Sunita Williams : ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡ್ತಾರಾ ಸುನಿತಾ ವಿಲಿಯಮ್ಸ್? ಕುಟುಂಬಸ್ಥರು ಹೇಳಿದ್ದೇನು?
8 ದಿನದ ಅಧ್ಯಯನಕ್ಕೆ ಎಂದು ತೆರಳಿದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದರು. ಇದೀಗ ಅವರು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಭಾರತೀಯ ಮೂಲದ ಸುನಿತಾ ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಸುನಿತಾ ವಿಲಿಯಮ್ಸ್

ವಾಷಿಂಗ್ಟನ್: 8 ದಿನದ ಅಧ್ಯಯನಕ್ಕೆ ಎಂದು ತೆರಳಿದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ( Sunita Williams) ಹಾಗೂ ಬುಚ್ ವಿಲ್ಮೋರ್ ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದರು. ಇದೀಗ ಅವರು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಅವರ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಮಾರ್ಚ್ 19ರಂದು ಬೆಳಗಿನ ಜಾವ 3:27ಕ್ಕೆ ಫ್ಲೋರಿಡಾದ ಸಮೀಪ ಮೆಕ್ಸಿಕೋ ಕೊಲ್ಲಿಯಲ್ಲಿ ಯಶಸ್ವಿಯಾಗಿ ಕೆಳಗೆ ಇಳಿದಿದೆ. ಭಾರತೀಯ ಮೂಲದ ಸುನಿತಾ ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸುನಿತಾ ವಿಲಿಯಮ್ಸ್ ಅತ್ತಿಗೆ ಫಲ್ಗುಣಿ ಪಾಂಡ್ಯಾ ಗಗನಯಾತ್ರಿಗಳು ಮರಳಿ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. ಸುನಿತಾ ಅವರ ಭಾರತ ಭೇಟಿಯ ಕುರಿತು ಮಾತನಾಡಿದ ಅವರು, ಸುನಿತಾ ವಿಲಿಯಮ್ಸ್ ಶೀಘ್ರದಲ್ಲಿಯೇ ಭಾರತಕ್ಕೆ ತೆರಳುತ್ತಾರೆ ಎಂದು ಹೇಳಿದ್ದಾರೆ. ನಮಗೆ ನಿಖರವಾದ ದಿನಾಂಕ ತಿಳಿದಿಲ್ಲ. ಆದರೆ ಅವರು ಖಂಡಿತವಾಗಿಯೂ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ. ಈ ವರ್ಷವೇ ಅವರು ಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಫಲ್ಗುಣಿ ಪಾಂಡ್ಯಾ ತಿಳಿಸಿದ್ದಾರೆ.
286 ದಿನಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಮರಳಿದ ಸುನಿತಾ ಬಗ್ಗೆ ಮಾತನಾಡುತ್ತಾ, ನಾವು ಒಟ್ಟಿಗೆ ರಜೆಯ ಮೇಲೆ ಹೋಗಲು ಸಹ ಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಸುನಿತಾ ಅವರ ತಂದೆ ದೀಪಕ್ ಪಾಂಡ್ಯಾ ಅವರು ಮೂಲತಃ ಗುಜರಾತಿನವರು. ಭಾರತದ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಮೂಲವನ್ನು ಇಂದಿಗೂ ಅವರು ಬೆಳೆಸಿಕೊಂಡು ಬಂದಿದ್ದಾರೆ. ಅವರು ದೇಶದೊಂದಿಗೆ ತುಂಬಾ ಸಂಪರ್ಕ ಹೊಂದಿದ್ದಾರೆ ಎಂದು ಫಲ್ಗುಣಿ ಪಾಂಡ್ಯಾ ತಿಳಿಸಿದ್ದಾರೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ವಿಲಿಯಮ್ಸ್ ಅವರ ದೀರ್ಘಾವಧಿಯ ವಾಸ್ತವ್ಯದ ಬಗ್ಗೆ ಮಾತನಾಡಿದ ಪಾಂಡ್ಯ, ಸುನಿತಾ ಅವರು ಪ್ರತಿಯೊಂದು ಅವಕಾಶವನ್ನೂ ಉತ್ತಮವಾಗಿ ಬಳಸಿಕೊಳ್ಳುತ್ತಾರೆ. ಅವರು ನಮಗೆಲ್ಲ ಮಾದರಿ ಎಂದು ಹೇಳಿದ್ದಾರೆ. ಇತ್ತೀಚೆಗೆ ತಾನು ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದೆ, ಆಗ ಸುನಿತಾ ಅವರು ಮಹಾಕುಂಭ ಮೇಳದ ಫೋಟೋ ಕಳಿಸಲು ಕೇಳಿದ್ದರು. ನಂತರ ತಾನು ಭೂಮಿಗೆ ಹಿಂದಿರುಗಿದ ಬಳಿಕ ಮಹಾಕುಂಭ ಮೇಳದ ಬಗ್ಗೆ ಹೇಳುವಂತೆ ಹೇಳಿದ್ದರು ಎಂದು ಫಲ್ಗುಣಿ ಪಾಂಡ್ಯಾ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Sunita Williams: ಊದಿಕೊಂಡ ಕಣ್ಣು, ಮಗುವಿನಂತಾದ ಚರ್ಮ! ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್ ಆರೋಗ್ಯ ಹೇಗಿದೆ?
ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಿ ಬರುತ್ತಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಬಗ್ಗೆ ಪತ್ರವೊಂದನ್ನು ಬರೆದಿದ್ದರು. ನೀವು ಸಾವಿರಾರು ಮೈಲಿ ದೂರದಲ್ಲಿದ್ದರೂ, ನೀವು ನಮ್ಮ ಹೃದಯಕ್ಕೆ ಸಮೀಪದಲ್ಲಿ ನಿರಂತರವಾಗಿ ವಾಸಿಸುತ್ತಿದ್ದೀರಿ. ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಕಾರ್ಯದಲ್ಲಿ ಯಶಸ್ಸಿಗಾಗಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.