ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BBK 13: ಗಾನವಿಗೆ ಸಪೋರ್ಟ್‌ ಮಾಡಿ ನಾಮಿನೇಷನ್‌ ಗುಂಡಿಗೆ ಬಿದ್ದ ಮಂಜ; ‌ʻಮಾಸ್ಟರ್‌ ಪ್ಲ್ಯಾನ್‌ʼ ಮಾಡಿದ ಸೌಂದರ್ಯ ಶೆಟ್ಟಿ!

ಬಿಗ್‌ ಬಾಸ್‌ ಮನೆಯಲ್ಲಿ ಮಹಾರಾಣಿ ಪಟ್ಟಕ್ಕಾಗಿ ನಡೆಯುತ್ತಿರುವ ಟಾಸ್ಕ್ ರೋಚಕ ತಿರುವು ಪಡೆದುಕೊಂಡಿದೆ. ಯಾರ ಪರವಾಗಿ ಜಗದೀಶ್ ಜೊತೆ ಮಂಜ ಜಗಳವಾಡಿದ್ದರೋ, ಅದೇ ಆಪ್ತ ಗೆಳತಿ ಗಾನವಿ ಗೌಡ ಈಗ ಮಂಜನ ತಲೆಯ ಮೇಲೆ ಸಗಣಿ ನೀರು ಸುರಿದು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಗಾನವಿಗೆ ಸಪೋರ್ಟ್ ಮಾಡಿದ ಮಂಜನಿಗೆ ಸಂಕಷ್ಟ; ಸಗಣಿ ನೀರು ಸುರಿದು ನಾಮಿನೇಟ್!

-

Avinash GR
Avinash GR Nov 17, 2026 5:57 PM

ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಮಹಾರಾಣಿ ಪಟ್ಟಕ್ಕಾಗಿ ನಡೆಯುತ್ತಿರುವ ಟಾಸ್ಕ್‌ಗಳು ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಮನೆಯಲ್ಲಿ ಯುವರಾಣಿಯರಾಗಿರುವ ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ ಹಾಗೂ ಗಾನವಿ ಗೌಡ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದ್ದು, ಇದೇ ವೇಳೆ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಮಂಜ ನೇರವಾಗಿ ನಾಮಿನೇಟ್ ಆಗಿದ್ದಾರೆ.

ವಿಶೇಷವೆಂದರೆ, ಇಡೀ ಮನೆಯಲ್ಲಿ ಮಂಜನಿಗೆ ಅತ್ಯಂತ ಆಪ್ತರಾಗಿರುವ ಹಾಗೂ ಯಾರ ಪರವಾಗಿ ಮಂಜ ಇತ್ತೀಚೆಗಷ್ಟೇ ಜಗದೀಶ್ ಜೊತೆ ಜಗಳಕ್ಕೆ ಇಳಿದಿದ್ದರೋ ಅದೇ ಗಾನವಿ ಗೌಡ, ಮಂಜನ ತಲೆಯ ಮೇಲೆ ಸಗಣಿ ನೀರು ಸುರಿದು ನಾಮಿನೇಟ್ ಮಾಡುವ ಮೂಲಕ ದೊಡ್ಡ ಶಾಕ್ ನೀಡಿದ್ದಾರೆ.

ಗಾನವಿಗೆ ಅಂಗರಕ್ಷಕನಾಗಿದ್ದ ಮಂಜ

ಈ ವಾರದ ಮಹಾರಾಣಿ ಟಾಸ್ಕ್‌ನಲ್ಲಿ ಯುವರಾಣಿಯರ ರಕ್ಷಣೆಗಾಗಿ ಅಂಗರಕ್ಷಕರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿತ್ತು. ಬಲ ಪ್ರದರ್ಶನದ ಟಾಸ್ಕ್‌ನಲ್ಲಿ ಗಾನವಿ ಗೌಡ ಮೊದಲ ಸ್ಥಾನ ಪಡೆದರೆ, ಸೌಂದರ್ಯ ಶೆಟ್ಟಿ ಎರಡನೇ ಮತ್ತು ಆಸಿಯಾ ಮೂರನೇ ಸ್ಥಾನ ಪಡೆದಿದ್ದರು. ಉಳಿದ ಪುರುಷ ಸ್ಪರ್ಧಿಗಳೆಲ್ಲಾ ಆಸಿಯಾಗೆ ಬೆಂಬಲ ನೀಡಲು ಬಯಸಿದ್ದರಾದರೂ, ಅಂಗರಕ್ಷಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ಬಿಗ್ ಬಾಸ್ ಯುವರಾಣಿಯರಿಗೇ ನೀಡಿದ್ದರು. ಮೊದಲ ಆಯ್ಕೆಯ ಅವಕಾಶ ಪಡೆದ ಗಾನವಿ, ಸ್ಮಾರ್ಟ್ ಆಗಿ ಮಂಜ, ಗಗನ್ ಚಿನ್ನಪ್ಪ ಮತ್ತು ಧನುಷ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದರು. ಸೌಂದರ್ಯ ಶೆಟ್ಟಿ ತಂಡಕ್ಕೆ ತಾಂಡವ್ ರಾಮ್, ಜಗದೀಶ್ ಹಾಗೂ ಯಶಸ್ ಸೇರಿದರೆ, ಆಸಿಯಾ ತಂಡಕ್ಕೆ ಕಿರಣ್ ಶಾಸ್ತ್ರಿ ಮತ್ತು ಪ್ರಶಾಂತ್ ಉಳಿದುಕೊಂಡಿದ್ದರು.

BBK 13: ‘ಕೆಲಸ ಮಾಡೋಕೆ ದೊಡ್ಡ ಜಗಳ ಮಾಡ್ತೀರಿ, ನಮ್‌ ಮನೇಲಿ ನಾನೇ ಪಾತ್ರೆ ತೊಳಿತಿನಿ’; ʻಬಿಗ್‌ ಬಾಸ್‌ʼ ಸ್ಪರ್ಧಿಗಳ ನೀರಿಳಿಸಿದ ‘ಕಿಚ್ಚ’ ಸುದೀಪ್!

ಗಾನವಿ ಪರ ಕೂಗಾಡಿದ್ದ ಮಂಜ

ಅಂಗರಕ್ಷಕರು ತಮ್ಮ ಯುವರಾಣಿಯರ ಮನಸ್ಸನ್ನು ಒಲಿಸಬೇಕು ಎಂಬ ಟಾಸ್ಕ್ ವೇಳೆ ಮನೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿತ್ತು. ಗಾನವಿ ತಂಡದಲ್ಲಿ ಮಂಜ ಹೊರತುಪಡಿಸಿ ಉಳಿದವರು ಟಾಸ್ಕ್ ಮಾಡಲು ನಿರಾಸಕ್ತಿ ತೋರಿದ್ದು ಗಾನವಿಗೆ ಕಿರಿಕಿರಿ ತಂದಿತ್ತು. ಇದೇ ವೇಳೆ ಸೌಂದರ್ಯ ತಂಡದ ಜಗದೀಶ್ ಅಡುಗೆ ಮನೆಗೆ ತೆರಳಿದ್ದನ್ನು ಕಂಡ ಗಾನವಿ, "ನಾಟಕಕ್ಕೆ ಇನ್ನೊಂದು ಹೆಸರೇ ಜಗ್ಗಿ, ಕೈಯಲ್ಲಿ ಆಗದವರು ನೆಲ ಡೊಂಕು ಅಂತಾರೆ" ಎಂದು ವ್ಯಂಗ್ಯವಾಡಿದ್ದರು. ಇದರಿಂದ ಕೆರಳಿದ ಜಗದೀಶ್ ಏಕವಚನದಲ್ಲೇ ಗಾನವಿಯ ಮೇಲೆ ವಾಗ್ದಾಳಿ ನಡೆಸಿದ್ದು, ಸಿಟ್ಟಿಗೆದ್ದ ಗಾನವಿ ಜಗ್ಗಿ ಮೇಲೆ ಕೈ ಮಾಡಲು ಮುಂದಾಗಿದ್ದರು. ಈ ಹಂತದಲ್ಲಿ ಗಾನವಿ ಪರವಾಗಿ ಮಧ್ಯಪ್ರವೇಶಿಸಿದ ಮಂಜ, ಜಗದೀಶ್‌ಗೆ ಬಾಯಿಗೆ ಬಂದಂತೆ ಬೈದು, "ಹೆಣ್ಣಿಗೆ ಗೌರವ ಕೊಡುವುದನ್ನು ಕಲಿ" ಎಂದು ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ಸ್ಪರ್ಧಿಗಳಿಗೆ ಒಳಗೊಳಗೇ ನಗು

ಭಾನುವಾರದ ಎಪಿಸೋಡಿನಲ್ಲಿ ಕಿಚ್ಚ ಸುದೀಪ್ ಅವರು ಕೂಡ ಗಾನವಿ ಅವರನ್ನು ‘ಮಂಜಿ’ ಎಂದು ಕರೆದು ಕಾಲೆಳೆದಿದ್ದರು. ಇಷ್ಟೆಲ್ಲಾ ಆಪ್ತತೆ ಹಾಗೂ ಬೆಂಬಲವಿದ್ದರೂ, ನಾಮಿನೇಷನ್ ಮಾಡುವ ಅಧಿಕಾರ ಪಡೆದ ಗಾನವಿ, ಮಂಜನನ್ನೇ ನಾಮಿನೇಟ್ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಅಸಲಿಗೆ, ಗಾನವಿ ಅವರಿಗೆ ನಾಮಿನೇಟ್ ಮಾಡುವ ಈ ವಿಶೇಷ ಅಧಿಕಾರವನ್ನು ಬಿಟ್ಟುಕೊಟ್ಟಿದ್ದೇ ಸೌಂದರ್ಯ ಶೆಟ್ಟಿ! ಮಂಜನನ್ನು ನಾಮಿನೇಷನ್ ಬಲೆಗೆ ಬೀಳಿಸುವ ಹಿಂದೆ ಸೌಂದರ್ಯ ಶೆಟ್ಟಿಯ ಚಾಣಾಕ್ಷ ‘ಮಾಸ್ಟರ್ ಪ್ಲ್ಯಾನ್’ ಕೆಲಸ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತ ಮಂಜ ನಾಮಿನೇಟ್ ಆಗುತ್ತಿದ್ದಂತೆ, ಈ ಹಿಂದೆ ಮಂಜನ ವರ್ತನೆಯಿಂದ ಬೇಸತ್ತಿದ್ದ ಮನೆಯ ಇತರೆ ಸ್ಪರ್ಧಿಗಳು ಒಳಗೊಳಗೇ ಖುಷಿಪಟ್ಟು ನಕ್ಕಿದ್ದಾರೆ.