ಸುಂಕದ ವಿಚಾರದಲ್ಲಿ ಪ್ರಧಾನಿ ಮೋದಿಗೆ ನನ್ನ ಮೇಲೆ ಅಸಮಾಧಾನವಿದೆ ಎಂದ ಡೊನಾಲ್ಡ್ ಟ್ರಂಪ್
ಅಮೆರಿಕಕ್ಕೆ ಭಾರತ ಹೆಚ್ಚಿನ ಸುಂಕ ಪಾವತಿಸಬೇಕಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ಅಷ್ಟೊಂದು ಸಂತೋಷವಾಗಿಲ್ಲ. ಅವರು ರಷ್ಯಾದ ತೈಲ ಖರೀದಿ ಮಾಡುತ್ತಿರುವುದರಿಂದ ಇಷ್ಟೊಂದು ಸುಂಕ ಪಾವತಿಸುತ್ತಿದ್ದಾರೆ. ಆದರೂ ಪ್ರಧಾನಿ ಮೋದಿ ಮತ್ತು ನನ್ನ ನಡುವಿನ ಸಂಬಂಧ ಉತ್ತಮವಾಗಿಯೇ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
(ಸಂಗ್ರಹ ಚಿತ್ರ) -
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ನನ್ನ ನಡುವಿನ ಸಂಬಂಧ ಉತ್ತಮವಾಗಿಯೇ ಇದೆ. ಭಾರತವು (India) ಅಮೆರಿಕಕ್ಕೆ (Us tariff) ಹೆಚ್ಚಿನ ಸುಂಕ ಪಾವತಿಸಬೇಕಾಗಿರುವುದರಿಂದ ಅವರು ನನ್ನ ಮೇಲೆ ಅಷ್ಟೊಂದು ಸಂತೋಷವಾಗಿಲ್ಲ ಎಂಬುದು ನನಗೆ ಗೊತ್ತಿದೆ. ರಷ್ಯಾದಿಂದ ಅವರು ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿ (Russian oil purchase) ಮಾಡುತ್ತಿರುವುದಕ್ಕೆ ಈ ಸುಂಕ ವಿಧಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮಂಗಳವಾರ ಹೇಳಿದರು. ರಷ್ಯಾದ ತೈಲವನ್ನು ಖರೀದಿಸುತ್ತಿರುವುದಕ್ಕೆ ಭಾರತದ ಮೇಲೆ ವಿಧಿಸಲಾದ ಹೆಚ್ಚಿನ ಸುಂಕಗಳಿಂದ ಪ್ರಧಾನಿ ಮೋದಿ ಅಸಮಾಧಾನಗೊಂಡಿದ್ದಾರೆ ಎಂದು ಈ ಸಂದರ್ಭದಲ್ಲಿ ಟ್ರಂಪ್ ಪುನರುಚ್ಚರಿಸಿದರು.
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಸೌಹಾರ್ದಯುತವಾಗಿದ್ದರೂ ಸುಂಕದ ವಿಷಯವು ಉದ್ವಿಗ್ನತೆಯನ್ನು ಸೃಷ್ಟಿಸಿದೆ ಎಂದು ಅವರು, ಪ್ರಧಾನಿ ಮೋದಿ ಅವರೊಂದಿಗೆ ಇತ್ತೀಚೆಗೆ ಅಮೆರಿಕದ ರಕ್ಷಣಾ ಮಾರಾಟ ಮತ್ತು ಸುಂಕ ಕ್ರಮಗಳ ಕುರಿತು ಚರ್ಚಿಸಿರುವುದಾಗಿ ಹೇಳಿದರು.
ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವುದರಿಂದ ಉಕ್ರೇನ್ ಸಂಘರ್ಷದ ಮಧ್ಯೆ ರಷ್ಯಾ ಆರ್ಥಿಕತೆಗೆ ಬೆಂಬಲ ನೀಡಿದಂತಾಗುತ್ತದೆ. ಹೀಗಾಗಿ ಭಾರತಕ್ಕೆ ಒಟ್ಟು ಶೇ. 50ರಷ್ಟು ಸುಂಕಗಳನ್ನು ವಿಧಿಸಲಾಗಿದೆ. ಭಾರತದ ರಷ್ಯಾದ ತೈಲ ಆಮದುಗಳ ಬಗ್ಗೆ ಅಮೆರಿಕದ ಕಳವಳಗಳನ್ನು ನವದೆಹಲಿ ಪರಿಹರಿಸದಿದ್ದರೆ ವಾಷಿಂಗ್ಟನ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಇದೇ ಸಂದರ್ಭದಲ್ಲಿ ಮತ್ತೆ ಟ್ರಂಪ್ ಎಚ್ಚರಿಸಿದರು.
ಪ್ರಧಾನಿ ಮೋದಿ ತುಂಬಾ ಒಳ್ಳೆಯ ವ್ಯಕ್ತಿ. ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ತಿಳಿದಿದಿಯೇ. ನನ್ನನ್ನು ಸಂತೋಷಪಡಿಸುವುದು ಎಷ್ಟು ಮುಖ್ಯವೆಂದು ಅವರಿಗೆ ಗೊತ್ತಿದೆ ಎಂದ ಟ್ರಂಪ್, ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ಮೂಲಕ ಮಾಸ್ಕೋವನ್ನು ಬಲಪಡಿಸುತ್ತಿದೆ. ಭಾರತೀಯ ಸರಕುಗಳ ಮೇಲೆ ತೀವ್ರವಾಗಿ ಹೆಚ್ಚಿನ ಸುಂಕ ವಿಧಿಸಲು ಇದು ಮುಖ್ಯ ಕಾರಣವಾಗಿದೆ ಎಂದು ಅವರು ತಿಳಿಸಿದರು.
ವೆನೆಜುವೆಲಾದ ಅಧ್ಯಕ್ಷರ ಭವನದ ಬಳಿ ಮತ್ತೆ ಗುಂಡಿನ ದಾಳಿ ಮಾಡಿದ್ದು ಯಾರು ? ತಾನಲ್ಲ ಎಂದ ಅಮೆರಿಕ
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದೆ ಎಂದು ಹೇಳಿದ್ದು, ಆದರೆ ಇದನ್ನು ತಿರಸ್ಕರಿಸಿರುವ ಭಾರತ, ಅಂತಹ ಯಾವುದೇ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿ ಭಾರತಕ್ಕೆ ಸುಂಕ ಕಡಿತಗೊಳಿಸಲು ಅಮೆರಿಕದ ಭಾರತೀಯ ರಾಯಭಾರಿ ವಿನಯ್ ಕ್ವಾಟ್ರಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದ್ದಾರೆ ಎಂದು ಕಳೆದ ಭಾನುವಾರ ಏರ್ ಫೋರ್ಸ್ ಒನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ ಟ್ರಂಪ್ ಜೊತೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ತಿಳಿಸಿದ್ದರು.
ಅಮೆರಿಕದ ಭಾರತೀಯ ರಾಯಭಾರಿ ವಿನಯ್ ಕ್ವಾಟ್ರಾ ಅವರು ಕಳೆದ ಡಿಸೆಂಬರ್ ನಲ್ಲಿ ವಾಷಿಂಗ್ಟನ್‌ನಲ್ಲಿರುವ ರಾಯಭಾರಿಯ ಅಧಿಕೃತ ನಿವಾಸವಾದ ಇಂಡಿಯಾ ಹೌಸ್‌ನಲ್ಲಿ ತಮ್ಮನ್ನು ಭೇಟಿಯಾಗಿ ಅವರು ಈ ವಿನಂತಿಯನ್ನು ಸಲ್ಲಿಸಿದ್ದರು ಎಂದು ಹೇಳಿದ್ದರು.