ಫಿಲಿಪ್ಪೀನ್ಸ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಪ್ರಧಾನಿ ನರೇಂದ್ರ ಮೋದಿ: ಕುರ್ತಾ ಬದಲಿಗೆ 'ಬರೋಂಗ್ ಟಾಗಲಾಗ್' ಧರಿಸಿದ್ದೇಕೆ?
PM Modi Visits Philippines: ವಿದೇಶ ಪ್ರವಾಸಗಳಿಗೆ ತೆರಳಿದಾಗಲೆಲ್ಲ ಅಲ್ಲಿನ ಸ್ಥಳೀಯ ಸಂಸ್ಕೃತಿ ಮತ್ತು ಉಡುಗೆ-ತೊಡುಗೆಗಳಿಗೆ ವಿಶೇಷ ಗೌರವ ನೀಡುವ ಪ್ರಧಾನಿ ನರೇಂದ್ರ ಮೋದಿ ಇದೀಗ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ಹೊಸ ಅವತಾರದಲ್ಲಿ ಮಿಂಚಿದ್ದಾರೆ. ಆಸಿಯಾನ್ ಶೃಂಗಸಭೆಯ ಅಂಗವಾಗಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ತಮ್ಮ ಎಂದಿನ ಕುರ್ತಾ-ಪೈಜಾಮ ಬದಲಿಗೆ ಫಿಲಿಪ್ಪೀನ್ಸ್‌ನ ಸಾಂಪ್ರದಾಯಿಕ ರಾಷ್ಟ್ರೀಯ ಉಡುಪು 'ಬರೋಂಗ್ ಟಾಗಲಾಗ್' ಧರಿಸಿ ಗಮನ ಸೆಳೆದರು.
ಫಿಲಿಪ್ಪೀನ್ಸ್ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಧಾನಿ ಮೋದಿ -
ಮನಿಲಾ, ನ.17: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನಡೆದ ASEAN ಶೃಂಗಸಭೆಯಲ್ಲಿ ಭಾಗವಹಿಸಲು ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿಶೇಷ ಔತಣಕೂಟದಲ್ಲಿ (Gala Dinner) ಅಲ್ಲಿನ ಸಾಂಪ್ರದಾಯಿಕ ಉಡುಗೆಯ ಮೂಲಕ ಜಾಗತಿಕ ನಾಯಕರ ಗಮನ ಸೆಳೆದಿದ್ದಾರೆ. ತಮ್ಮ ಎಂದಿನ ಕುರ್ತಾ-ಪೈಜಾಮ ಮತ್ತು ಜಾಕೆಟ್ ಬದಲಿಗೆ, ಫಿಲಿಪ್ಪೀನ್ಸ್‌ನ ರಾಷ್ಟ್ರೀಯ ಪುರುಷರ ಉಡುಪಾದ 'ಬರೋಂಗ್ ಟಾಗಲಾಗ್' (Barong Tagalog) ಧರಿಸಿ ಪ್ರಧಾನಿ ಮೋದಿ ಮಿಂಚಿದ್ದಾರೆ.
49ನೇ ಆಸಿಯಾನ್ ಶೃಂಗಸಭೆಗೆ ಆಗಮಿಸಿದ್ದ ವಿವಿಧ ದೇಶಗಳ ಗಣ್ಯರಿಗಾಗಿ ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ (Ferdinand Marcos Jr.) ಮನಿಲಾದ 'ಫಿಲಿಪ್ಪೀನ್ಸ್ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್'ನಲ್ಲಿ ಸೋಮವಾರ ರಾತ್ರಿ ಭವ್ಯ ಔತಣಕೂಟವನ್ನು ಆಯೋಜಿಸಿದ್ದರು. ಈ ವೇಳೆ ಆತಿಥೇಯ ದೇಶದ ಸಂಸ್ಕೃತಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಅಧ್ಯಕ್ಷ ಮಾರ್ಕೋಸ್ ಸೇರಿ ಇತರ ಜಾಗತಿಕ ನಾಯಕರಂತೆಯೇ ತಿಳಿ ಬಣ್ಣದ ಕಸೂತಿ ಹೊಂದಿರುವ 'ಬರೋಂಗ್ ಟಾಗಲಾಗ್' ಶರ್ಟ್ ಧರಿಸಿ ಕಾಣಿಸಿಕೊಂಡರು.
ಪೋಸ್ಟ್ ನೋಡಿ:
PM @narendramodi sports the traditional Filipino Barong Tagalog, a hand-embroidered garment reflecting the Philippines’ centuries-old textile and craftsmanship heritage, during Gala Dinner hosted by Phillipines President at Manila. https://t.co/q9lGlCpauz
— Shalinder Wangu (@Wangu_News18) November 16, 2026
ಏನಿದು ಬರೋಂಗ್ ಟಾಗಲಾಗ್ ವಿಶೇಷತೆ?
'ಬರೋಂಗ್ ಟಾಗಲಾಗ್' ಎಂಬುದು ಫಿಲಿಪ್ಪೀನ್ಸ್‌ನ ಅಧಿಕೃತ ರಾಷ್ಟ್ರೀಯ ಉಡುಪಾಗಿದ್ದು, ಅಲ್ಲಿನ ಪುರುಷರು ಪ್ರಮುಖ ಸಮಾರಂಭಗಳು ಮತ್ತು ರಾಜತಾಂತ್ರಿಕ ಔತಣಕೂಟಗಳಲ್ಲಿ ಇದನ್ನು ಧರಿಸುತ್ತಾರೆ. ಅನಾನಸ್ ಎಲೆಗಳ ನಾರು ಅಥವಾ ರೇಷ್ಮೆಯಂತಹ ವಿಶೇಷ ನೂಲಿನಿಂದ ತಯಾರಿಸಲಾಗುವ ಈ ತೆಳುವಾದ ಶರ್ಟ್‌ನ ಮುಂಭಾಗದಲ್ಲಿ ಸೂಕ್ಷ್ಮವಾದ ಕೈಕಸೂತಿ ಇರುತ್ತದೆ. ಇದನ್ನು ಪ್ಯಾಂಟ್ ಒಳಗೆ ಹಾಕದೆ ಧರಿಸುವುದು ವಿಶೇಷವಾಗಿದೆ.
ಫಿಲಿಪ್ಪೀನ್ಸ್‌ನ 100 ವರ್ಷ ಹಳೆಯ ಗುರುದ್ವಾರಕ್ಕೆ ಪ್ರಧಾನಿ ಮೋದಿ ಭೇಟಿ
ʼರಾಮಾಯಣʼ ನಾಟಕ ವೀಕ್ಷಿಸಿದ ಪ್ರಧಾನಿ
ಔತಣಕೂಟಕ್ಕೂ ಮುನ್ನ ಪ್ರಧಾನಿ ಮೋದಿ ಮನಿಲಾದಲ್ಲಿ ಇಲಿಗನ್ ನಗರದ ಇಂಟಿಗ್ರೇಟೆಡ್ ಪರ್ಫಾರ್ಮಿಂಗ್ ಆರ್ಟ್ಸ್ ಗಿಲ್ಡ್ ತಂಡವು ಪ್ರದರ್ಶಿಸಿದ 'ಸೀತಾ: ದಿ ರಾಮಾಯಣ ರೀ-ವಿಸಿಟೆಡ್' (Sita: The Ramayana Revisited) ಎಂಬ ವಿಶೇಷ ನಾಟಕವನ್ನು ವೀಕ್ಷಿಸಿದರು. ಅಲ್ಲದೆ, ಶ್ರೀ ಸತ್ಯಸಾಯಿ ಶಾಲೆಯ ಫಿಲಿಪ್ಪೀನೋ ಮತ್ತು ಭಾರತೀಯ ಮೂಲದ ವಿದ್ಯಾರ್ಥಿಗಳು ಪಠಿಸಿದ 'ಪೂರ್ಣ ಕುಂಭ ಶ್ಲೋಕ'ವನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದಲ್ಲದೆ, 9ನೇ ಮತ್ತು 10ನೇ ಶತಮಾನಕ್ಕೆ ಸೇರಿದ ಗೋಲ್ಡನ್ ತಾರಾ ಆಫ್ ಅಗೂಸನ್ ಹಾಗೂ ಐತಿಹಾಸಿಕ ಲಗುನ ಕಾಪರ್‌ಪ್ಲೇಟ್ ಶಾಸನದ ಪ್ರತಿಕೃತಿಗಳನ್ನೂ ವೀಕ್ಷಿಸಿದರು.