Russian Oil Import controversy: ರಷ್ಯಾದಿಂದ ತೈಲ ಖರೀದಿ ಮುಂದುವರಿಯುತ್ತದೆ- ಅಮೆರಿಕಕ್ಕೆ ಠಕ್ಕರ್ ಕೊಟ್ಟ ಭಾರತ
ಅಮೆರಿಕಕ್ಕೆ ಭಾರತ ರಫ್ತು ಮಾಡುವ ಎಲ್ಲ ಸರಕುಗಳ ಮೇಲೆ ಶೇ. 25 ರಷ್ಟು ಹೊಸ ಸುಂಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ವಿಧಿಸಿದ್ದಾರೆ. ಇದರೊಂದಿಗೆ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಭಾರತ ಮುಂದುವರಿಸಿದರೆ ಹೊಸ ಸುಂಕದೊಂದಿಗೆ ಭಾರತವು ಮತ್ತಷ್ಟು ದಂಡವನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೂ ಭಾರತೀಯ ಕಂಪೆನಿಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.


ನವದೆಹಲಿ: ರಷ್ಯಾದಿಂದ ತೈಲ ಖರೀದಿ (Russian Oil Imports) ಮಾಡದಂತೆ ಸುಂಕ (Tariff), ದಂಡದ (Penalty) ಬೆದರಿಕೆಯನ್ನು (Threats) ಭಾರತಕ್ಕೆ ಅಮೆರಿಕ (America) ಒಡ್ಡಿದ್ದರೂ ಭಾರತ ಇದಕ್ಕೆ ತಲೆಬಾಗಿಸಿಲ್ಲ. ನಾವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಭಾರತ ಮುಂದುವರಿಸಿದರೆ ಭಾರತ ಮತ್ತಷ್ಟು ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಶನಿವಾರ ಎಚ್ಚರಿಕೆ ನೀಡಿದ್ದರು. ಆದರೂ ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸುವುದಾಗಿ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವದೆಹಲಿಯ ಮೇಲೆ ಹೆಚ್ಚಿನ ಸುಂಕ ಮತ್ತು ದಂಡವನ್ನು ವಿಧಿಸಲು ನಿರ್ಧರಿಸಿದ್ದರೂ ಕೂಡ ಭಾರತೀಯ ಕಂಪೆನಿಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇತ್ತೀಚೆಗೆಷ್ಟೇ ಅಮೆರಿಕಕ್ಕೆ ಭಾರತ ರಫ್ತು ಮಾಡುವ ಎಲ್ಲ ಸರಕುಗಳ ಮೇಲೆ ಹೊಸ ಶೇ. 25ರಷ್ಟು ಸುಂಕವನ್ನು ಟ್ರಂಪ್ ಘೋಷಿಸಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮವಾದ ಟ್ರುತ್‌ನಲ್ಲಿ ಹೇಳಿರುವ ಟ್ರಂಪ್ , ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಮುಂದುವರಿಸಿದರೆ ಈಗಾಗಲೇ ವಿಧಿಸಿರುವ ಹೊಸ ಸುಂಕದೊಂದಿಗೆ ಭಾರತವು ಮತ್ತಷ್ಟು ದಂಡವನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ರಷ್ಯಾದಿಂದ ತೈಲ ಖರೀದಿಯನ್ನು ಏಕಾಏಕಿ ನಿಲ್ಲಿಸುವುದು ಸಾಧ್ಯವಿಲ್ಲ. ಯಾಕೆಂದರೆ ಇವು ದೀರ್ಘಾವಧಿಯ ಒಪ್ಪಂದಗಳಾಗಿರುತ್ತವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತವು ರಷ್ಯಾದಿಂದ ನಿರಂತರ ತೈಲ ಆಮದು ಮಾಡಿಕೊಳ್ಳುವುದನ್ನು ಸಮರ್ಥಿಸಿರುವ ಭಾರತ, ರಷ್ಯಾದ ಇಂಧನ ವಲಯದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳ ಹೊರತಾಗಿಯೂ ತುಲನಾತ್ಮಕವಾಗಿ ಸ್ಥಿರವಾಗಿರುವ ತೈಲ ಬೆಲೆಗಳಲ್ಲಿ ಜಾಗತಿಕ ಏರಿಕೆಯನ್ನು ತಡೆಯುವಲ್ಲಿ ಈ ಖರೀದಿ ಪ್ರಮುಖ ಪಾತ್ರವಹಿಸಿದೆ. ಭಾರತವು ರಷ್ಯಾದ ತೈಲವನ್ನು ಯುರೋಪಿಯನ್ ಒಕ್ಕೂಟವು ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದೆ. ಭಾರತೀಯ ತೈಲ ಸಂಸ್ಕರಣಾಗಾರರು ರಷ್ಯಾದಿಂದ ತಮ್ಮ ಆಮದುಗಳನ್ನು ಕಾಯ್ದಿರಿಸಿಕೊಳ್ಳುತ್ತಾರೆ. ಇದು ದೇಶದ ಆರ್ಥಿಕ ಹಿತಾಸಕ್ತಿಯನ್ನು ಆಧರಿಸಿದೆ ಎಂದು ಹೇಳಿದೆ.
ಇದನ್ನೂ ಓದಿ: Prajwal Revanna: ಪ್ರಜ್ವಲ್ ರೇವಣ್ಣ ಪ್ರಕರಣ; ತನಿಖೆ ನಡೆಸಿದ SIT ಟೀಂಗೆ ಮುಖ್ಯಮಂತ್ರಿ ಪದಕ ಘೋಷಣೆ
ರಷ್ಯಾದಿಂದ ತೈಲ ಆಮದುಗಳನ್ನು ನಿಲ್ಲಿಸಲು ಅಥವಾ ಪರ್ಯಾಯ ಪೂರೈಕೆದಾರರನ್ನು ಹುಡುಕಲು ಭಾರತ ಸರ್ಕಾರ ದೇಶೀಯ ಸಂಸ್ಕರಣಾಗಾರಗಳಿಗೆ ಯಾವುದೇ ನಿರ್ದೇಶನವನ್ನು ನೀಡಿಲ್ಲ ಎಂದು ರಷ್ಯಾದ ಮಾಧ್ಯಮಗಳು ಹೇಳಿವೆ.