆಯ ಮಾಜಿ ಅಧ್ಯಕ್ಷೆ ಡಾ. ರೇಣುಕ ರಾಮಪ್ಪ ಅವರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ಈ ವರ್ಷದ ನಾವಿಕ ವಿಶ್ವ ಕನ್ನಡ ಸಮ್ಮೇಳನ 2025 ವನ್ನು, ಅವರು ದೀರ್ಘಕಾಲ ವಾಸವಾಗಿದ್ದ ಫ್ಲೋರಿಡಾದಲ್ಲಿ ನಡೆಸಲು ತೀರ್ಮಾನ ಮಾಡಲಾಯಿತು ಎಂದು ನಾವಿಕ ಸಂಸ್ಥೆಯ ಆಡಳಿತ ಮಂಡಳಿಯ ಚೇರ್ಮನ್ ಡಾ. ಕೃಷ್ಣಮೂರ್ತಿ ಜೋಯಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.