ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರ್ಮುಜ್ ಜಲಸಂಧಿ ಮತ್ತೆ ತೆರೆಯುವ ಬಗ್ಗೆ ಮಾತುಕತೆ; ಇಂಗ್ಲೆಂಡ್‌-ಫ್ರಾನ್ಸ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ದೇಶಗಳಿಂದ ಸಭೆ

Strait of Hormuz: ಹೊರ್ಮುಜ್ ಜಲಸಂಧಿಯಲ್ಲಿ ನೌಕಾಯಾನವನ್ನು ಸುರಕ್ಷಿತವಾಗಿಸಲು ಬ್ರಿಟನ್ ಮತ್ತು ಫ್ರಾನ್ಸ್ ನೇತೃತ್ವದ ಅಂತಾರಾಷ್ಟ್ರೀಯ ಮಿಷನ್‌ಗೆ ಸೇರುವ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಕಳೆದ ವಾರವೇ ಹನ್ನೆರಡಕ್ಕೂ ಹೆಚ್ಚು ದೇಶಗಳು ತಿಳಿಸಿವೆ. ವಾಷಿಂಗ್ಟನ್‌ಗೆ ಸಂದೇಶ ಕಳುಹಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ ಎನ್ನಲಾಗಿದೆ.

ಹೊರ್ಮುಜ್ ಜಲಸಂಧಿ ಮತ್ತೆ ತೆರೆಯುವ ಬಗ್ಗೆ ಮಾತುಕತೆ

ಸಾಂದರ್ಭಿಕ ಚಿತ್ರ -

Priyanka P
Priyanka P Apr 22, 2026 3:39 PM

ಲಂಡನ್, ಏ. 22: 30ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಬುಧವಾರದಿಂದ (ಏಪ್ರಿಲ್‌ 22) ಲಂಡನ್‌ನಲ್ಲಿ ಎರಡು ದಿನಗಳ ಸಭೆ ನಡೆಸಲಿದ್ದು, ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಕಾರ್ಯಾಚರಣೆಯನ್ನು ಮುಂದುವರಿಸಲು ಮತ್ತು ವಿವರವಾದ ಯೋಜನೆಗಳನ್ನು ರೂಪಿಸಲು ಮಾತುಕತೆ ನಡೆಯಲಿದೆ ಎಂದು ಬ್ರಿಟಿಷ್ ಸರ್ಕಾರ ತಿಳಿಸಿದೆ. ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ನೌಕಾಯಾನವನ್ನು ಸುಗಮಗೊಳಿಸಲು ಬ್ರಿಟನ್ ಮತ್ತು ಫ್ರಾನ್ಸ್ ನೇತೃತ್ವದ ಅಂತಾರಾಷ್ಟ್ರೀಯ ಮಿಷನ್‌ಗೆ ಸೇರುವ ಉದ್ದೇಶ ಹೊಂದಿರುವುದಾಗಿ ಕಳೆದ ವಾರ ಹನ್ನೆರಡಕ್ಕೂ ಹೆಚ್ಚು ದೇಶಗಳು ತಿಳಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮಗೆ ಮಿತ್ರರಾಷ್ಟ್ರಗಳ ಸಹಾಯದ ಅಗತ್ಯವಿಲ್ಲ ಎಂದು ಹೇಳಿದ ನಂತರ, ಯುರೋಪ್, ಏಷ್ಯಾ ಮತ್ತು ಮಧ್ಯಪ್ರಾಚ್ಯದ ಸುಮಾರು 50 ದೇಶಗಳು ವಾಷಿಂಗ್ಟನ್‌ಗೆ ಸಂದೇಶ ಕಳುಹಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ.

ಕಳೆದ ವಾರ ನಡೆದ ಮಾತುಕತೆಯಲ್ಲಿ ಕಂಡುಬಂದ ಪ್ರಗತಿಯ ಆಧಾರದ ಮೇಲೆ ಬುಧವಾರ ಸಭೆ ನಡೆಯಲಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ʼʼಮುಂದಿನ ಎರಡು ದಿನಗಳಲ್ಲಿ ನಿಜವಾದ ಪ್ರಗತಿ ಸಾಧಿಸಬಹುದು ಎಂದು ನನಗೆ ವಿಶ್ವಾಸವಿದೆʼʼ ಎಂದು ಇಂಗ್ಲೆಂಡ್‌ ರಕ್ಷಣಾ ಸಚಿವ ಜಾನ್ ಹೀಲಿ ಹೇಳಿದ್ದಾರೆ.

ಹೊರ್ಮುಜ್‌ನಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ಪಡೆಗಳಿಂದ ದಾಳಿ: ಆತಂಕದ ನಡುವೆಯೂ ಜಲಸಂಧಿ ದಾಟಿದ 'ದೇಶ್ ಗರಿಮಾ' ನೌಕೆ

ಹೊರ್ಮುಜ್‌ ದಿಗ್ಬಂಧನ ಮುಂದುವರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ನೊಂದಿಗೆ ಜಾರಿಯಲ್ಲಿರುವ ತಾತ್ಕಾಲಿಕ ಯುದ್ಧ ವಿರಾಮವನ್ನು ವಿಸ್ತರಿಸಿದ್ದಾರೆ. ಇರಾನ್ ನೀಡಿದ್ದ ಗಡುವು ಯಾವುದೇ ದಾಳಿಗಳಿಲ್ಲದೆ ಮುಗಿದ ಬಳಿಕ, ಶಾಂತಿ ಮಾತುಕತೆಗಳಿಗೆ ಇನ್ನಷ್ಟು ಸಮಯ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೊದಲಿಗೆ ಎರಡು ವಾರಗಳ ಕಾಲ ಇರಬೇಕಿದ್ದ ಈ ಯುದ್ಧ ವಿರಾಮದ ಅವಧಿಯನ್ನು ಟ್ರಂಪ್ ಅನಿರ್ದಿಷ್ಟವಾಗಿ ಮುಂದೂಡಿದರು. ಆದರೆ ಇರಾನ್‌ನ ಬಂದರುಗಳ ಮೇಲೆ ಹಾಗೂ ಹೊರ್ಮುಜ್‌ ಜಲಸಂಧಿಯಲ್ಲಿ ಅಮೆರಿಕ ಹೇರಿದ ನಿರ್ಬಂಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಆ ಹಿಂದೆ ಟ್ರಂಪ್ ಕದನ ವಿರಾಮ ವಿಸ್ತರಿಸುವುದಿಲ್ಲ ಎಂದು ಹೇಳಿ, ಅದು ಮುಗಿದ ತಕ್ಷಣ ಬಾಂಬ್ ದಾಳಿ ಪುನರಾರಂಭವಾಗಬಹುದು ಎಂದು ಎಚ್ಚರಿಸಿದ್ದರು. ಆದರೀಗ ಕದನವಿರಾಮವನ್ನು ವಿಸ್ತರಿಸಿದ್ದಾರೆ. ಇದೇ ವೇಳೆ, ಅಮೆರಿಕ ಸೇನೆಗೆ ಇರಾನ್ ವಿರುದ್ಧದ ನಿರ್ಬಂಧ ಕ್ರಮಗಳನ್ನು ಮುಂದುವರಿಸಲು ಮತ್ತು ಅಗತ್ಯವಿದ್ದರೆ ಯಾವುದೇ ಕ್ಷಣದಲ್ಲಿ ಸಿದ್ಧರಾಗಿರಲು ಸೂಚನೆ ನೀಡಲಾಗಿದೆ.

ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಕದನವಿರಾಮ ವಿಸ್ತರಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಧನ್ಯವಾದ ಹೇಳಿದ್ದಾರೆ. ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್ರಸ್‌ ಕೂಡ ಈ ಕ್ರಮವನ್ನು ಸ್ವಾಗತಿಸಿದರು.