ಥಾಯ್ಲೆಂಡ್ ಜತೆಗಿನ ಭಾರತದ ಸಂಬಂಧ ಶತಮಾನಕ್ಕೂ ಹಿಂದಿನದ್ದು; 2,000 ವರ್ಷ ಹಳೆಯ ಚಿನ್ನದ ಉಂಗುರ, ಬ್ರಾಹ್ಮಿ ಲಿಪಿ ಕೆತ್ತನೆ ಪತ್ತೆ
ಪಶ್ಚಿಮ ಥಾಯ್ಲೆಂಡ್‌ನ ಡಾನ್ ಯೈ ಥಾಂಗ್ ಪುರಾತತ್ವ ತಾಣದಲ್ಲಿ ಸುಮಾರು 2,000 ವರ್ಷಗಳಷ್ಟು ಹಳೆಯದಾದ ಎರಡು ಚಿನ್ನದ ಉಂಗುರಗಳು ಪತ್ತೆಯಾಗಿವೆ. ಅವುಗಳಲ್ಲಿ ಒಂದರ ಮೇಲೆ ಪ್ರಾಚೀನ ಭಾರತೀಯ ಬ್ರಾಹ್ಮಿ ಲಿಪಿ ಕೆತ್ತಲಾಗಿದ್ದು, ಇದು ಭಾರತ ಮತ್ತು ಆಗ್ನೇಯ ಏಷ್ಯಾದ ನಡುವಿನ ಪ್ರಾಚೀನ ವ್ಯಾಪಾರ ಹಾಗೂ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಸಾಕ್ಷಿ ಎಂದು ತಜ್ಞರು ತಿಳಿಸಿದ್ದಾರೆ.
ಥಾಯ್ಲೆಂಡ್‌ನಲ್ಲಿ ಪತ್ತೆಯಾದ ಪುರಾತನ ಚಿನ್ನದ ಉಂಗುರ -
ಬ್ಯಾಂಕಾಕ್, ಜು. 6: ಸುಮಾರು 2,000 ವರ್ಷಗಳಷ್ಟು ಹಳೆಯದಾದ ಎರಡು ಚಿನ್ನದ ಉಂಗುರಗಳು ಪಶ್ಚಿಮ ಥಾಯ್ಲೆಂಡ್‌ನ (Western Thailand) ಪೆಚ್‌ಬುರಿ ಪ್ರಾಂತ್ಯದ ಡಾನ್ ಯೈ ಥಾಂಗ್ ಪುರಾತತ್ವ ತಾಣದಲ್ಲಿ (Don Yai Thong Archaeological Site) ಪತ್ತೆಯಾಗಿದ್ದು, ಅವುಗಳಲ್ಲಿ ಒಂದರ ಮೇಲೆ ಪ್ರಾಚೀನ ಭಾರತೀಯ ಬ್ರಾಹ್ಮಿ ಲಿಪಿ ಕೆತ್ತಿರುವುದು ಇತಿಹಾಸಕಾರರ ಗಮನ ಸೆಳೆದಿದೆ. ಭಾರತೀಯ ಇತಿಹಾಸದೊಂದಿಗೆ ಸಂಬಂಧ ಹೊಂದಿರುವ ಮಹತ್ವದ ಸುಳಿವನ್ನು ಇದು ನೀಡಿದೆ.
ಪತ್ತೆಯಾದ ಉಂಗುರಗಳಲ್ಲಿ ಒಂದರ ಮೇಲೆ ಪ್ರಾಚೀನ ಭಾರತೀಯ ಬ್ರಾಹ್ಮಿ ಲಿಪಿ ಕೆತ್ತಲಾಗಿದ್ದು, ತಜ್ಞರು ಅದನ್ನು ಪುಸರಖಿತಸ (Pusarakhitasa) ಎಂದು ಪ್ರಾಥಮಿಕವಾಗಿ ಓದಿದ್ದಾರೆ. ಇದರ ಅರ್ಥ ʼಪುಷ್ಯ ನಕ್ಷತ್ರದ ರಕ್ಷಣೆಯಲ್ಲಿರುವವನುʼ.
ಭಾರತೀಯ ಜ್ಯೋತಿಷ್ಯದಲ್ಲಿ ಪುಷ್ಯ ನಕ್ಷತ್ರವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಮತ್ತೊಂದು ಉಂಗುರವು ಯಾವುದೇ ವಿನ್ಯಾಸವಿಲ್ಲದ ಸರಳವಾಗಿ ಕಂಡು ಬಂದಿದೆ. ಈ ಉಂಗುರಗಳ ಮಾಲೀಕರು ಭಾರತೀಯ ಪ್ರಾಚೀನ ವರ್ಣ ವ್ಯವಸ್ಥೆಯ ವೈಶ್ಯ ಸಮುದಾಯದ ವ್ಯಾಪಾರಿಯಾಗಿರಬಹುದು ಎಂದು ಥಾಯ್ಲೆಂಡ್‌ನ ಫೈನ್ ಆರ್ಟ್ಸ್ ಇಲಾಖೆ ಅಭಿಪ್ರಾಯಪಟ್ಟಿದೆ.
ಫೆಬ್ರವರಿಯಿಂದ ನಡೆಯುತ್ತಿರುವ ಉತ್ಖನನದಲ್ಲಿ ಇದುವರೆಗೆ ಎಂಟು ಮಾನವ ಅಸ್ಥಿಪಂಜರಗಳು, ಚಿನ್ನ ಮತ್ತು ಕಂಚಿನ ಆಭರಣಗಳು, ಮಣ್ಣಿನ ಪಾತ್ರೆಗಳು ಹಾಗೂ ಹಲವು ಪುರಾತನ ವಸ್ತುಗಳು ಪತ್ತೆಯಾಗಿವೆ. ಇವು ಶ್ರೀಮಂತರು ಅಥವಾ ಉನ್ನತ ವರ್ಗದವರ ಸಮಾಧಿ ತಾಣವಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ರಾಮ ಮಂದಿರ ಹುಂಡಿ ಕಳವು ಆರೋಪಿ ಅನುಕಲ್ಪ್ ಮಿಶ್ರಾಗೆ ಮತ್ತೊಂದು ಸಂಕಷ್ಟ; ಚಿಕ್ಕಮ್ಮನ ಮೇಲೆಯೇ ಹಲ್ಲೆ ನಡೆಸಿದ್ದ ಪಾಪಿ
ಡಾನ್ ಯೈ ಥಾಂಗ್ ಪುರಾತತ್ವ ತಾಣದ ಬಗ್ಗೆ
ಬ್ಯಾಂಕಾಕ್‌ನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ಈ ತಾಣವನ್ನು ಸ್ಥಳೀಯ ರೈತರು ಭತ್ತದ ಗದ್ದೆಯಲ್ಲಿ ಪುರಾತನ ಕಂಚಿನ ಡ್ರಮ್‌ಗಳ ತುಣುಕುಗಳನ್ನು ಪತ್ತೆಹಚ್ಚಿದ ನಂತರ ಗುರುತಿಸಲಾಯಿತು. ಬಳಿಕ ಪೂರ್ಣ ಪ್ರಮಾಣದ ಉತ್ಖನನ ಆರಂಭಿಸಲಾಯಿತು. ತಜ್ಞರ ಪ್ರಕಾರ, ಈ ತಾಣವು ಥಾಯ್ಲೆಂಡ್‌ನ ಕಬ್ಬಿಣ ಯುಗಕ್ಕೆ ಸೇರಿದ್ದು, ಸುಮಾರು 1,500ರಿಂದ 2,500 ವರ್ಷಗಳಷ್ಟು ಹಳೆಯದು. ಉತ್ಖನನವು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಪತ್ತೆಯಾದ ವಸ್ತುಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಫೈನ್ ಆರ್ಟ್ಸ್ ಇಲಾಖೆ ಚಿಂತನೆ ನಡೆಸಿದೆ.
ಭಾರತದಲ್ಲೂ ಹರಪ್ಪ ನಾಗರಿಕತೆಯ ಸಂಶೋಧನೆಗೆ ವೇಗ
ಇದೇ ವೇಳೆ, ಭಾರತದಲ್ಲಿ ಹರಿಯಾಣದ ರಾಖಿಗಢಿ ಪುರಾತತ್ವ ತಾಣದಿಂದ ಪತ್ತೆಯಾದ ಮಾನವ ಅಸ್ಥಿಪಂಜರಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮಾನವ ಶಾಸ್ತ್ರೀಯ ಸರ್ವೇಕ್ಷಣಾ ಸಂಸ್ಥೆ (AnSI)ಗೆ ವೈಜ್ಞಾನಿಕ ಅಧ್ಯಯನಕ್ಕಾಗಿ ಹಸ್ತಾಂತರಿಸಿದೆ. ಸುಮಾರು 550 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ರಾಖಿಗಢಿ, ಸಿಂಧೂ-ಸರಸ್ವತಿ ನಾಗರಿಕತೆಯ ಅತಿದೊಡ್ಡ ಪುರಾತತ್ವ ತಾಣ ಎಂದು ಪರಿಗಣಿಸಲಾಗಿದೆ. ಇಲ್ಲಿ ಸುಧಾರಿತ ನಗರ ಯೋಜನೆ, ಒಳಚರಂಡಿ ವ್ಯವಸ್ಥೆ, ಕೈಗಾರಿಕಾ ಕೇಂದ್ರಗಳು, ವ್ಯಾಪಾರ ಸಂಬಂಧಗಳು ಹಾಗೂ ಸಮಾಧಿ ತಾಣಗಳಂತಹ ಅನೇಕ ಮಹತ್ವದ ಪುರಾವೆಗಳು ಈಗಾಗಲೇ ಬೆಳಕಿಗೆ ಬಂದಿವೆ.