ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕ್ ಅಧಿಕಾರಿಯ ಉದ್ಧಟತನ; ಭಾರತೀಯ ಪ್ರತಿಭಟನಾಕಾರರ ಕತ್ತು ಸೀಳುವುದಾಗಿ ಸನ್ನೆ

Pahalgam Attack: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಲಂಡನ್‌ನ ಪಾಕಿಸ್ತಾನ ಹೈಕಮಿಷನ್‌ನ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಭಾರತೀಯ ಸಮುದಾಯದವರಿಗೆ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬ ಬೆದರಿಕೆ ಹಾಕುವ ರೀತಿ ವರ್ತಿಸಿರುವ ವಿಡಿಯೊ ವೈರಲ್ ಆಗಿದೆ.

ಭಾರತೀಯರ ಕತ್ತು ಸೀಳುವುದಾಗಿ ಸನ್ನೆ ಮಾಡಿದ ಎಂದು ಪಾಕ್ ಅಧಿಕಾರಿ

Profile Sushmitha Jain Apr 26, 2025 9:40 PM

ನವದೆಹಲಿ: ಜಮ್ಮು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯನ್ನು (Terrorist Attack) ಖಂಡಿಸಿ ಲಂಡನ್‌ನ ಪಾಕಿಸ್ತಾನ ಹೈಕಮಿಷನ್‌ನ (Pakistan High Commission) ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಭಾರತೀಯ ಸಮುದಾಯದವರಿಗೆ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬ ಬೆದರಿಕೆ ಹಾಕುವ ರೀತಿ ವರ್ತಿಸಿರುವ ವಿಡಿಯೊ ವೈರಲ್ ಆಗಿದೆ.

ಲಂಡನ್‌ನ ಪಾಕ್ ಹೈಕಮಿಷನ್‌ನ ಸೇನಾ ಮತ್ತು ವಾಯು ಸಲಹೆಗಾರ ಕರ್ನಲ್ ತೈಮೂರ್ ರಹತ್, ಭಾರತೀಯ ಸಮುದಾಯದ ಪ್ರತಿಭಟನಾಕಾರರಿಗೆ ಕತ್ತು ಕತ್ತರಿಸುವಂತಹ ಬೆದರಿಕೆಯ ಗುರುತನ್ನು ಸಾರ್ವಜನಿಕವಾಗಿ ತೋರಿಸಿರುವ ದೃಶ್ಯ ವಿಡಿಯೊದಲ್ಲಿ ಕಂಡುಬಂದಿದೆ.

ಪಾಕ್‌ ಅಧಿಕಾರಿಯ ಉದ್ಧಟತನದ ವಿಡಿಯೊ ಇಲ್ಲಿ ನೋಡಿ:



ಶುಕ್ರವಾರ 500ಕ್ಕೂ ಹೆಚ್ಚು ಬ್ರಿಟಿಷ್ ಹಿಂದೂಗಳು ಪಾಕಿಸ್ತಾನ ರಾಯಭಾರ ಕಚೇರಿಯ ಮುಂದೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಭಾರತೀಯ ಧ್ವಜ, ಬ್ಯಾನರ್‌ಗಳು, ಮತ್ತು ಪ್ಲಕಾರ್ಡ್‌ಗಳೊಂದಿಗೆ ಭಯೋತ್ಪಾದನೆಯ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಪಾಕಿಸ್ತಾನವು ಇಂತಹ ದಾಳಿಗಳಿಗೆ ಕಾರಣವಾದ ಉಗ್ರಗಾಮಿ ಗುಂಪುಗಳಿಗೆ ಆಶ್ರಯ ನೀಡುತ್ತಿರುವುದನ್ನು ಖಂಡಿಸಿದರು. ದಾಳಿಯಲ್ಲಿ ನಿರಪರಾಧಿಗಳ ಸಾವಿಗೆ ವಿಷಾದ ವ್ಯಕ್ತಪಡಿಸಿದ ಅವರು, ಬಲಿಪಶುಗಳಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ: Pahalgam Terror Attack: ಸಿಂಧೂ ನದಿ ನಮ್ಮದು, ನೀರು ಬಿಡದಿದ್ದರೆ ಭಾರತೀಯರ ರಕ್ತ ಹರಿಯುತ್ತದೆ; ನಾಲಗೆ ಹರಿಬಿಟ್ಟ ಪಾಕ್‌ ರಾಜಕಾರಣಿ ಬಿಲಾವಲ್ ಭುಟ್ಟೋ ಝರ್ದಾರಿ

ಶೋಕದ ವಾತಾವರಣದ ನಡುವೆಯೂ ಪಾಕ್ ಹೈಕಮಿಷನ್ ಜೋರಾಗಿ ಸಂಗೀತ ಹಾಕಿದ್ದು, ಸೂಕ್ಷ್ಮತೆಯಿಲ್ಲದ ಟೀಕೆಗಳನ್ನು ಮಾಡಿದ್ದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನೆಯ ಆಯೋಜಕರಾದ ಒಬ್ಬರು, "ಈ ಪ್ರತಿಭಟನೆಯು ನ್ಯಾಯ ಮತ್ತು ಜವಾಬ್ದಾರಿಗೆ ಕರೆ ನೀಡಿತು. ಆದರೆ ಪಾಕ್ ರಾಯಭಾರ ಕಚೇರಿಯ ಅಧಿಕಾರಿಗಳು ಪ್ರತಿಭಟನೆಯ ವೇಳೆ ಜೋರಾಗಿ ಆಚರಣೆಯ ಸಂಗೀತವನ್ನು ಹಾಕಿದ್ದು, ಶೋಕಾಚರಣೆಯ ಸಂದರ್ಭದಲ್ಲಿ ಅತ್ಯಂತ ಅಗೌರವದ ಕೃತ್ಯವಾಗಿದೆ. ಇಡೀ ವಿಶ್ವವೇ ಬಲಿಪಶುಗಳಿಗಾಗಿ ಶೋಕಿಸುತ್ತಿರುವಾಗ, ರಾಯಭಾರ ಕಚೇರಿಯ ಕ್ರಮವು ಮಾನವೀಯತೆ ಮತ್ತು ಸಹಾನುಭೂತಿಯ ಕೊರತೆಯನ್ನು ತೋರಿಸಿದೆ" ಎಂದು ಹೇಳಿದ್ದಾರೆ.

ಲಂಡನ್‌ನ ಭಾರತೀಯ ವಲಸಿಗರೊಬ್ಬರು "ಪಾಕಿಸ್ತಾನವು ಭಯೋತ್ಪಾದಕ ಕಾರ್ಖಾನೆಯನ್ನು ಪೋಷಿಸಿದೆ. ಇದರಿಂದಾಗಿ ಪಹಲ್ಗಾಮ್‌ನಲ್ಲಿ 26 ಮಂದಿ ನಮ್ಮ ಜನರು ಕೊಲೆಯಾದರು. ಇದರ ವಿರುದ್ಧ ನಾವು ಇಲ್ಲಿ ಪ್ರತಿಭಟಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ. ಇನ್ನೊಬ್ಬ ಪ್ರತಿಭಟನಾಕಾರ, "ಯುಕೆಯಲ್ಲಿರುವ ಭಾರತೀಯ ಸಮುದಾಯವು ಪಹಲ್ಗಾಮ್‌ನ ಭೀಕರ ದಾಳಿಯಿಂದ ಕ್ಷುಬ್ಧವಾಗಿದೆ" ಎಂದು ಹೇಳಿದ್ದಾರೆ.