ದುರ್ಗಾ ಪೂಜೆಯ ಸಮಯದಲ್ಲೇ ಕಾಲೇಜಿನ ದೇವಸ್ಥಾನದ ಬಳಿ ಗೋಮಾಂಸ ಬೇಯಿಸಿದ ವಿದ್ಯಾರ್ಥಿಗಳು: ಭುಗಿಲೆದ್ದ ವಿವಾದ
Students Cook Beef: ಬಾಂಗ್ಲಾದೇಶದ ಢಾಕಾದಲ್ಲಿರುವ ಜಗನ್ನಾಥ ವಿಶ್ವವಿದ್ಯಾಲಯದ ದೇವಸ್ಥಾನದ ಸಮೀಪ ಗೋಮಾಂಸದ ಖಿಚಡಿ ಕಾರ್ಯಕ್ರಮ ಆಯೋಜಿಸಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಇಸ್ಲಾಮಿಕ್ ಇತಿಹಾಸ ವಿಭಾಗದ ವಿದ್ಯಾರ್ಥಿಗಳ ಗುಂಪೊಂದು ಅಕ್ಟೋಬರ್ 16ರ ಶುಕ್ರವಾರ, ದುರ್ಗಾ ಪೂಜೆಯ ದಿನದಂದೇ ವಿಶ್ವವಿದ್ಯಾಲಯದ ಆವರಣದಲ್ಲಿ ಗೋವುಗಳನ್ನು ಬಲಿ ನೀಡಲು ಯೋಜಿಸಿರುವುದಾಗಿ ಘೋಷಿಸಿತು.
ಸಾಂದರ್ಭಿಕ ಚಿತ್ರ -
ಢಾಕಾ, ಅ.16: ಬಾಂಗ್ಲಾದೇಶದ (Bangladesh) ಢಾಕಾದಲ್ಲಿರುವ ಜಗನ್ನಾಥ ವಿಶ್ವವಿದ್ಯಾಲಯದ ದೇವಸ್ಥಾನದ ಸಮೀಪ ಗೋಮಾಂಸದ ಖಿಚಡಿ (Students Cook Beef) ಕಾರ್ಯಕ್ರಮ ಆಯೋಜಿಸಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳು, ಕ್ಯಾಂಪಸ್ನ ನಿಯಮಗಳು ಹಾಗೂ ವಿದ್ಯಾರ್ಥಿಗಳ ಸ್ವಾತಂತ್ರ್ಯದ ವಿಚಾರವಾಗಿ ಈ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇಸ್ಲಾಮಿಕ್ ಇತಿಹಾಸ ವಿಭಾಗದ ವಿದ್ಯಾರ್ಥಿಗಳ ಗುಂಪೊಂದು ಅಕ್ಟೋಬರ್ 16ರ ಶುಕ್ರವಾರ, ದುರ್ಗಾ ಪೂಜೆಯ ದಿನದಂದೇ ವಿಶ್ವವಿದ್ಯಾಲಯದ ಆವರಣದಲ್ಲಿ ಗೋವುಗಳನ್ನು ಬಲಿ ನೀಡಲು ಯೋಜಿಸಿರುವುದಾಗಿ ಘೋಷಿಸಿತು.
ಇದಕ್ಕೂ ಮೊದಲು, ವಿಶ್ವವಿದ್ಯಾಲಯದ ಅಧಿಕಾರಿಗಳು ಆವರಣದಲ್ಲಿ ಪ್ರಾಣಿಗಳನ್ನು ಬಲಿ ನೀಡದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿ ನೋಟಿಸ್ ಹೊರಡಿಸಿದ್ದರು. ಆದರೆ, ಬಳಿಕ ಆ ನೋಟಿಸ್ ಅನ್ನು ಹಿಂಪಡೆಯಲಾಯಿತು. ಈ ವಿವಾದ ಅಕ್ಟೋಬರ್ 12ರ ಸೋಮವಾರ ಆರಂಭವಾಯಿತು. 2021-22ರ ಶೈಕ್ಷಣಿಕ ಸಾಲಿನ ಇಸ್ಲಾಮಿಕ್ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದ 17ನೇ ಬ್ಯಾಚ್ನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಕ್ತಮಂಚ (ತೆರೆದ ವೇದಿಕೆ) ಬಳಿ ಗೋಮಾಂಸದ ಖಿಚಡಿ ತಯಾರಿಸುವ ಕಾರ್ಯಕ್ರಮ ಆಯೋಜಿಸಿದ್ದರು. ಈ ಸ್ಥಳವು ವಿಶ್ವವಿದ್ಯಾಲಯದ ಕೇಂದ್ರ ದೇವಸ್ಥಾನದ ಸಮೀಪದಲ್ಲಿದೆ.
ಇದಾದ ಬಳಿಕ, ಕಾರ್ಯಕ್ರಮ ಆಯೋಜಿಸಿದ ಸ್ಥಳದ ಬಗ್ಗೆ ಹಿಂದೂ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು. ಈ ಸ್ಥಳವು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಅವರು ಹೇಳಿದರು. ಗೋಮಾಂಸ ಬೇಯಿಸುತ್ತಿರುವುದನ್ನು ಗಮನಿಸಿದ ಬಳಿಕ ವಿದ್ಯಾರ್ಥಿಗಳು ಖಿಚಡಿ ಕಾರ್ಯಕ್ರಮದ ಆಯೋಜಕರನ್ನು ಸಂಪರ್ಕಿಸಿದರು ಎಂದು ತಿಳಿಸಿದ್ದಾರೆ. ದೇವಸ್ಥಾನದ ಸಮೀಪದಲ್ಲೇ ಈ ಕಾರ್ಯಕ್ರಮ ನಡೆಯುತ್ತಿದ್ದುದರಿಂದ ತಮಗೆ ನೋವುಂಟಾಗಿತ್ತು. ಹೀಗಾಗಿ, ಬೇರೆ ಸ್ಥಳಕ್ಕೆ ಕಾರ್ಯಕ್ರಮವನ್ನು ಸ್ಥಳಾಂತರಿಸುವಂತೆ ಆಯೋಜಕರನ್ನು ಕೋರಿದ್ದಾಗಿ ಜಗನ್ನಾಥ ವಿಶ್ವವಿದ್ಯಾಲಯದ ಕೇಂದ್ರ ದೇವಸ್ಥಾನ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಜಾಯ್ ಸಾಹಾ ಹೇಳಿದ್ದಾರೆ.
ಇದಾದ ಬಳಿಕ ಎರಡೂ ಕಡೆಯವರ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಮಧ್ಯಪ್ರವೇಶಿಸಿದ ಪ್ರೊಫೆಸರ್ ಎಂ.ಡಿ. ಅಜಂ ಖಾನ್, ಪರಿಸ್ಥಿತಿಯನ್ನು ತಿಳಿಗೊಳಿಸಲು ಸಹಾಯಕ ಪ್ರೊಫೆಸರ್ ಅವರನ್ನು ಸ್ಥಳಕ್ಕೆ ಕಳುಹಿಸಿದರು. ನಂತರ ಖಿಚಡಿ ಕಾರ್ಯಕ್ರಮದ ಆಯೋಜಕರು ದೇವಸ್ಥಾನದಿಂದ ಮತ್ತಷ್ಟು ದೂರದ ಸ್ಥಳಕ್ಕೆ ತೆರಳಿದರು. ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡುವ ಉದ್ದೇಶ ತಮಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ, ವಿವಾದ ಅಲ್ಲಿಗೆ ಮುಗಿಯಲಿಲ್ಲ. ಗೋಮಾಂಸದ ಖಿಚಡಿ ತಯಾರಿಸಲು ತಾತ್ಕಾಲಿಕ ಒಲೆ ನಿರ್ಮಿಸುವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸೇರಿದ ಇಟ್ಟಿಗೆಗಳನ್ನು ಕಾರ್ಯಕ್ರಮದ ಆಯೋಜಕರು ಬಳಸಿದ್ದಾರೆ ಎಂಬ ಆರೋಪಗಳು ಶೀಘ್ರದಲ್ಲೇ ಕೇಳಿಬಂದವು.
ಲಂಡನ್-ಬಾಂಗ್ಲಾದೇಶ ಫ್ಲೈಟ್ನಲ್ಲಿ ಪ್ರಯಾಣಿಕರಿಬ್ಬರ ಭೀಕರ ಗಲಾಟೆ: ವಿಡಿಯೊ ವೈರಲ್
ಖಿಚಡಿ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳು ಆರಂಭದಲ್ಲಿ ವಿಶ್ವವಿದ್ಯಾಲಯದ ಕ್ಯಾಂಟೀನ್ನಲ್ಲೇ ಖಿಚಡಿ ತಯಾರಿಸಲು ಯೋಜಿಸಿದ್ದರು. ಆದರೆ, ಅಡುಗೆ ಅನಿಲದ ಒತ್ತಡ ಕಡಿಮೆಯಿದ್ದ ಕಾರಣ ಆ ಯೋಜನೆ ಕೈಬಿಡಬೇಕಾಯಿತು. ಹೀಗಾಗಿ, ಕಾರ್ಯಕ್ರಮದ ಆಯೋಜಕರು ಹೊರಾಂಗಣದಲ್ಲಿ ಖಿಚಡಿ ತಯಾರಿಸಲು ನಿರ್ಧರಿಸಿದರು.
ತಾತ್ಕಾಲಿಕ ಒಲೆ ನಿರ್ಮಿಸುವ ಸಂದರ್ಭದಲ್ಲಿ ಸಮೀಪದಲ್ಲಿ ಸಿಕ್ಕ ಇಟ್ಟಿಗೆಗಳನ್ನು ಬಳಸಿದ್ದಾಗಿ ಆಯೋಜಕರು ತಿಳಿಸಿದ್ದಾರೆ. ಆದರೆ, ಆ ಇಟ್ಟಿಗೆಗಳು ವಿಶ್ವವಿದ್ಯಾಲಯದ ಆವರಣದಲ್ಲಿರುವ ದೇವಸ್ಥಾನಕ್ಕೆ ಸೇರಿದ್ದವು ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಆಯೋಜಕರು ಬಳಿಕ ಆ ಇಟ್ಟಿಗೆಗಳನ್ನು ತೆಗೆದುಹಾಕಿ, ಕ್ಯಾಂಟೀನ್ನಿಂದ ಕಬ್ಬಿಣದ ಒಲೆಯನ್ನು ತಂದು ಅಡುಗೆಗೆ ಬಳಸಿದರು. ಈ ತಪ್ಪು ತಿಳಿವಳಿಕೆಗೆ ಕ್ಷಮೆಯಾಚಿಸಿದರು ಎಂದು ದಿ ಡೈಲಿ ಸ್ಟಾರ್ ವರದಿ ಮಾಡಿದೆ. ಆದರೆ, ತಮ್ಮ ಪ್ರಮುಖ ಆಕ್ಷೇಪ ಇಟ್ಟಿಗೆಗಳ ಬಳಕೆಯ ಬಗ್ಗೆ ಅಲ್ಲ, ಬದಲಾಗಿ ದೇವಸ್ಥಾನದ ಸಮೀಪದಲ್ಲೇ ಅಡುಗೆ ವ್ಯವಸ್ಥೆ ಮಾಡಿದ್ದರ ಬಗ್ಗೆ ಎಂದು ಜಾಯ್ ಸಾಹಾ ಹೇಳಿದ್ದಾರೆ.