ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕದ ಡೆಡ್‌ಲೈನ್‌ ಕೊನೆಗೊಳ್ಳುತ್ತಿದ್ದರೂ ಬೆದರದ ಇರಾನ್‌; ಸೇತುವೆ, ವಿದ್ಯುತ್‌ ಸ್ಥಾವರದ ಸುತ್ತ ʼಮಾನವ ಕೋಟೆʼ ನಿರ್ಮಾಣ

Strait of Hormuz: ಇರಾನ್‌ನನ್ನು ಸರ್ವನಾಶ ಮಾಡುವುದಾಗಿ ಅಮೆರಿಕ ಬೆದರಿಕೆ ಒಡ್ಡಿದ ಬೆನ್ನಲ್ಲೇ ಬಿಡುವಿಲ್ಲದ ಚಟುವಟಿಕೆ ನಡೆಯುತ್ತಿದೆ. ಅಮೆರಿಕ ಮೂಲ ಸೌಲಭ್ಯಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದಿಂದ ಸಾವಿರಾರು ಸಂಖ್ಯೆಯಲ್ಲಿ ಇರಾನ್‌ ನಾಗರಿಕರು ವಿದ್ಯುತ್‌ ಸ್ಥಾವರ, ಸೇತುವೆ ಬಳಿ ಮಾನವ ಸರಪಳಿ ರಚಿಸಿದ್ದಾರೆ.

ಇರಾನ್‌ನ ಸೇತುವೆ, ವಿದ್ಯುತ್‌ ಸ್ಥಾವರದ ಸುತ್ತ ಮಾನವ ಸರಪಳಿ

ಇರಾನ್‌ನಲ್ಲಿ ರಚನೆಯಾದ ಮಾನವ ಸರಪಳಿ -

Ramesh Ballamoole
Ramesh Ballamoole Apr 7, 2026 11:04 PM

ಟೆಹರಾನ್‌, ಏ. 7: ಜಗತ್ತಿನ ಇತಿಹಾಸದಲ್ಲೇ ಪ್ರಮುಖ ದಿನವೊಂದಕ್ಕೆ ಸಾಕ್ಷಿಯಾಗುವ ಕ್ಷಣ ಸಮೀಪಿಸುತ್ತಿದ್ಯಾ? ಜಾಗತಿಕ ಭೂಪಟದಿಂದ ಇರಾನ್‌ ಕೆಲವೇ ಹೊತ್ತಲ್ಲಿ ಕಣ್ಮರೆಯಾಗಲಿದ್ಯಾ? ಅಮೆರಿಕ ಹಲವು ದಶಕಗಳ ಬಳಿಕ ಪರಮಾಣು ಬಾಂಬ್‌ ಬಳಸಲಿದ್ಯಾ? ಸದ್ಯ ಇಂತಹದ್ದೇ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತಿದ್ದು, ಅಮೆರಿಕ ಮತ್ತು ಇರಾನ್‌ನ ಮುಂದಿನ ನಡೆಯನ್ನು ಇಡೀ ಮಾನವ ಸಂಕುಲವೇ ಕುತೂಹಲ, ಆತಂಕ ತುಂಬಿದ ಕಣ್ಣುಗಳಿಂದ ನೋಡುತ್ತಿದೆ. ತನ್ನ ಬೇಡಿಕೆಯನ್ನು ಇರಾನ್‌ ಒಪ್ಪದಿದ್ದರೆ ಇಡೀ ದೇಶವನ್ನು ಸರ್ವನಾಶ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಬೆದರಿಕೆ ಹಾಕಿದ್ದು, ಇದಕ್ಕಾಗಿ ಗಡುವು ಕೂಡ ನೀಡಿದ್ದಾರೆ. ಈ ಡೆಡ್‌ಲೈನ್‌ ಒಳಗೆ ಇರಾನ್‌ ಶರಣಾಗದಿದ್ದರೆ ವಿದ್ಯುತ್‌ ಸ್ಥಾವರ, ತೈಲ ಸಂಗ್ರಹಾಗಾರ, ಸೇತುವೆ ಸೇರಿದಂತೆ ಮೂಲ ಸೌಲಭ್ಯಗಳ ಮೇಲೆ ಭೀಕರ ದಾಳಿ ಮಾಡುವುದಾಗಿ ಅಮೆರಿಕ ಎಚ್ಚರಿಸಿದೆ. ಈ ಗಡುವು ಇನ್ನೇನು ಕೆಲವೇ ಗಂಟೆಗಳಲ್ಲಿ ಮುಗಿಯಲಿದ್ದು ಇರಾನ್‌ ಕ್ಯಾರೇ ಎನ್ನುತ್ತಿಲ್ಲ. ಅದರ ಬದಲಾಗಿ ತಮ್ಮ ದೇಶ ರಕ್ಷಣೆಗಾಗಿ ನಾಗರಿಕರು ಮುಂದೆ ಬಂದಿದ್ದಾರೆ.

ಇದೀಗ ಇರಾನ್‌ ನಾಗರಿಕರು ವಿದ್ಯುತ್‌ ಸ್ಥಾವರ, ತೈಲ ಸಂಗ್ರಹಾಗಾರ, ಸೇತುವೆಯತ್ತ ಸಾವಿರಾರು ಸಂಖ್ಯೆಯಲ್ಲಿ ಧಾವಿಸುತ್ತಿದ್ದು, ಮಾನವ ಸರಪಳಿ ರಚಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಇರಾನ್‌ನಲ್ಲಿ ಮಾನವ ಸರಪಳಿ:



ಜಮಾಯಿಸಿದ ನಾಗರಿಕರು

ಹೊರ್ಮುಜ್‌ ಜಲಸಂಧಿಯನ್ನು ತೆರೆಯದಿದ್ದರೆ ಮೂಲ ಸೌಲಭ್ಯಗಳನ್ನು ಧ್ವಂಸ ಮಾಡುವುದಾಗಿ ಟ್ರಂಪ್‌ ಬೆದರಿಕೆ ಹಾಕಿದ್ದರೂ ಇರಾನ್‌ ಇದಕ್ಕೆ ಸೊಪ್ಪೇ ಹಾಕುತ್ತಿಲ್ಲ. ಇರಾನ್‌ನ ಸ್ಟೇಟ್‌ ಮೀಡಿಯಾ ಪ್ರೆಸ್‌ ಟಿವಿ ಹಂಚಿಕೊಂಡ ವಿಡಿಯೊದಲ್ಲಿ ನಾಗರಿಕರು ದೇಶದ ಬಾವುಟ ಹಿಡಿದು, ವಿದ್ಯುತ್‌ ಸ್ಥಾವರ ಬಳಿ, ಸೇತುವೆ ಮೇಲೆಲ್ಲ ಜಮಾಯಿಸಿರುವುದು ಕಂಡು ಬಂದಿದೆ. ಸಾವಿರಾರು ಮಂದಿ ಸೇರಿ ಮಾನವ ಕೋಟೆಯನ್ನೇ ಕಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ಇರಾನ್‌ ಸರ್ಕಾರ ದೇಶ ರಕ್ಷಣೆಗೆ ಧಾವಿಸುವಂತೆ ಕರೆ ನೀಡಿತ್ತು. ಮೂಲ ಸೌಲಭ್ಯಗಳ ಬಳಿ ಮಾನವ ಸರಪಳಿ ರಚಿಸುವಂತೆ ಸೂಚಿಸಿತ್ತು. ಅದರಂತೆ ಸಾವಿರು ಸಂಖ್ಯೆಯಲ್ಲಿ ಜನರು ಬೀದಿಗಿಳಿದಿದ್ದಾರೆ.

ಮಾನವ ಸರಪಳಿ ರಚಿಸಿದ ಇರಾನ್‌ ನಾಗರಿಕರು:



ದೇಶಕ್ಕಾಗಿ ಹೋರಾಡಲು 1.4 ಕೋಟಿ ಜನರು ಸಿದ್ಧ

ಈ ಮಧ್ಯೆ ಅಮೆರಿಕ ವಿರುದ್ಧ ಹೋರಾಡಲು ಇರಾನ್‌ನ 1.4 ಕೋಟಿ ಮಂದಿ ಧಾವಿಸಿದ್ದಾರೆ. ʼʼಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಕುರಿತು ಅಮೆರಿಕ ವಿಧಿಸಿರುವ ಗಡುವಿಗೆ ಮುನ್ನವೇ ಉದ್ವಿಗ್ನತೆ ಹೆಚ್ಚುತ್ತಿದ್ದು, ದೇಶವನ್ನು ರಕ್ಷಿಸಲು 1.4 ಕೋಟಿಗೂ ಹೆಚ್ಚು ನಾಗರಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಮುಂದೆ ಬಂದಿದ್ದಾರೆʼʼ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮಂಗಳವಾರ ಹೇಳಿದ್ದಾರೆ.

"ಮುಂದಿನ 12 ಗಂಟೆಗಳ ಕಾಲ ರೈಲು ಪ್ರಯಾಣದಿಂದ ದೂರವಿರಿ"; ಇರಾನ್‌ ನಾಗರಿಕರಿಗೆ ಇಸ್ರೇಲ್‌ ಸೂಚನೆ

ಸದ್ಯ ಅಮೆರಿಕ ವಿಧಿಸಿರುವ ಗಡುವು ಮುಗಿಯುತ್ತಿದ್ದರೂ ಇರಾನ್‌ ಸ್ವಲ್ಪವೂ ಹಿಂಜರಿಯುತ್ತಿಲ್ಲ. ಇರಾನ್ ಈಗಾಗಲೇ ಪ್ರಸ್ತಾವಿತ ಕದನ ವಿರಾಮವನ್ನು ತಿರಸ್ಕರಿಸಿದೆ ಮತ್ತು ಸಂಘರ್ಷಕ್ಕೆ ಶಾಶ್ವತ ಅಂತ್ಯ ಹಾಡಲು ಕರೆ ನೀಡಿದೆ. ಅಮೆರಿಕ ಸದ್ಯ ಇರಾನ್‌ ಮೇಲೆ ಪರಮಾಣು ಶಸ್ತ್ರಾಸ್ತ್ರ ಬಳಸುತ್ತ ಎನ್ನುವ ಅನುಮಾನ ಕಾಡುತ್ತಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.