ಪ್ರಧಾನಿ ಮೋದಿ ಭೇಟಿಯ ವೇಳೆ ಕೇಳಿದ ಪ್ರಶ್ನೆಯನ್ನು ಸಮರ್ಥಿಸಿಕೊಂಡ ನಾರ್ವೆ ಪತ್ರಕರ್ತೆ; ಹೇಳಿದ್ದೇನು?
Norwegian journalist defends question: ನಾರ್ವೆ ದೇಶದ ಪತ್ರಕರ್ತೆ ಹೆಲ್ಲೆ ಲಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಭೇಟಿಯ ವೇಳೆ ನಡೆದ ಘಟನೆಯ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಸ್ವತಂತ್ರ ಮಾಧ್ಯಮ ಹೊಂದಿರುವ ದೇಶದ ಪತ್ರಕರ್ತರ ಪ್ರಶ್ನೆಗಳಿಗೆ ನೀವು ಏಕೆ ಉತ್ತರಿಸುವುದಿಲ್ಲ? ಎಂದು ಅವರು ಮೋದಿ ಅವರನ್ನು ಪ್ರಶ್ನಿಸಿದ್ದರು.
ಮೋದಿಗೆ ಕೇಳಿದ ಪ್ರಶ್ನೆಯನ್ನು ಸಮರ್ಥಿಸಿಕೊಂಡ ನಾರ್ವೆ ಪತ್ರಕರ್ತೆ -
ಓಸ್ಲೋ, ಮೇ 21: ನಾರ್ವೆ ದೇಶದ ಪತ್ರಕರ್ತೆ ಹೆಲ್ಲೆ ಲಿಂಗ್ (Helle Lyng) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಾರ್ವೆ ಭೇಟಿಯ ವೇಳೆ ನಡೆದ ಘಟನೆಯ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪ್ರಭಾವಿ ನಾಯಕರನ್ನು ಪ್ರಶ್ನಿಸುವುದು ಸ್ವತಂತ್ರ ಪತ್ರಿಕೋದ್ಯಮದ ಮೂಲಭೂತ ಕರ್ತವ್ಯ. ಮಾಧ್ಯಮವು ಕೇವಲ ನಿಯಂತ್ರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಷ್ಟೇ ಸೀಮಿತವಾಗಬಾರದು ಎಂದು ಹೇಳಿದ್ದಾರೆ.
ನಾರ್ವೆಯ ದಿನಪತ್ರಿಕೆ ದಾಗ್‌ಸಾವಿಸೆನ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಹೆಲ್ಲೆ ಲಿಂಗ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಿದ್ದ ವೈರಲ್ ಪ್ರಶ್ನೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಶ್ವದಲ್ಲೇ ಅತ್ಯಂತ ಸ್ವತಂತ್ರ ಮಾಧ್ಯಮ ಹೊಂದಿರುವ ದೇಶದ ಪತ್ರಕರ್ತರ ಪ್ರಶ್ನೆಗಳಿಗೆ ನೀವು ಏಕೆ ಉತ್ತರಿಸುವುದಿಲ್ಲ? ಎಂದು ಅವರು ಮೋದಿ ಅವರನ್ನು ಪ್ರಶ್ನಿಸಿದ್ದರು. ಈ ಪ್ರಶ್ನೆ ನಾರ್ವೆಯ ಪತ್ರಿಕಾ ಸ್ವಾತಂತ್ರ್ಯದ ಬದ್ಧತೆಯಿಂದಲೇ ಬಂದಿರುವಂಥದ್ದು ಎಂದು ಹೇಳಿದ್ದಾರೆ.
ಭಾನುವಾರದಂದು ನಾರ್ವೆಯ ಸಂವಿಧಾನ ದಿನವನ್ನು ಆಚರಿಸಿ, ಮರುದಿನ ಸೋಮವಾರದಂದೇ ನನ್ನ ಪತ್ರಿಕಾ ಸ್ವಾತಂತ್ರ್ಯವನ್ನು ಬಳಸದಂತೆ ದೂರ ಉಳಿಯಲು ಸಾಧ್ಯವಿಲ್ಲ ಎಂದು ಅವರು ಬರೆದಿದ್ದಾರೆ.
ಇಲ್ಲಿದೆ ವಿಡಿಯೊ:
Primeminister of India, Narendra Modi, would not take my question, I was not expecting him to.
— Helle Lyng (@HelleLyngSvends) May 18, 2026
Norway has the number one spot on the World Press Freedom Index, India is at 157th, competing with Palestine, Emirates & Cuba.
It is our job to question the powers we cooperate… pic.twitter.com/vZHYZnAvev
#WATCH | Oslo, Norway | MEA Secretary (West) Sibi George responds to question by reporters from Norway - "Why should we trust you?" " Will the PM take critical questions from the Indian Press?" pic.twitter.com/iaEGIlVG08
— ANI (@ANI) May 18, 2026
ಈ ವಾರದ ಆರಂಭದಲ್ಲಿ ಪ್ರಧಾನಿ ಮೋದಿಯು ಭಾರತ-ನಾರ್ಡಿಕ್ ಶೃಂಗಸಭೆಗಾಗಿ ಓಸ್ಲೋಗೆ ಭೇಟಿ ನೀಡಿದ್ದರು. ಈ ವೇಳೆ ವಿವಾದ ಭುಗೆಲೇಳಲು ಕಾರಣವಾಯಿತು. ನಾರ್ವೇಜಿಯನ್ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಇಬ್ಬರು ನಾಯಕರು ಪ್ರಶ್ನೆಗಳಿಗೆ ಉತ್ತರಿಸದೆ ಹೊರಟರು.
ಅವರು ಹೊರಟಾಗ, ನಾರ್ವೆಯ ದೈನಿಕ ದಾಗ್‌ಸಾವಿಸೆನ್ ಪತ್ರಕರ್ತೆಯಾದ ಹೆಲ್ಲೆ ಲಿಂಗ್ ಅವರು, ವಿಶ್ವದ ಅತ್ಯಂತ ಸ್ವತಂತ್ರ ಮಾಧ್ಯಮದಿಂದ ನೀವು ಏಕೆ ಪ್ರಶ್ನೆಗಳನ್ನು ಎದುರಿಸುತ್ತಿಲ್ಲ? ಎಂದು ಮೋದಿಯವರನ್ನು ಜೋರಾಗಿ ಪ್ರಶ್ನಿಸಿದ್ದರು. ನಂತರ ಲಿಂಗ್ ಆ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದರು. ಅದು ಶೀಘ್ರದಲ್ಲೇ ವೈರಲ್ ಆಯಿತು.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ಅಗ್ರಸ್ಥಾನದಲ್ಲಿರುವುದನ್ನು ಮತ್ತು ಭಾರತವು ಗಣನೀಯವಾಗಿ ಕೆಳಮಟ್ಟದ ಸ್ಥಾನದಲ್ಲಿರುವುದನ್ನು ಎತ್ತಿ ತೋರಿಸಿದ ಅವರು, ನಾವು ಯಾರೊಂದಿಗೆ ಸಹಕರಿಸುತ್ತೇವೆಯೋ ಅವರನ್ನು ಪ್ರಶ್ನಿಸುವುದು ನಮ್ಮ ಕೆಲಸವಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶಗಳಲ್ಲಿ ಪತ್ರಕರ್ತರಿಗೆ ನಾಯಕರನ್ನು ಮುಕ್ತವಾಗಿ ಪ್ರಶ್ನಿಸುವ ಅವಕಾಶ ಇರಬೇಕು. ವಿಶೇಷವಾಗಿ ವಿದೇಶಿ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರನ್ನು ಸವಾಲು ಮಾಡುವ ಹಕ್ಕು ಮಾಧ್ಯಮಕ್ಕಿರಬೇಕು ಎಂದು ಅವರು ವಾದಿಸಿದ್ದಾರೆ.
ಈ ಘಟನೆ ನಂತರ ಓಸ್ಲೋದಲ್ಲಿ ನಡೆದ ವಿದೇಶಾಂಗ ಸಚಿವಾಲಯದ ಬ್ರೀಫಿಂಗ್‌ನಲ್ಲಿ ಮುಂದುವರೆಯಿತು. ಲಿಂಗ್ ನೇರವಾಗಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಅವರನ್ನು, ಭಾರತದಲ್ಲಿನ ಮಾನವ ಹಕ್ಕುಗಳ ಕಾಳಜಿಗಳ ಬಗ್ಗೆ ಮತ್ತು ಪತ್ರಕರ್ತರು ಭಾರತ ಸರ್ಕಾರವನ್ನು ಏಕೆ ನಂಬಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದರೂ ಪತ್ರಕರ್ತೆಗೆ ಲಿಂಗ್‌ಗೆ ಆ ಉತ್ತರ ಸರಿಹೊಂದಲಿಲ್ಲ. ಹೀಗಾಗಿ ಮತ್ತೆ ಮತ್ತೆ ಪ್ರಶ್ನಿಸಿದ್ದಾರೆ. ಇದು ಉದ್ವಿಗ್ನತೆಗೆ ಕಾರಣವಾಯಿತು.
ಈ ಘಟನೆಯು ಭಾರತದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮರೆ ಮಾಚಲು ಏನು ಇಲ್ಲದಿದ್ದರೆ ಭಯವೇಕೆ ಎಂದು ಪ್ರಶ್ನಿಸಿದರು.